Wednesday, 14th May 2025

Movie ticket price hike: ದುಬಾರಿಯಾಗಲಿದೆ ಸಿನಿಮಾ ಟಿಕೆಟ್‌, ಒಟಿಟಿ; ಮಸೂದೆಗೆ ರಾಜ್ಯಪಾಲರ ಅಂಕಿತ

Movie ticket price hike

ಬೆಂಗಳೂರು: ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಅನ್ವಯ ಸಿನಿಮಾ ಟಿಕೆಟ್ ಮತ್ತು ಒಟಿಟಿ ಚಂದಾದಾರಿಕೆ ಶುಲ್ಕದ (Movie ticket price hike) ಮೇಲೆ ಶೇ. 1ರಿಂದ 2ರಷ್ಟು ಸೆಸ್ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರಿಂದ ಸಿನಿಮಾ ಟಿಕೆಟ್ ಮತ್ತು ಒಟಿಟಿ ಚಂದಾದಾರಿಕೆ ಶುಲ್ಕ ಏರಿಕೆಯಾಗಲಿದೆ.

2024ರ ಜುಲೈನಲ್ಲಿ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿತ್ತು. ಬಳಿಕ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರು ಸೆ .23ರಂದು ಈ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ.

ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ ಎಂಬ ನಿಧಿ ಸ್ಥಾಪಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದರಿಂದ ಸಿನಿಮಾ ಟಿಕೆಟ್ ಹಾಗೂ ಒಟಿಟಿ ಚಂದಾದಾರಿಕೆ ಮೇಲೆ ಶೇಕಡ 2 ಪರ್ಸೆಂಟ್ ಮೀರದಂತೆ ಶೇಕಡ 1 ಪರ್ಸೆಂಟ್​ಗಿಂತ ಕಡಿಮೆಯಾಗದಂತೆ ಸರ್ಕಾರ ಸೆಸ್‌ ವಿಧಿಸಲಿದೆ.

ಈ ಸುದ್ದಿಯನ್ನೂ ಓದಿ | Invest Karnataka: 4,071 ಕೋಟಿ ರೂಪಾಯಿಯ 88 ಯೋಜನೆಗಳಿಗೆ ಅನುಮೋದನೆ, 10,585 ಉದ್ಯೋಗಾವಕಾಶ ಸೃಷ್ಟಿ

ಈ ಸೆಸ್‌ ಅನ್ನು ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಇಎಸ್ಐ, ಪಿಎಫ್ ಸೇರಿದಂತೆ ಅನೇಕ ಅನುಕೂಲಗಳನ್ನು ಕಲ್ಪಿಸಲಾಗುತ್ತದೆ. ಇನ್ನು ಸರ್ಕಾರವು ಸೂಚಿಸಿದಂತೆ ಸೆಸ್ ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಣೆಯೊಂದಿಗೆ ಶೇಕಡಾ 1 ರಿಂದ 2ರ ನಡುವೆ ಇರುತ್ತದೆ.