Monday, 12th May 2025

Pre Wedding shoot: ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಯಕ್ಷಗಾನ-ಭರತನಾಟ್ಯದ ಕಂಪು; ನವ ಜೋಡಿಯ ಚಿಂತನೆಗೆ ಭಾರಿ ಮೆಚ್ಚುಗೆ!

Pre Wedding Photoshoot

ಬೆಂಗಳೂರು: ಪ್ರೀ ವೆಡ್ಡಿಂಗ್‌ ಶೂಟ್‌ ಎಂದಾಕ್ಷಣ ವಿದೇಶಿ ಪ್ರವಾಸಿ ತಾಣ, ಕಡಲ ತೀರ ಅಥವಾ ದೂರದ ಸುಂದರ ಸ್ಥಳಗಳನ್ನು ನವ ಜೋಡಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ನಾನಾ ಬಗೆಯ ಕಸರತ್ತು ಮಾಡಿ ಪ್ರೀ ವೆಡ್ಡಿಂಗ್ ಮಾಡುವ ಈ ಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಪ್ರೀ ವೆಡ್ಡಿಂಗ್ ಶೂಟ್‌ (Pre Wedding shoot) ಮಾಡಿಸಿಕೊಳ್ಳುವ ಮೂಲಕ ನವ ಜೋಡಿಯೊಂದು ಗಮನ ಸೆಳೆದಿದೆ. ಸದ್ಯ ಇವರ ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ನ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೌದು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಮೂಲದ ಜೋಡಿಯೊಂದು ಯಕ್ಷಗಾನ ಹಾಗೂ ಭರತನಾಟ್ಯವನ್ನು (Bharatanatyam and yakshagana) ಬಿಂಬಿಸುವ ನೃತ್ಯರೂಪಕದ ಮೂಲಕ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಇವರ ಚಿಂತನೆಗೆ ನೆಟ್ಟಿಗರು ಶಹಬ್ಬಾಸ್ ಗಿರಿ ನೀಡಿದ್ದಾರೆ. ಜೋಗ ಸಮೀಪದ ಕಾಳಮಂಜಿಯವರಾದ ಚಂದನ್ ಕಲಾಹಂಸ ಹಾಗೂ ಯಲ್ಲಾಪುರ ಸಮೀಪದ ಉಮ್ಮಚಗಿಯ ಭಾರ್ಗವಿ ಬಿ.ಎಚ್ ವಿನೂತನ ರೀತಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ ಮಾಡಿಸಿದವರು.

ಭಾರ್ಗವಿ ಅವರು ಭರತನಾಟ್ಯದಲ್ಲೇ ವಿದ್ವತ್ ಪೂರೈಸಿದ್ದು, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಕೂಡ ಮುಗಿಸಿದ್ದಾರೆ. ಹಾಗೆಯೇ ಎಂ.ಕಾಂ. ಕೂಡ ಪೂರೈಸಿರುವ ಭಾರ್ಗವಿ ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂತೆಯೇ ಬಿ.ಕಾಂ, ಎಂ.ಎ ಪದವೀಧರರಾದ ಚಂದನ್ ಕಲಾಹಂಸ ಬೆಂಗಳೂರಿನ ವಿಜಯನಗರದಲ್ಲಿ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ವೆಬ್ ಡಿಸೈನ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆ ನಡೆಸುತ್ತಿದ್ದಾರೆ. ಎಳವೆಯಲ್ಲಿ ಯಕ್ಷಗಾನ ಕಲಿತಿದ್ದ ಇವರು ತಮ್ಮ ಆಸಕ್ತಿಗಾಗಿ ಈ ವಿಡಿಯೋ ಮಾಡಿದ್ದಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Stars Festive Season Fashion: ಫೆಸ್ಟಿವ್‌ ಸೀಸನ್‌ ಟ್ರೆಂಡ್‌ ಲಿಸ್ಟ್‌‌ಗೆ ಸೇರಿದ ಬಾಲಿವುಡ್‌ ತಾರೆಯರ ಕರ್ವಾಚೌತ್‌ ಡ್ರೆಸ್!

ಒಟ್ಟಿನಲ್ಲಿ ನ.14 ರಂದು ಶಿರಸಿ ಸಮೀಪದ ಕೊಳಗಿಬೀಸ್ ನಲ್ಲಿ ಹಸೆಮಣೆ ಏರಲಿರುವ ನವಜೋಡಿಗೆ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.