Saturday, 10th May 2025

BS Yediyurappa: ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ವಿಚಾರಣೆ ಮತ್ತೆ ಮುಂದಕ್ಕೆ

BS Yediyurappa

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ (POCSO case) ಅವರಿಗೆ ಮತ್ತೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರ ವಿರುದ್ಧದ ಪೋಕ್ಸೋ ಕೇಸ್ ವಿಚಾರಣೆಯನ್ನು ಹೈಕೋರ್ಟ್ (Karnataka High Court) ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.

ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ನಡೆಸಿತು. ನಂತರ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೆ.27ಕ್ಕೆ ಮುಂದೂಡಿತು.

ಸಹಾಯ ಕೋರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ತಾಯಿ ಮಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ಮಾರ್ಚ್ 14, 2024ರಂದು ದೂರು ನೀಡಿದ್ದರು. ಈ ದೂರು ಆಧರಿಸಿ ಬಿಎಸ್ ವೈ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು.

ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಈ ಕುರಿತು ಚಾರ್ಜ್‌ಶೀಟ್‌ ಸಲ್ಲಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A (ಲೈಂಗಿಕ ಕಿರುಕುಳ) ಮತ್ತು 214 ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ.

ಪ್ರಕರಣದಲ್ಲಿ ಸಂತ್ರಸ್ತೆ 17 ವರ್ಷದ ಬಾಲಕಿ. ಫೆಬ್ರವರಿ 2, 2024ರಂದು ತನ್ನ ತಾಯಿಯೊಂದಿಗೆ ಮಾಜಿ ಮುಖ್ಯಮಂತ್ರಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಹೋಗಿದ್ದಳು. ಸಂತ್ರಸ್ತೆ 7 ವರ್ಷದವಳಿದ್ದಾಗ ಆಕೆಯ ಸಂಬಂಧಿಕರೊಬ್ಬರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಈ ಹಿಂದಿನ ಅತ್ಯಾಚಾರ ಪ್ರಕರಣದ ತನಿಖೆಯನ್ನು ವೇಗಗೊಳಿಸಲು ಅವರ ಸಹಾಯವನ್ನು ತಾಯಿ ಕೋರಿದ್ದರು. ಆ ಸಂದರ್ಭದಲ್ಲಿ ಬಿಎಸ್‌ವೈ ತಮ್ಮ ಮನೆಯ ಕೊಠಡಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮಾರ್ಚ್ 14 ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ನಂತರ ಕರ್ನಾಟಕ ಹೈಕೋರ್ಟ್ ಜೂನ್ 14ರಂದು ಬಂಧನಕ್ಕೆ ತಡೆಯಾಜ್ಞೆ ನೀಡಿತ್ತು.

ಇದನ್ನೂ ಓದಿ: ಬಿ.ಎಸ್​. ಯಡಿಯೂರಪ್ಪ ವಿಚಾರಣೆಗೆ ಹಾಜರು

Leave a Reply

Your email address will not be published. Required fields are marked *