ಬೆಂಗಳೂರು: ರಾಜಧಾನಿಯಲ್ಲಿ (Bengaluru news) ಹೊಸ ವರ್ಷಾಚರಣೆಗೆ (new year celebration) ರಾತ್ರಿ 1 ಗಂಟೆಯವರೆಗೂ ಅವಕಾಶ ನೀಡಲಾಗಿದೆ. ನಂತರ ಶಾಂತಿಯುತವಾಗಿ ಮನೆಗೆ ತೆರಳಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್‌ಗೆ ಮುಂದಾಗಿದೆ. ಭದ್ರತೆಗೆ 11,000 ಪೊಲೀಸರನ್ನು ನಿಯೋಜಿಸಲಾಗಿದೆ.
ಹೊಸ ವರ್ಷಾಚರಣೆಗೆ ಸರ್ಕಾರವು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಅನುಮತಿ ನೀಡಿದೆ. ಸಾರ್ವಜನಿಕರಿಗೆ ನಿಗದಿತ ಸಮಯದ ಮಿತಿಯೊಳಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಪೊಲೀಸರು ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಭಾರಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 11,830 ಪೊಲೀಸ್ ಸಿಬ್ಬಂದಿ ನಗರದಾದ್ಯಂತ ಕಟ್ಟುನಿಟ್ಟಿನ ನಿಗಾ ವಹಿಸಲಿದ್ದಾರೆ. ಯಾವುದೇ ಸಂಭಾವ್ಯ ರೇವ್ ಪಾರ್ಟಿಗಳು ಮತ್ತು ಮಾದಕವಸ್ತು ಸಂಬಂಧಿತ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.
7500 ಸಿಸಿ ಕ್ಯಾಮರಾ: ಕಮಿಷನರ್
ನಗರದಲ್ಲಿ ಹೊಸ ವರ್ಷಾಚರಣೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 11,830 ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ನಗರದಾದ್ಯಂತ 7500 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹಲವೆಡೆ ಸೆನ್ಸ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೊಬೈಕ್ ಕಮಾಂಡ್ ಹಾಗೂ ಅಂಟ್ರೋಲ್ ಸೆಂಟರ್ ನಿರ್ಮಾಣ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ತಿಳಿಸಿದ್ದಾರೆ.
ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಐಲ್ಯಾಂಡ್ ಗಳನ್ನು ನಿರ್ಮಿಸಲಾಗಿದೆ. ಒಪೇರಾ ಜಂಕ್ಷನ್‌ನಲ್ಲಿ ಪೊಲೀಸರು ಕಮಾಂಡ್ ವಾಹನ ನಿಲುಗಡೆ ಮಾಡಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಹೆಜ್ಜೆ ಹೆಜ್ಜೆಗೂ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸೂಕ್ತ ಸಿದ್ಧತೆ: ಜಿ. ಪರಮೇಶ್ವರ್
ಬೆಂಗಳೂರು ನಗರ ಮತ್ತು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದು, ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು ನಗರ ಮತ್ತು ಇಡೀ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗೊಂದಲ ಸೃಷ್ಟಿಸಲು ಬಯಸುವವರಿಗೆ ಎಚ್ಚರಿಕೆ ನೀಡಿದ್ದೇವೆ. ಭದ್ರತೆಗಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಹೊಸ ವರ್ಷವನ್ನು ಸಂತೋಷದಿಂದ ಆಚರಿಸಿ. ನಿಮ್ಮ ಹೊಸ ವರ್ಷವು ಅತ್ಯಂತ ಸಂತೋಷದಾಯಕವಾಗಿರಲಿ’ ಎಂದು ತಿಳಿಸಿದರು.
ಯಾವುದೇ ತೊಂದರೆ ಆಗದು: ಡಿ.ಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ಬೆಂಗಳೂರಿನ ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ಹೊಸ ವರ್ಷ ಆಚರಿಸಿ ಎಂದು ಕರೆ ನೀಡಿದ್ದಾರೆ. ಎಲ್ಲ ಇಲಾಖೆಗಳಿಂದ ನಗರದಾದ್ಯಂತ ಸಾವಿರಾರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿಯ ತೊಂದರೆಗಳನ್ನು ಸಹಿಸುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು. ನಾವು ಬಹಳ ಜಾಗರೂಕರಾಗಿದ್ದೇವೆ. ಬೆಂಗಳೂರಿನ ಚಿತ್ರಣ ಬಹಳ ಮುಖ್ಯವಾಗಿದೆ. ಯಾವುದೇ ರೀತಿಯ ತೊಂದರೆ ಉಂಟುಮಾಡಿದರೆ, ಅದಕ್ಕೆ ಪೊಲೀಸರು ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: New year Celebration: ಹೊಸ ವರ್ಷಾಚರಣೆ: ಈ ತಾಣಗಳು ಸೈಲೆಂಟ್, ನೋ ಎಂಟ್ರಿ!