Saturday, 10th May 2025

Pralhad Joshi: ಭಾರತೀಯ ಪರಂಪರೆ, ಸಂಸ್ಕೃತಿ ಪುನರುತ್ಥಾನಕ್ಕೆ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ; ಪ್ರಲ್ಹಾದ್‌ ಜೋಶಿ

Pralhad Joshi

ನವದೆಹಲಿ: ಭಾರತೀಯ ಪರಂಪರೆ, ಧರ್ಮ ಮತ್ತು ಸಂಸ್ಕೃತಿ ಪುನರುತ್ಥಾನಕ್ಕೆ ಕೇಂದ್ರ ಸರ್ಕಾರ (Central Government) ದಿಟ್ಟ ಹೆಜ್ಜೆ ಇರಿಸಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಪ್ರತಿಪಾದಿಸಿದರು. ನವದೆಹಲಿಯ ಭಾರತ ಮಂಟಪದಲ್ಲಿ ಬೆಂಗಳೂರಿನ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಾಶಿ ವಿಶ್ವನಾಥ, ಮಹಾಕಾಲ ಉಜ್ಜಯಿನಿ, ಅಯೋಧ್ಯೆ ಶ್ರೀರಾಮನ ಕ್ಷೇತ್ರ ಸೇರಿದಂತೆ ದೇಶದೆಲ್ಲೆಡೆ ಸಾಂಸ್ಕೃತಿಕ ಪುನರುತ್ಥಾನ ಕೈಗೊಂಡಿದೆ ಎಂದು ತಿಳಿಸಿದರು.

ಜಗತ್ತಿಗೇ ಬೇಕಿದೆ ಭಾರತೀಯ ಸಂಸ್ಕೃತಿ

ಭಾರತೀಯ ಪರಂಪರೆ, ಸಂಸ್ಕೃತಿ ಇದ್ದರೆ ಜಗತ್ತೇ ಸುಖ, ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯ. ‘ಲೋಕಾ ಸಮಸ್ತೋ ಸುಖಿನೋ ಭವಂತು’ ಎಂಬ ಉದಾತ್ತ ಚಿಂತನೆ, ಪರಿಕಲ್ಪನೆಯುಳ್ಳ ನಮ್ಮ ಸನಾತನ ಧರ್ಮ, ಸಂಸ್ಕೃತಿ ಇಂದು ಜಗತ್ತಿಗೇ ಬೇಕಿದೆ ಎಂದು ಅವರು ಹೇಳಿದರು.

‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಮಾನವ ಧರ್ಮಕ್ಕೆ ಜಯವಾಗಲಿ’ ಎನ್ನುವಂಥ ಏಕೈಕ ದೇಶ ಭಾರತ. ಇಂಥ ಒಂದು ವಿಶಿಷ್ಠ ಸಂಸ್ಕೃತಿ ಭಾರತದಲ್ಲಿದೆ. ಇದು ನಾಶವಾಗಬಾರದು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಸಾಂಸ್ಕೃತಿಕ ಪುನರುತ್ಥಾನಕ್ಕೆ ಹೆಚ್ಚಿನ ಗಮನ ಕೊಟ್ಟಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ʼಟ್ಯಾಕ್ಸಾನಮಿʼ ಬಿಡುಗಡೆ ಒಂದು ಐತಿಹಾಸಿಕ ಹೆಜ್ಜೆ; ಕುಮಾರಸ್ವಾಮಿ

ರಾಜಕೀಯಕ್ಕಾಗಿ ಸನಾತನ ಧರ್ಮ ಮುಗಿಸಬೇಕು ಎನ್ನುವವರಿದ್ದಾರೆ

ರಾಜಕೀಯ ಲಾಭಕ್ಕಾಗಿ ಭಾರತೀಯ ಸನಾತನ ಧರ್ಮವನ್ನು ಕೋವಿಡ್ ರೀತಿ ನಾಶ ಮಾಡಬೇಕು ಎನ್ನುವವರು ದೇಶದಲ್ಲೇ ಇದ್ದಾರೆ. ಆದರೆ, ಭಾರತೀಯ ಸನಾತನ ಧರ್ಮ ಮತ್ತು ಸಂಸ್ಕೃತಿ ಉಳಿವಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ತೀಕ್ಷ್ಣವಾಗಿ ಹೇಳಿದರು.

ದೇಶದ ಸಂಸ್ಕೃತಿ ಮೇಲೆ ಆಕ್ರಮಣ

ಭಾರತದ ಹೊರಗಿನಿಂದ ಮಾತ್ರವಲ್ಲ, ಒಳಗಿನವರಿಂದಲೂ ನನ್ನ ದೇಶದ ಸಂಸ್ಕೃತಿ ಮೇಲೆ ಆಕ್ರಮಣ ಆಗುತ್ತಿದೆ. ಕೆಲವರು ದ್ವೇಷದಿಂದ ಹಿಂದೂ ಸಮಾಜ, ಹಿಂದೂ ದೇಶ, ಸನಾತನ ಧರ್ಮ, ಪರಂಪರೆ ಮತ್ತು ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಲ ಶಕ್ತಿಗಳಿಗೆ ಭಾರತ ಪ್ರಬಲ ಆಗೋದು ಬಿಕಿಲ್ಲ

ಕೆಲವು ಶಕ್ತಿಗಳಿಗೆ ಭಾರತ ಪ್ರಬಲ ಆಗುವುದು ಬೇಕಿಲ್ಲ. ಹಾಗಾಗಿ ಸಾಮಾಜಿಕ ವಿಘಟನೆಯೊಂದಿಗೆ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಹಾಳು ಮಾಡಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಇದನ್ನು ಸಂಘಟಿತವಾಗಿ ಎದುರಿಸಬೇಕು ಎಂದು ಕರೆ ನೀಡಿದರು. ಬ್ರಿಟಿಷರು ಬರುವ ಮೊದಲು ಭಾರತ ಒಂದು ದೇಶವೇ ಆಗಿರಲಿಲ್ಲ ಎನ್ನುತ್ತಾರೆ. ಆದರೆ, ಭಾರತ ಸಾಂಸ್ಕೃತಿಕವಾಗಿ ಸಾವಿರಾರು ವರ್ಷಗಳಿಂದಲೂ ಒಂದು ದೇಶವಾಗಿತ್ತು ಎಂಬುದಕ್ಕೆ ಸಾಕಷ್ಟು ಉದಾಹರಣೆ ಇವೆ ಎಂದು ಹೇಳಿದರು.

ಭಾರತ್ ಮಾತಾ ಕೀ ಜೈ ಎನ್ನುವವರನ್ನು ಒಗ್ಗೂಡಲು ಸಿದ್ಧ

‘ಭಾರತ್ ಮಾತಾ ಕೀ ಜೈ, ಹಿಂದೂಸ್ಥಾನ್ ಕೀ ಜೈ..’ ಎನ್ನುವ ಎಲ್ಲರನ್ನೂ ಒಳಗೊಳ್ಳಲು, ಒಗ್ಗೂಡಲು ನಾವು ಸಿದ್ಧರಿದ್ದೇವೆ. ಕೆಲವರಂತೆ ನಾವಿದರಲ್ಲಿ ರಾಜಕೀಯ ಮಾಡುತ್ತಿಲ್ಲ. ಸರ್ವರ ಹಿತ ಬಯಸುವಂತಹ ಭಾರತೀಯ ಸನಾತನ ಧರ್ಮ, ಪರಂಪರೆ ಉಳಿಸುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಸರ್ಕಾರ ಹಿಂಜರಿಯುವುದಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದರು.

“ರಾಮಾಯಣ ಸರ್ಕ್ಯೂಟ್” ಆರಂಭಿಸಿದ್ದೇವೆ. ಪುರಾತನ ದೇವಸ್ಥಾನಗಳಿಗೆ ತೆರಳಲು ವ್ಯವಸ್ಥೆ ಮಾಡುತ್ತಿದ್ದೇವೆ. ರೈಲುಗಳ ಮೂಲಕ ದೇಶದ ಬೇರೆ ಬೇರೆ ಕಡೆ ಸಂಚರಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಮನ್ ನಿರಂಜನ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹಿರೇನಾಗಾಂವ ಶಾಂತಲಿಂಗೇಶ್ವರ ಮಠದ ಶ್ರೀ ಜಯಶಾಂತಲಿಂಗ ಮಹಾಸ್ವಾಮಿಗಳು, ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಿತಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಿವಲಿಂಗ ಮುರುಘ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 378 ಹುದ್ದೆ; ಇಂದೇ ಅಪ್ಲೈ ಮಾಡಿ

ಕೇಂದ್ರದ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ವಿಜಯೇಂದ್ರ, ಗೋವಿಂದ ಕಾರಜೋಳ, ಸಾಗರ್ ಖಂಡ್ರೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.