ಬೆಳಗಾವಿ: ಬೆಳಗಾವಿಯಲ್ಲಿ (Belagavi news) 2ಎ ಮೀಸಲಾತಿ (Reservation) ಆಗ್ರಹಿಸಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ (Panchamasali Protest) ಪ್ರತಿಭಟನೆಯಲ್ಲಿ ಕಲ್ಲು ತೂರಾಟ (Stone Pelting) ನಡೆಸಿದ ಐವರ ಮೇಲೆ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.
2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯದವರು ಬೆಳಗಾವಿಯಲ್ಲಿ ಬುಧವಾರ ನಡೆಸಿದ ಹೋರಾಟದ ವೇಳೆ ಕಲ್ಲು ತೂರಾಟದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ 17 ಜನರಿಗೆ ಗಾಯವಾಗಿತ್ತು. ಏಳು ಸರ್ಕಾರಿ ಬಸ್, ಮೂರು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲ್ಲು ಎಸೆದ ನಿಂಗಪ್ಪ ಬಣದ್, ರಾಮಗೌಡ ಫಕೀರಗೌಡ, ಉಮೇಶ್ ಇಂಗಳೆವಾರ್, ಮಂಜುನಾಥ್ ಬೆಂಡಿಗೇರಿ, ಮಂಜುನಾಥ್ ಗುಮ್ಮಗೋಳ ಹಾಗೂ ಇತರರ ಮೇಲೆ ಎಫ್‌ಐಆರ್ ದಾಖಲಾಗಿದೆ. ಆರೋಪಿತರು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ್ದಾರೆ. ಅಲ್ಲದೇ ಕೊಲೆ ಮಾಡಲು ಯತ್ನಿಸಿದ್ದಾರೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ ಎಂದು ಬಿಎನ್‌ಎಸ್ ಕಲಂ 115(2), 109(1), 118(2), 117(2), 352, 351(2), 132, 121, 223, 324,189, 189(3), 191(2), 190 ಅಡಿ ಕೇಸ್ ಪಿಐ ಆರ್.ಆರ್ ಪಾಟೀಲ್ ಅವರು ಕೇಸ್ ದಾಖಲಿಸಿಕೊಂಡಿದ್ದಾರೆ.
ಸುರ್ವಣಸೌಧಕ್ಕೆ ಮುತ್ತಿಗೆಗೆ ಯತ್ನ
2ಎ ಮೀಸಲಾತಿ ಆಗ್ರಹಿಸಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೆಲವು ವರ್ಷಗಳಿಂದ ಪ್ರತಿಭಟನೆ ನಡೆಯುತ್ತಿದೆ. ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಮೀಸಲಾತಿ ಆಗ್ರಹಿಸಿ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಹೋರಾಟಗಾರರು ಸೌಧದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗವಹಿಸಿದ್ದರು. ಹೋರಾಟಗಾರರು ಮಂಗಳವಾರ ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ, ಜಿಲ್ಲಾಧಿಕಾರಿಯವ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಕೈಬಿಡಲಾಯಿತು.
ಆದರೆ, ಪಂಚಮಸಾಲಿ ಹೋರಾಟಗಾರರು ನಾವು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡುತ್ತೇವೆ ಎಂದು ಸುವರ್ಣಸೌಧದತ್ತ ನಡೆದರು. ಸುವರ್ಣಸೌಧದ ಹತ್ತಿರ ಪ್ರತಿಭಟನಾಕಾರರು ಬರದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಹೋರಾಟಗಾರರು ಬ್ಯಾರಿಕೇಡ್ ದಾಟಿ ಒಳ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಹೋರಾಟಗಾರರು ಕಲ್ಲು ತೂರಿದ್ದರು. ಇದರಿಂದ ಪೊಲೀಸರಿಗೆ ಗಾಯವಾಗಿದ್ದು, ಸಾರ್ವಜನಿಕ ಬಸ್ ಮತ್ತು ಪೊಲೀಸ್ ವಾಹನಗಳು ಜಖಂಗೊಂಡಿದ್ದವು.
ಇದನ್ನೂ ಓದಿ: CM Siddaramaiah: ಚರ್ಚೆಗೆ ಕರೆದರೂ ಅವರು ಬರಲಿಲ್ಲ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಿಎಂ ಪ್ರತಿಕ್ರಿಯೆ