ತುಮಕೂರು: ಬೆಂಗಳೂರಿನಲ್ಲಿ ರೋಲರ್ ಸ್ಕೇಟಿಂಗ್ ಫೆಡರೇಷನ್ ಅಫ್ ಇಂಡಿಯಾ ವತಿಯಿಂದ ಡಿಸೆಂಬರ್ 5 ರಿಂದ 15ರವರೆಗೆ ಆಯೋಜಿಸಿರುವ 62ನೇ ನ್ಯಾಷನಲ್ ರೊಲರ್ ಸ್ಕೇಟಿಂಗ್ ಚಾಂಪಿಯನ್ಶಿಫ್-2024ರಲ್ಲಿ (Roller Skating) ತುಮಕೂರಿನ ಪ್ರತಿಭೆ ಜಯತೀಷ್ಣ.ಟಿ.ಜಿ., ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದಿದ್ದಾರೆ.
ಜಯತೀಷ್ಣ.ಟಿ.ಜಿ. ಅವರು ವಿದ್ಯಾನಿಧಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಈ ಹಿಂದೆ ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಡರ್ಬಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದರು.
ಕಲ್ಪತರು ನಾಡಿನಲ್ಲಿ ಮೊಳಗಿದ ಹನುಮ ನಾಮ ಸ್ಮರಣೆ

ತುಮಕೂರು: ಕಲ್ಪತರುನಾಡಿನ ವಿವಿಧೆಡೆ ಶುಕ್ರವಾರ ಮುಂಜಾನೆಯಿಂದಲೇ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸುವ ಮೂಲಕ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಗೇಟ್ನಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ಬಿ.ಎಚ್. ರಸ್ತೆಯ ಆರ್ಟಿಓ ಕಚೇರಿ ಮುಂಭಾಗದಲ್ಲಿರುವ ವರಪ್ರಸಾದ ವೀರಾಂಜನೇಯ ಸ್ವಾಮಿ ದೇಗುಲ, ಶ್ರೀರಾಮನಗರದ ಕಿಕ್ಕೇರಿ ಆಂಜನೇಯಸ್ವಾಮಿ ದೇವಾಲಯ, ಬಟವಾಡಿ ಸಮೀಪದ ಭಕ್ತಾಂಜನೇಯಸ್ವಾಮಿ ದೇವಾಲಯ, ವಿದ್ಯಾನಗರದ ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನ, ಹನುಂತಪುರದ ಬಯಲಾಂಜನೇಯಸ್ವಾಮಿ ದೇವಾಲಯ, ಬನಶಂಕರಿಯ ಮಾರುತಿ ದೇವಾಲಯ, ಮೆಳೇಕೋಟೆಯ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಕದಿಗೆ ಹನುಮ ನಾಮ ಸ್ಮರಣೆ, ವೇದ ಘೋಷಗಳು, ಭಜನೆಗಳು ಮೊಳಗಿದವು.
ಹನುಮ ಜಯಂತಿ ಅಂಗವಾಗಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಹೋಮ ಹವನ, ಭಜನಾ ಕಾರ್ಯಕ್ರಮಗಳು ನಡೆದಿದ್ದು, ಆಂಜನೇಯಸ್ವಾಮಿ ವಿಗ್ರಹ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ವಿಶೇಷತೆ ಎಂದರೆ ಗರ್ಭಗುಡಿಯ ಒಳಗೆ ಹನುಮನ ಎರಡು ಮೂರ್ತಿಗಳಿವೆ. ಬೆಳಗ್ಗೆಯಿಂದಲೇ ಭಕ್ತಾದಿಗಳು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ಮಂಗಳಾರತಿ, ಪ್ರಾಕಾರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ವಿಶೇಷವಾಗಿ ಬಗೆ ಬಗೆಯ ಹೂವುಗಳಿಂದ ಅಲಂಕರಿಸಿದ್ದ ಮಂಟರದಲ್ಲಿ ಕೋಟೆ ಆಂಜನೇಯಸ್ವಾಮಿಯ ಉತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹನುಮನ ದೇವಾಲಯಗಳಲ್ಲಿ ಶ್ರೀರಾಮ ನಾಮ ಜಪ ಹಾಗೂ ಹನುಮ ನಾಮ ಸ್ಮರಣೆಗಳು ಭಕ್ತರಿಂದ ಮೊಳಗಿದವು. ಮೆಳೇಕೋಟೆಯ ಶ್ರೀ ಅಭಯಾಂಜನೇಯ ಸ್ವಾಮಿಗೆ ಸುಪ್ರಭಾತ ಸೇವೆಯೊಂದಿಗೆ ಆರಂಭವಾದ ಧಾರ್ಮಿಕ ಕೈಂಕರ್ಯಗಳಲ್ಲಿ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಅಲಂಕಾರದೊಂದಿಗೆ ಮಹಾಮಂಗಳಾರತಿ ನಡೆಯಿತು.
ನಗರದ ವಿವಿಧೆಡೆ ಹನುಮನ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಪೂಜಾ ವಿಧಿ ವಿಧಾನಗಳು ನೆರವೇರಿದ್ದು, ಭಕ್ತಾದಿಗಳು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.