ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಳವಾಗಿತ್ತು. ಈ ನಡುವೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಮತ್ತೆ ನಂದಿನಿ ಹಾಲಿನ ದರ ಹೆಚ್ಚಾಗುವ (Nandini milk price hike) ಬಗ್ಗೆ ಚರ್ಚೆಯಾಗಿತ್ತು. ಆದರೆ ಸದ್ಯ ದರ ಹೆಚ್ಚಳ ಪ್ರಸ್ತಾಪ ಇಲ್ಲ ಎಂದು ಕೆಎಂಎಫ್ (KMF) ಅಧ್ಯಕ್ಷ ಭೀಮಾ ನಾಯ್ಕ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ನಂದಿನ ಹಾಲು ಹಾಗೂ ಅದರ ಉತ್ಪನ್ನಗಳಿಗೆ ಎಂದೂ ಬೇಡಿಕೆ ಕಡಿಮೆಯಾಗಿಲ್ಲ. ತಿರುಪತಿ ಲಡ್ಡು ವಿವಾದದ ನಂತರ ನಂದಿನ ಬ್ರ್ಯಾಂಡ್‌ನ ಗರಿಮೆ ಇನ್ನಷ್ಟು ಹೆಚ್ಚಳವಾಗಿದೆ. ಈ ನಡುವೆ ರಾಜ್ಯದಲ್ಲಿ ಮತ್ತೆ ನಂದಿನಿ ಹಾಲು ಹಾಗೂ ಮೊಸರು ದರ ಹೆಚ್ಚಳವಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಗೊಂದಲಕ್ಕೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲು ಹಾಗೂ ಮೊಸರು ದರ ಏರಿಕೆ ಮಾಡುವ ಬಗ್ಗೆ ಯಾವುದೇ ಚಿಂತನೆಯೂ ನಮ್ಮ ಮುಂದೆ ಇಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟ ಯಶಸ್ವಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ನಾವು ಇನ್ನಷ್ಟು ಭಾಗದಲ್ಲಿ ವಿಸ್ತರಿಸುವ ಪ್ಲಾನ್ ಇದೆ. ನಂದಿನಿ ಹಾಲಿನ ದರ ಏರಿಕೆ ಮಾಡಬೇಕು ಅಂತ ರೈತರು ಮನವಿ ಮಾಡಿರುವುದು ನಿಜ. ಆದರೆ, ಈಗ ಬೆಲೆ ಏರಿಕೆ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಈಚೆಗೆ ದೆಹಲಿಯಲ್ಲಿ ಚಾಲನೆ ನೀಡಲಾಗಿದೆ. ದೆಹಲಿಯಲ್ಲಿ ಪ್ರತಿ ನಿತ್ಯವೂ 6 ಸಾವಿರ ಲೀಟರ್‌ಗೂ ಹೆಚ್ಚು ನಂದಿನಿ ಹಾಲು ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು 1 ಲಕ್ಷ ಲೀಟರ್‌ಗೆ ಹೆಚ್ಚಳ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು ಹಾಗೂ ನಂದಿನಿ ಉತ್ಪನ್ನಗಳಿಗೆ ಇದೀಗ ದೇಶದಾದ್ಯಂತ ಬೇಡಿಕೆ ಇದೆ. ದೇಶದ ವಿವಿಧ ಭಾಗದಲ್ಲಿ ನಂದಿನಿ ಉತ್ಪನ್ನ ಹಾಗೂ ಗುಣಮಟ್ಟಕ್ಕೆ ಜನ ಫಿದಾ ಆಗಿದ್ದು, ಈ ಉತ್ಪನ್ನಗಳ ಮಾರಾಟ ಜೋರಾಗಿದೆ. ಕೆಎಂಎಫ್‌ಗೂ ಆದಾಯ ಹರಿದು ಬರುತ್ತಿದೆ. ಉತ್ಪನ್ನ ಉತ್ತಮವಾಗಿದ್ದು, ಗುಣಮಟ್ಟ ಹಾಗೂ ಗ್ರಾಹಕರು ಮೆಚ್ಚಿಕೊಳ್ಳುವಂತೆ ಇದ್ದರೆ ಸಕ್ಸಸ್ ಆಗುತ್ತದೆ ಎನ್ನುವುದಕ್ಕೆ ನಂದಿನಿ ಉದಾಹರಣೆಯಾಗಿದೆ.
ಇದನ್ನೂ ಓದಿ: ನಂದಿನಿ, ಕನ್ನಡಿಗರದು ಬರಿ ಹಾಲಲ್ಲ, ಹೆಮ್ಮೆ ಕೂಡಾ !