ಬೆಂಗಳೂರು: ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ (MLA Munirathna) ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದಿರುವ ಘಟನೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಲಕ್ಷ್ಮೀದೇವಿ ನಗರ ವಾರ್ಡ್ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಮೊಟ್ಟೆ ಎಸೆದಿದ್ದು, ಅಲ್ಲದೇ ಕಾರಿನ ಮೇಲೆಯೂ ಮೊಟ್ಟೆ ಹಾಗೂ ಕಲ್ಲೆಸೆತ ನಡೆದಿದೆ.
ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ 100 ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆರಳುತ್ತಿದ್ದಾಗ ಮುನಿರತ್ನ ಮೇಲೆ ಕಲ್ಲು ಮತ್ತು ಮೊಟ್ಟೆ ದಾಳಿ ನಡೆದಿದೆ. ಕಾರಿನ ಮುಂದಿನ ಗಾಜಿನ ಮೇಲೆ ಕಲ್ಲು ಬಿದ್ದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ ಅವರು, ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿದ್ದಾರೆ. ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಅವರ ಕಡೆಯವರಿಂದ ನನ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ ಎಂದು ಆರೋಪ ಮಾಡಿದ್ದಾರೆ.
ಮೊಟ್ಟೆಯ ಒಳಗಡೆ ಆಸಿಡ್ ಹಾಕಿ ದಾಳಿ ಮಾಡಿದ್ದಾರೆ. ಗುಂಪು ದಾಳಿ ಮಾಡಿ ನನ್ನ ಕೊಲೆ ಮಾಡಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್ ಪ್ರೇರಿತ ಕೃತ್ಯವಾಗಿದ್ದು ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್, ಕುಸುಮ ತಂದೆ ಹನುಮಂತರಾಯಪ್ಪ ಇದಕ್ಕೆ ನೇರ ಹೊಣೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರು ಮನೆಯ ಮುಂದೆಯೇ ಬಂದು ರಾಜೀನಾಮೆ ಕೊಡಿ. ಇಲ್ಲದೇ ಇದ್ದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಆರೋಪಿಸಿದ್ದಾರೆ.
ನನಗೆ ರಕ್ಷಣೆ ಒದಗಿಸಲು ಮನವಿ ಮಾಡಿದ್ದೆ. ಗೃಹ ಮಂತ್ರಿ ಪರಮೇಶ್ವರ್ ಬಹಳ ಒಳ್ಳೆಯವರು. ಆದರೆ, ಗೃಹ ಇಲಾಖೆ ಅವರ ಕೈಯಲ್ಲಿ ಇಲ್ಲ. ಡಿವೈಎಸ್‌ಪಿ ಧರ್ಮೇಂದ್ರ ಎಂಬುವವರು ಗೃಹ ಇಲಾಖೆಯನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಧರ್ಮೇಂದ್ರ ಯಾರ ಮೇಲೆ ಯಾವ ಸುಳ್ಳು ಕೇಸ್ ಬರೆದುಕೊಟ್ಟರೂ ಅದೇ ಕೇಸ್. ನನ್ನ ವಿರುದ್ಧ ಪೋಕ್ಸೊ ಕೇಸ್ ಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.
ಮೊಟ್ಟೆ ಎಸೆತ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Arvind Kejriwal: ಸುಳ್ಳು ಪ್ರಕರಣದಲ್ಲಿ ಆತಿಶಿ ಅರೆಸ್ಟ್ ಮಾಡೋಕೆ ಬಿಜೆಪಿ ಸಂಚು- ಕೇಜ್ರಿವಾಲ್ ಗಂಭೀರ ಆರೋಪ