Wednesday, 14th May 2025

School Holidays: ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ಶಾಲಾ-ಕಾಲೇಜುಗಳಿಗೆ ಮತ್ತೆ 6 ದಿನ ರಜೆ, ಯಾವಾಗಿನಿಂದ?

School Holidays

ಬೆಂಗಳೂರು: ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳ (School Holidays) ಬಳಿಕ ಶಾಲೆಗಳು ಪುನರಾರಂಭವಾಗಿವೆ. ಈ ನಡುವೆ ಮತ್ತೊಮ್ಮೆ 6 ದಿನಗಳ ಕಾಲ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ.

ಹೌದು, ನವೆಂಬರ್‌ 13ರಿಂದ 18ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ ಎನ್ನಲಾಗಿದೆ. ರಾಜ್ಯದಲ್ಲಿ 2024ರ ಶೈಕ್ಷಣಿಕ ವರ್ಷದ ಪ್ರಕಾರ ನವೆಂಬರ್‌ 13ರಂದು ತುಳಸಿ ಪೂಜೆ ಇದೆ. ಇದಾದ ಬಳಿಕ ನ.14ರಂದು ಮಕ್ಕಳ ದಿನಾಚರಣೆ ಸರ್ಕಾರಿ ರಜೆ ಇರಲಿದೆ. ನ. 15ರಂದು ಗುರುನಾನಕ್‌ ಜಯಂತಿ ಇರಲಿದ್ದು, ನ. 16ರಂದು ಶನಿವಾರ ಕೇವಲ ಅರ್ಧ ದಿನ ಮಾತ್ರ ಶಾಲೆ ಇರಲಿದೆ. ನಂತರ ನವೆಂಬರ್‌ 17ರಂದು ಭಾನುವಾರ ರಜೆ ಸಿಗಲಿದೆ. ಜತೆಗೆ ನವೆಂಬರ್‌ 18ರಂದು ಕನಕದಾಸ ಜಯಂತಿ ಆಚರಿಸಲಾಗುತ್ತದೆ.

ಹೀಗಾಗಿ ರಾಜ್ಯದ ಶಾಲಾ-ಕಾಲೇಜುಗಳಿಗೆ 6 ದಿನ ರಜೆ ಸಿಗಲಿದ್ದು, ಮಕ್ಕಳಿಗೆ ಇನ್ನಷ್ಟು ಖುಷಿಯಾಗಲಿದೆ. 2024ರ ಶೈಕ್ಷಣಿಕ ವರ್ಷದ ಪ್ರಕಾರ ಕ್ಯಾಲೆಂಡರ್‌ನಲ್ಲಿ ನೀಡಲಾದ ಮಾಹಿತಿಯನ್ನಷ್ಟೇ ಇಲ್ಲಿ ನೀಡಲಾಗಿದೆ. ರಜೆ ನೀಡುವುದು ಶಿಕ್ಷಣ ಸಂಸ್ಥೆಗಳ ಪರಿಗಣನೆಗೆ ಬಿಟ್ಟಿರುವುದಾಗಿದೆ.

ಈ ಸುದ್ದಿಯನ್ನೂ ಓದಿ | Aadhar Card update: 10 ವರ್ಷಗಳಿಂದ ಆಧಾರ್​ ಕಾರ್ಡ್ ಅಪ್‌ಡೇಟ್‌ ಮಾಡಿಲ್ವಾ? ಕೊನೆಯ ದಿನ, ವಿವರ ಇಲ್ಲಿದೆ

ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟು ಬ್ಲಾಕ್‌ ದಂಧೆ: ಕ್ರಿಮಿನಲ್‌ ಕೇಸು ದಾಖಲು

mc sudhakar

ಬೆಂಗಳೂರು: ಕೆಲವು ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳನಲ್ಲಿ (Engineering college) ಸೀಟು ಬ್ಲಾಕಿಂಗ್‌ ದಂಧೆ (Seat Blocking) ನಡೆದಿರುವ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಕ್ರಿಮಿನಲ್‌ ಕೇಸು (Criminal case) ದಾಖಲಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ (DR MC Sudhakar) ಹೇಳಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರಸಕ್ತ ಸಾಲಿನ ಕೌನ್ಸೆಲಿಂಗ್‌ನಲ್ಲಿ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲೇ ಭಾರೀ ಬೇಡಿಕೆಯ ಎಂಜಿನಿಯರಿಂಗ್‌ ಕೋರ್ಸುಗಳಿಗೆ ಸೀಟು ಸಿಕ್ಕರೂ ಅನೇಕ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಇದರ ಹಿಂದೆ ವ್ಯವಸ್ಥಿತ ಜಾಲದಿಂದ ‘ಸೀಟ್‌ ಬ್ಲಾಕಿಂಗ್‌’ ಹಗರಣ ನಡೆಸಿರುವ ಅನುಮಾನವಿದ್ದು, ಈ ಸಂಬಂಧ ಕ್ರಿಮಿನಲ್‌ ದೂರು ದಾಖಲಿಸಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೆಲವೆಡೆ ಒಂದೇ ಐಪಿ ವಿಳಾಸದಲ್ಲಿ 10ಕ್ಕೂ ಹೆಚ್ಚು ಸೀಟುಗಳನ್ನು ಬ್ಲಾಕ್‌ ಮಾಡಲಾಗಿದೆ. ಅಂತಹ ಐಪಿ ಅಡ್ರೆಸ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ ಎಂದರು.

ಕೆಇಎ ನಡೆಸಿದ 3ನೇ ಸುತ್ತಿನ ಮಾಪ್‌ಅಪ್‌ ಸೀಟು ಹಂಚಿಕೆಯಲ್ಲಿ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿಯಂತಹ ಅತಿ ಹೆಚ್ಚು ಬೇಡಿಕೆ ಇರುವ ಎಂಜಿನಿಯರಿಂಗ್ ಕೋರ್ಸ್‌ಗಳು ಪ್ರತಿಷ್ಠಿತ ಕಾಲೇಜುಗಳಲ್ಲೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿವೆ. ಹೀಗೆ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಕಡ್ಡಾಯವಾಗಿದ್ದರೂ ಆಯಾ ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ. ಅಂತಹ 2348 ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಲಾಗಿದೆ.

ಈ ನೋಟಿಸ್‌ಗೆ ಶೇ.50ರಷ್ಟು ಮಂದಿ ಉತ್ತರ ನೀಡಿದ್ದು, ಕೆಲ ವಿದ್ಯಾರ್ಥಿಗಳು ನಾವು ಸೀಟು ಆಯ್ಕೆ ಪ್ರಕ್ರಿಯೆಯಲ್ಲೇ ಭಾಗವಹಿಸಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಅಂತಹ ವಿದ್ಯಾರ್ಥಿಗಳ ಹೆಸರಲ್ಲಿ ಸೀಟು ಆಯ್ಕೆ ನಡೆದಿರುವ ಐಪಿ ವಿಳಾಸಗಳನ್ನು ಪತ್ತೆ ಮಾಡಲಾಗಿದೆ. ಒಂದೇ ಐಪಿ ವಿಳಾಸದಿಂದ ಹತ್ತಕ್ಕೂ ಹೆಚ್ಚು ಸೀಟ್ ಬ್ಲಾಕಿಂಗ್ ಪ್ರಕ್ರಿಯೆಗಳು ನಡೆದಿದೆ. ಇದೆಲ್ಲವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವ್ಯವಸ್ಥಿತ ಜಾಲ ಇದರ ಹಿಂದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಐಪಿ ವಿಳಾಸಗಳ ವಿರುದ್ಧವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದೆ ಎಂದು ತಿಳಿಸಿದರು.

ಸಚಿವರು ನೀಡಿದ ಮಾಹಿತಿ ಪ್ರಕಾರ, ಕೆಲವು ಕಾಲೇಜುಗಳಲ್ಲಿ ಕನಿಷ್ಠ 20ರಿಂದ ಗರಿಷ್ಠ 92 ಸೀಟುಗಳವರೆಗೆ ಸೀಟುಗಳು ಬ್ಲಾಕ್‌ ಆಗಿವೆ. ಅಂದರೆ ಹಂಚಿಕೆಯಾದ ಸೀಟಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದೆ ಅವು ಭರ್ತಿಯಾಗದೆ ಬಾಕಿ ಉಳಿದಿವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.

ಈ ರೀತಿ ಪ್ರವೇಶ ಪಡೆಯದ ಸೀಟುಗಳ ಪೈಕಿ ಕಂಪ್ಯೂಟರ್‌ ಸೈನ್ಸ್‌, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಸೇರಿದಂತೆ ಅತಿ ಹೆಚ್ಚು ಬೇಡಿಕೆಯ ಕೋರ್ಸಿನ ಸೀಟುಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇದೇ ಸೀಟ್‌ ಬ್ಲಾಕ್‌ ಹಗರಣದ ಸಂಶಯಕ್ಕೆ ಕಾರಣವಾಗಿದೆ ಎಂದು ಸಚಿವರು ವಿವರಿಸಿದರು. ತನಿಖೆ ಬಳಿಕ ಇದರಲ್ಲಿ ಕಾಲೇಜುಗಳ ಪಾತ್ರವಿದೆಯಾ ಅಥವಾ ಯಾವ ವ್ಯವಸ್ಥಿತ ಜಾಲವಿದೆ ಎಂಬುದು ಹೊರಬರಲಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.

ಇದನ್ನೂ ಓದಿ: KCET Counselling 2024: ಕೆಸಿಇಟಿ ಕೌನ್ಸೆಲಿಂಗ್‌ನ 2ನೇ ವಿಸ್ತೃತ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ