Thursday, 15th May 2025

SM Krishna Death: ರಾಜ್‌ಕುಮಾರ್‌ ಅಪಹರಣ ಪ್ರಕರಣವನ್ನು ಎಸ್‌ಎಂ ಕೃಷ್ಣ ಎದುರಿಸಿದ್ದು ಹೇಗೆ?

ಬೆಂಗಳೂರು: ಇಂದು ಮುಂಜಾನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna Death) ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಪ್ರಮುಖ ಬಿಕ್ಕಟ್ಟುಗಳನ್ನು ಎದುರಿಸಿದ್ದರು. ಕಾಡುಗಳ್ಳ ವೀರಪ್ಪನ್‌ನಿಂದ (Veerappan) ವರನಟ ಡಾ. ರಾಜ್‌ಕುಮಾರ್‌ (Dr Rajkumar) ಅವರ ಅಪಹರಣ ಅವುಗಳಲ್ಲಿ ಪ್ರಮುಖವಾದುದಾಗಿತ್ತು.

2000ನೇ ಇಸವಿಯ ಜುಲೈ 30ರಂದು ವೀರಪ್ಪನ್‌, ಆಗ ತಮ್ಮ ಹುಟ್ಟೂರು ಗಾಜನೂರಿನ ತಮ್ಮ ಮನೆಯಲ್ಲಿದ್ದ ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದ. ಅವರನ್ನು ಸೆರೆಯಿಂದ ಬಿಡಬೇಕಿದ್ದರೆ ಈಡೇರಿಸಲಾಗದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ. ಇದರಿಂದ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿತ್ತು. ರಾಜ್‌ ಅವರಿಗೆ ಕಾಡಿನಲ್ಲಿ ಏನೇ ಆದರೂ ಅದರ ದುಷ್ಪರಿಣಾಮ ಕೃಷ್ಣ ಅವರ ಮೇಲೆ ಆಗಬಹುದಿತ್ತು. ನಾಜೂಕಾಗಿ ಈ ಪರಿಸ್ಥಿತಿಯನ್ನು ಅವರು ನಿರ್ವಹಿಸಿದರು.

ಆಗ ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಎಸ್‌ಕೃಷ್ಣ ಕೂಡಲೇ ತಮಿಳುನಾಡಿಗೆ ಧಾವಿಸಿ ಕರುಣಾನಿಧಿ ಅರ ಜೊತೆಗೂಡಿ ಈ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಿದರು. ಅತ್ತ ಕಾನೂನು ಸುವ್ಯವಸ್ಥೆ ಕುಸಿಯದಂತೆಯೂ ನೋಡಿಕೊಂಡರು. ಅನೇಕ ಗಾಳಿಸುದ್ದಿಗಳ ನಡುವೆ ಕರ್ನಾಟಕದಲ್ಲಿರುವ ತಮಿಳರು ಹಾಗೂ ತಮಿಳುನಾಡಿನಲ್ಲಿರುವ ಕನ್ನಡಿಗರ ಸುರಕ್ಷತೆಯೂ ಕೆಡದಂತೆ ನೋಡಿಕೊಂಡರು.

ಈ ನಡುವೆ, ರಾಜ್‌ಕುಮಾರ್‌ ಅವರ ಅಪಹರಣ ಆಗಬಹುದು ಎಂಬ ಇಂಟಲಿಜನ್ಸ್‌ ವರದಿಗಳಿದ್ದರೂ ಅವರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದುದಕ್ಕಾಗಿ ಸುಪ್ರೀಂ ಕೋರ್ಟ್‌ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಇದರಿಂದ ಕೃಷ್ಣ ಮುಖಭಂಗ ಅನುಭವಿಸಿದರು. ಆದರೆ ಸರ್ಕಾರ ರಾಜ್‌ಕುಮಾರ್ ಅವರಿಗೆ ಸೂಕ್ತ‌ ಭದ್ರತೆ ಕೊಡಲು ಮುಂದಾಗಿದ್ದರೂ, ರಾಜ್‌ ಅವರೇ ಅದನ್ನು ನಿರಾಕರಿಸಿದ್ದರು. ತಾವು ಹುಟ್ಟೂರಿಗೆ ಭೇಟಿ ಕೊಡುವ ವಿಷಯವನ್ನೂ ಪೊಲೀಸರಿಗೆ ತಿಳಿಸಿರಲಿಲ್ಲ.

ಕಡೆಗೂ 108 ದಿವಸಗಳ ಸೆರೆವಾಸದ ನಂತರ 15 ನವೆಂಬರ್‌ 2000ದಂದು ರಾಜ್‌ಕುಮಾರ್‌ ಬಿಡುಗಡೆಯಾಗಿ, ಕೃಷ್ಣ ನಿಟ್ಟುಸಿರುಬಿಟ್ಟರು. ಇದಕ್ಕಾಗಿ ವೀರಪ್ಪನ್‌ನ ಯಾವ ಯಾವ ಬೇಡಿಕೆಗಳನ್ನು ಈಡೇರಿಸಲಾಯಿತು ಎಂಬುದು ಇದುವರೆಗೂ ನಿಗೂಢವಾಗಿ ಉಳಿದಿದೆ. ರಾಜ್‌ ಅಪಹರಣದ ನಂತರ ಪಾರ್ವತಮ್ಮ ಅವರ ಮೂಲಕ ಕೃಷ್ಣ ಅವರಿಗೆ ಕಳಿಸಲಾದ ಆಡಿಯೋ ಟೇಪ್‌ನಲ್ಲಿ ವೀರಪ್ಪನ್‌, 50 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ ಹಾಗೂ ಜೈಲಿನಲ್ಲಿದ್ದ ತನ್ನ ಸಹಚರರ ಬಿಡುಗಡೆಗೆ ಬೇಡಿಕೆ ಮಂಡಿಸಿದ್ದ ಎಂದು ಹೇಳಲಾಗಿತ್ತು. ಸಹಚರರನ್ನು ಬಿಡುಗಡೆ ಮಾಡಲು ಕೋರ್ಟ್‌ ಒಪ್ಪಿರಲಿಲ್ಲ. ಹಣವನ್ನು ನೀಡಲಾಯಿತೇ ಎಂಬ ಬಗ್ಗೆ ಎಸ್‌ಎಂ ಕೃಷ್ಣ ಸೇರಿದಂತೆ ಕೊನೆಗೂ ಯಾರೂ ಬಾಯಿ ಬಿಡಲಿಲ್ಲ. ಕೃಷ್ಣ ತಮ್ಮ ಅಳಿಯನ ಮೂಲಕ ಕೋಟ್ಯಂತರ ರೂಪಾಯಿ ಹಣವನ್ನು ಕಳಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

ಇದನ್ನೂ ಓದಿ: SM Krishna: ರಾಜ್ಯ ಕಂಡ ಅಪರೂಪದ ರಾಜಕಾರಣಿ; ಹೀಗಿದೆ ಎಸ್.ಎಂ. ಕೃಷ್ಣ ನಡೆದು ಬಂದ ಹಾದಿ