Sunday, 11th May 2025

SM Krishna Death: ರಾಜಕೀಯ ಗುರು ಎಸ್‌ಎಂ ಕೃಷ್ಣ ಅವರನ್ನು ನೆನೆದು ನಟಿ ರಮ್ಯ ಭಾವುಕ ಪೋಸ್ಟ್‌

ramya sm krishna

ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ, ತಮ್ಮ ರಾಜಕೀಯ ಗುರು ಎಸ್‌ಎಂ ಕೃಷ್ಣ (SM Krishna Death) ಅವರನ್ನು ನೆನೆದು ನಟಿ ರಮ್ಯಾ (actress Ramya) ಅವರು ಸೋಶಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್‌ ಹಾಕಿದ್ದಾರೆ.

“ಅವರು ರಾಜಕಾರಣಿಯಾಗರಲಿಲ್ಲ, ಎಲ್ಲ ಅರ್ಥದಲ್ಲೂ ಮುತ್ಸದ್ದಿಯಾಗಿದ್ದವರು. ಯಾರ ಬಗ್ಗೆ ಕೆಟ್ಟದ್ದು ಮಾತಾಡಲಿಲ್ಲ, ತಮ್ಮ ಎದುರಾಳಿಗಳ ಬಗೆಗೆ ಸಹ. ದೂರದೃಷ್ಟಿ, ಕರುಣೆ, ಸಹಾನುಭೂತಿ, ವಾಕ್ಪಟುತ್ವ, ಓದಿನ ಹರಹು, ಹಾಸ್ಯಪ್ರಜ್ಞೆಗಳ ಸಂಗಮವಾಗಿದ್ದರು. ಅವರಂತೆ ಇನ್ನೊಬ್ಬರಿಲ್ಲ. ನಿಮ್ಮ ಎಲ್ಲ ಕೊಡುಗೆಗಳಿಗಾಗಿ ಕೃತಜ್ಞತೆಗಳು. ನೀವೀಗ ನಿಮ್ಮ ಬೆಸ್ಟ್‌ ಫ್ರೆಂಡ್‌ ಜೊತೆಗಿದ್ದೀರಿ” ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ರಮ್ಯಾ ಅವರು ಕೃಷ್ಣ ಅವರನ್ನು ರಾಜಕೀಯ ಗುರು ಎಂದೇ ಭಾವಿಸಿದ್ದರು. ಕಾಂಗ್ರೆಸ್‌ನಲ್ಲಿದ್ದಾಗ ಅವರು ಕೃಷ್ಣ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದರು. ನಿನ್ನೆ ಕೃಷ್ಣ ಅವರು ತೀರಿಕೊಂಡ ಬಳಿಕ, ಅವರ ಅಂತಿಮ ದರ್ಶನಕ್ಕೆ ಧಾವಿಸಿ ಬಂದಿದ್ದರು. ಕೃಷ್ಣ ಅವರು ತೀವ್ರ ಅಸೌಖ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿದ್ದಾಗಲೂ ಅಲ್ಲಿಗೆ ರಮ್ಯ ಭೇಟಿ ನೀಡಿದ್ದರು.

ಸಂಜೆ ಅಂತಿಮಸಂಸ್ಕಾರ

ಮಧ್ಯಾಹ್ನ 3 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮದ್ದೂರಿನ ಸೋಮನಹಳ್ಳಿಯಲ್ಲಿ ಎಸ್‌ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಟೌನ್ ಹಾಲ್‌ನಿಂದ ಬೆಳಗ್ಗೆ ಹೊರಟ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರ ಬಿಡದಿ, ರಾಮನಗರ, ಚನ್ನಪಟ್ಟಣ ಮೂಲಕ ಸಾಗಿ ಮದ್ದೂರನ್ನು ತಲುಪಿದೆ. ದಾರಿಯಲ್ಲಿ ಅಭಿಮಾನಿಗಳು, ಹಿತೈಶಿಗಳಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕೃಷ್ಣ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಬಂದೋಬಸ್ತ್ ಗಾಗಿ ಅಂತ್ಯಕ್ರಿಯೆ ಸ್ಥಳದಲ್ಲಿ ಮಂಡ್ಯ ಜಿಲ್ಲೆಯ ಪೊಲೀಸರಲ್ಲದೇ ಹೊರ ಜಿಲ್ಲೆಗಳಿಂದಲೂ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್ ಪಿ, ಮೂವರು ಹೆಚ್ಚುವರಿ ಎಸ್ಪಿ ಹಾಗೂ 10 ಡಿವೈಎಸ್ಪಿಗಳನ್ನು ನಿಯೋಜಿಸಲಾಗಿದೆ.

ಇದಲ್ಲದೇ 70 ಪಿಎಸ್ಐ, 700 ಪೊಲೀಸ್ ಸಿಬ್ಬಂದಿ, 6 ಕೆಎಸ್ ಆರ್ ಪಿ, 6 ಡಿಎಎರ್ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ಅವರು ಅಂತ್ಯಕ್ರಿಯೆ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಇಂದು ಮದ್ದೂರಲ್ಲಿ ಸ್ವಯಂ ಪ್ರೇರಿತ ಬಂದ್

ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಮದ್ದೂರು ಪಟ್ಟಣದಲ್ಲಿ ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ. ಮದ್ದೂರು ಬಂದ್ ಗೆ ವರ್ತಕರು, ಬೀದಿ ಬದಿಯ ವ್ಯಾಪಾರಿಗಳು, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಸಂಘದಿಂದ ಬೆಂಬಲ ಸೂಚಿಸಲಾಗಿದೆ. ಒಕ್ಕಲಿಗರ ಸಂಘ, ದಲಿತಪರ ಸಂಘಟನೆಗಳೂ ಇಂದಿನ ಮದ್ದೂರು ಬಂದ್ ಗೆ ಬೆಂಬಲ ಸೂಚಿಸಿವೆ. ಇಂದು ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗರ ಸಂಪ್ರದಾಯದಂತೆ ನೆರವೇರಿಸಲಾಗುತ್ತಿದೆ.

ಇದನ್ನೂ ಓದಿ: SM Krishna Death: ಎಸ್‌ಎಂ ಕೃಷ್ಣ ನಿಧನಕ್ಕೆ ರಾಜ್ಯದಲ್ಲಿ 3 ದಿನ ಶೋಕಾಚರಣೆ, ನಾಳೆ ಶಾಲೆ- ಕಾಲೇಜು- ಕಚೇರಿಗಳಿಗೆ ರಜೆ