ವಿಜಯಪುರ: ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ (Self Harming) ಜಿಲ್ಲೆಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಬಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮಕ್ಕಳು ಜಲಸಮಾಧಿಯಾಗಿದ್ದು, ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಬಳಿಯ ಬೇನಾಳ ಬ್ರಿಜ್, ಪಾರ್ವತಿಕಟ್ಟಾ ಸೇತುವೆ ಸಮೀಪ ಘಟನೆ ನಡೆದಿದೆ. ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸೇನ್ ನಿಂಗರಾಜ ಭಜಂತ್ರಿ ಹಾಗೂ ಹುಸೇನ್ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ಮಕ್ಕಳೊಂದಿಗೆ ಕಾಲುವೆಗೆ ಬಿದ್ದಿದ್ದ ಭಾಗ್ಯ ಎಂಬಾಕೆಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಮಕ್ಕಳನ್ನು ಕಳೆದುಕೊಂಡ ತಂದೆ ನಿಂಗರಾಜ ಭಜಂತ್ರಿ ಪ್ರತಿಕ್ರಿಯಿಸಿ, ನೆನ್ನೆ ಅಣ್ಣ- ತಮ್ಮಂದಿರ ನಡುವೆ ಜಗಳವಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದಿತ್ತು. ಜಗಳದ ಬಳಿಕ ನಾನು ಇಲ್ಲದ ವೇಳೆ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆ ರೀತಿ ಮಾಡಿಕೊಳ್ಳದಂತೆ ನಾನೇ ಬುದ್ಧಿ ಮಾತು ಹೇಳಿದ್ದೆ. ಇಂದು ಕುಟುಂಬ ಸಮೇತ ಬೈಕ್ನಲ್ಲಿ ದೇವಸ್ಥಾನಕ್ಕೆ ಬಂದಿದ್ದೆವು. ಪೆಟ್ರೋಲ್ ಖಾಲಿಯಾಗಿದ್ದರಿಂದ ಅವರಿಗೆ ಇಲ್ಲಿಯೇ ಇರುವಂತೆ ಹೇಳಿ ನಾನು ಮುಂದೆ ತೆರಳಿದ್ದೆ. ಈ ವೇಳೆ ಹೆಂಡತಿ, ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ತಿಳಿಸಿದ್ದಾರೆ.
ಮಹಿಳೆ ಭಾಗ್ಯಳನ್ನು ರಕ್ಷಿಸಿ ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಕಾಲುವೆಯಲ್ಲಿ ಮಕ್ಕಳ ಮೃತ ದೇಹಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧಕಾರ್ಯ ಮುಂದುವರೆದಿದೆ.
ಈ ಸುದ್ದಿಯನ್ನೂ ಓದಿ | India-China: LAC ಬಳಿ ಚೀನಾ ಸಮರಾಭ್ಯಾಸ ; ಭಾರತೀಯ ಸೇನೆ ಫುಲ್ ಅಲರ್ಟ್
ಸಂತೆಯ ಸ್ವೀಟ್ ಶಾಪ್‌ನಲ್ಲಿ ಗೋಮಾಂಸ ಮಾರಾಟ; ಅಸ್ಸಾಂ ಮೂಲದ ಇಬ್ಬರು ಅರೆಸ್ಟ್

ಚಿಕ್ಕಮಗಳೂರು: ಸಂತೆಯಲ್ಲಿ ಸಿಹಿತಿಂಡಿ ಮಾರುವ ನೆಪದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿರುವ ಘಟನೆ (Selling Beef) ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಬಣಕಲ್ ವಾರದ ಸಂತೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಗೋಮಾಂಸ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೆಯಲ್ಲಿ ಸಿಹಿ ತಿಂಡಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಗಳು ಅದೇ ಅಂಗಡಿಯಲ್ಲಿ ಗೌಪ್ಯವಾಗಿ ದನದ ಮಾಂಸದ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಬಣಕಲ್ ಪೊಲೀಸರು ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ ಕಪ್ಪು ಬಣ್ಣದ ಬ್ಯಾಗ್ ಒಂದರಲ್ಲಿ ದನದ ಮಾಂಸದ ಪ್ಯಾಕೆಟ್‌ಗಳು ಕಂಡು ಬಂದಿದ್ದವು. ಹೀಗಾಗಿ ಅಸ್ಸಾಂ ಮೂಲದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯರು ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಬಣಕಲ್ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದಾರೆ. ಅಸ್ಸಾಂ ಮೂಲದವರಿಗೆ ಸಂತೆಯಲ್ಲಿ ವ್ಯಾಪಾರ ಮಾಡಲು ಲೈಸೆನ್ಸ್ ಕೊಟ್ಟಿದ್ದು ಯಾರು? ಅವರು ಲೈಸೆನ್ಸ್ ಪಡೆದು ವ್ಯಾಪಾರ ಮಾಡುತ್ತಿದ್ದಾರೋ, ಅಥವಾ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದಾರೋ ? ಈ ಬಗ್ಗೆ ಹಿಂದೆಯೇ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಯಾಕೆ ಕ್ರಮ ವಹಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಬಾಂಗ್ಲಾ ಮೂಲದವರು ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಕಾಫಿ ಎಸ್ಟೇಟ್‌ಗಳಲ್ಲಿ ಸೇರಿಕೊಂಡಿದ್ದಾರೆ ಎಂಬ ಅರೋಪ ಕೇಳಿಬಂದಿದೆ. ಇತ್ತೀಚಿನ ದಿನಗಳಲ್ಲಿ ಕಾಫಿನಾಡಿಗೆ ದೊಡ್ಡ ಪ್ರಮಾಣದಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಬರುತ್ತಿದ್ದು, ಇದರಲ್ಲಿ ಬಹುತೇಕರು ಬಾಂಗ್ಲಾ ನುಸುಳುಕೋರರು ಎನ್ನಲಾಗುತ್ತಿದೆ.