Sunday, 11th May 2025

Nandini Milk Price Hike: ಸಂಕ್ರಾಂತಿ ಬಳಿಕ ಕಾದಿದೆ ಹಾಲಿನ ದರ ಏರಿಕೆ ಶಾಕ್‌; ಸುಳಿವು ಕೊಟ್ಟ ಕೆಎಂಎಫ್‌

Nandini Milk Price Hike

ಬೆಂಗಳೂರು: ಸಂಕ್ರಾಂತಿ ಬಳಿಕ ನಂದಿನಿ ಹಾಲಿನ ದರ (Nandini Milk Price Hike) ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಲಿನ ದರ ಹೆಚ್ಚಳ ಮಾಡಲು ಕೆಎಂಎಫ್‌ ಮುಂದಾಗಿದ್ದು, ಈ ಬಗ್ಗೆ ಕೆಎಂಎಫ್‌ ಅಧ್ಯಕ್ಷ ಭೀಮಾನಾಯಕ್‌ ಸುಳಿವು ನೀಡಿದ್ದಾರೆ. ಪ್ರತಿ ಲೀಟರ್‌ ಹಾಲಿಗೆ 5 ರೂ. ಹೆಚ್ಚಳ ಮಾಡುವಂತೆ ರೈತರು ಬೇಡಿಕೆ ಇಟ್ಟಿದ್ದು, ಸಂಕ್ರಾಂತಿ ಬಳಿಕ ಈ ಸಂಬಂಧ ಸಭೆ ನಡೆಸಿ ದರ ಏರಿಕೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಲಿನ ದರ ಹೆಚ್ಚಳ ಪ್ರಸ್ತಾವನೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆದರೆ ಇನ್ನೂ ದರ ಏರಿಕೆ ಬಗ್ಗೆ ನಿರ್ಧಾರವಾಗಿಲ್ಲ. ಸಂಕ್ರಾಂತಿ ಹಬ್ಬದ ನಂತರ ಮತ್ತೊಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ಹಿಂದೆ 50 ಎಂಎಲ್‌ ಹಾಲನ್ನು ಹೆಚ್ಚುವರಿ ನೀಡುವ ಮೂಲಕ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಹೆಚ್ಚುವರಿ ಹಾಲನ್ನು ವಾಪಸ್‌‍ ಪಡೆಯಲು ಉದ್ದೇಶಿಸಲಾಗಿದೆ. ಹಾಲಿನ ದರ ಹೆಚ್ಚಳ ಕುರಿತಂತೆ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚೆಯಾಗಿದ್ದು, ಹೆಚ್ಚಳ ಮಾಡುವಂತೆ ಪ್ರಸ್ತಾಪವೂ ಆಗಿದೆ ಎಂದು ತಿಳಿಸಿದ್ದಾರೆ.

ಇನ್ನು ಬಹಳ ದಿನಗಳಿಂದ ನಂದಿನಿ ಇಡ್ಲಿ-ದೋಸೆ ಹಿಟ್ಟು ಬಿಡುಗಡೆ ಬಗ್ಗೆ ಚರ್ಚೆಯಾಗುತ್ತಿತ್ತು. ನಿನ್ನೆ ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದ್ದು ಇಂದಿನಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಇಡ್ಲಿ , ದೋಸೆ ಹಿಟ್ಟಿನ ಮಾರುಕಟ್ಟೆಯಲ್ಲಿ ಶೇ.15ರಿಂದ 20ರಷ್ಟು ನಾವು ಪಾಲು ಪಡೆಯಬೇಕೆಂಬ ಉದ್ದೇಶ ಹೊಂದಿದ್ದೇವೆ. ಬೇರೆ ಕಂಪನಿಯವರು ಪ್ರತಿದಿನ ಮೂರು ಸಾವಿರ ಮೆಟ್ರಿಕ್‌ ಟನ್‌ನಷ್ಟು ಮಾರಾಟ ಮಾಡುತ್ತಿದ್ದು, ನಾವು 5 ಸಾವಿರ ಮೆಟ್ರಿಕ್‌ ಟನ್‌ ಮಾರಾಟ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

450 ಗ್ರಾಂ ದೋಸೆ ಹಿಟ್ಟಿಗೆ 40 ರೂ, 900 ಗ್ರಾಂ ದೋಸೆ ಹಿಟ್ಟಿಗೆ 80 ರೂ. ನಿಗದಿಪಡಿಸಲಾಗಿದ್ದು, ಶೇ.5ರಷ್ಟು ಪ್ರೋಟೀನ್‌ ಸೇರಿಸಲಾಗಿದೆ. ಇದರಿಂದ ಮಕ್ಕಳು, ಕ್ರೀಡಾಪಟುಗಳು ಸೇರಿದಂತೆ ಎಲ್ಲ ವಯಸ್ಸಿನವರಿಗೂ ಸಹಾಯಕವಾಗಲಿದೆ. ಬೆಂಗಳೂರು ನಂತರ ಇತರ ಜಿಲ್ಲೆಗಳಲ್ಲೂ ಯಾವ ರೀತಿ ಬೇಡಿಕೆ ಬರಲಿದೆ ಎಂಬುದನ್ನು ಆಧರಿಸಿ ಎಲ್ಲಾ ಕಡೆ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಆರ್‌ಸಿಬಿಗೆ ಪ್ರಾಯೋಜಕತ್ವ?
ಕೆಎಂಎಫ್‌ನ ಬಜೆಟ್‌ಗೆ ಆರ್‌ಸಿಬಿಯವರು ಒಪ್ಪಿಕೊಂಡರೆ ಮುಂದಿನ ಐಪಿಎಲ್‌ನಲ್ಲಿ ಪ್ರಾಯೋಜಕತ್ವ ಮಾಡಲಾಗುವುದು. ಈ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಾಗುವುದು ಎಂದು ಭೀಮಾನಾಯಕ್‌ ಹೇಳಿದರು.

ಅಯೋಧ್ಯೆಗೆ ನಂದಿನಿ ತುಪ್ಪ ಪೂರೈಕೆ
ಅಯೋಧ್ಯೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ನಮ್ಮ ನಂದಿನಿ ತುಪ್ಪ ಕಳೆದ 10 ವರ್ಷಗಳಿಂದ ಬಳಕೆಯಾಗುತ್ತಿದೆ. ತಿರುಪತಿ ಲಡ್ಡು ವಿವಾದದ ನಂತರ ನಂದಿನಿ ತುಪ್ಪದಲ್ಲಿ ಶೇ.10ರಿಂದ 15ರಷ್ಟು ಮಾರಾಟ ಹೆಚ್ಚಳವಾಗಿದೆ. ಶಿರಡಿಯಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಮುಂದಿನ ಅಲ್ಲಿಗೂ ತುಪ್ಪ ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Celebrities Christmas Fashion 2024: ಹೀಗಿತ್ತು ಸೆಲೆಬ್ರೆಟಿಗಳ ಕ್ರಿಸ್‌ಮಸ್ ಫ್ಯಾಷನ್ ವೇರ್ಸ್