ಬಾಗಲಕೋಟೆ: ಮಕ್ಕಳ ಮದುವೆಗಾಗಿ ಹೆಣ್ಣು ಹುಡುಕುವ ಪಾಲಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಯಾಕೆಂದರೆ, ಮದುವೆಯಾಗಿ ಹಣ ಪಡೆದುಕೊಡು ಒಂದು ತಿಂಗಳಲ್ಲೇ ಬ್ರೋಕರ್ ಟೀಂ ಜತೆ ʼನಕಲಿ ವಧುʼ (Fake Bride) ಪರಾರಿಯಾಗಿರುವ ಘಟನೆ (Marriage fraud) ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿಯಾಗಿದ್ದರಿಂದ ವ್ಯಕ್ತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮುಧೋಳದ ಸೋಮಶೇಖರ್ ಎಂಬಾತನಿಗೆ ಶಿವಮೊಗ್ಗದ ಮಂಜುಳಾ ಎಂಬಾಕೆಯನ್ನು ಮದುವೆ ಮಾಡಿಸಿ ಮೋಸ ಮಾಡಲಾಗಿದೆ. ಈಗಾಗಲೇ ಎರಡು ಮದುವೆಯಾಗಿದ್ದ ಶಿವಮೊಗ್ಗದ ಮಹಿಳೆ ಮಂಜುಳಾ ಎಂಬಾಕೆಯನ್ನು ಬ್ರೋಕರ್ ಟೀಂ ಕರೆತಂದು ಸೋಮಶೇಖರ್ ಜತೆ ಮದುವೆ ಮಾಡಿಸಿತ್ತು. ನಂತರ 4 ಲಕ್ಷ ಹಣ ಪಡೆದು ಮ್ಯಾರೆಜ್ ಬ್ರೋಕರ್ ಟೀಂ ಎಸ್ಕೇಪ್ ಆಗಿದೆ.
ಹೆಣ್ಣಿಗಾಗಿ ಅಲೆದಾಡುತ್ತಿದ್ದ ಸೋಮಶೇಖರನನ್ನು ಟಾರ್ಗೆಟ್ ಮಾಡಿದ ಬ್ರೋಕರ್ ಟೀಂ, ಹೆಣ್ಣು ಕೊಡಿಸ್ತೀವಿ ಅಂತ ಹೇಳಿ 4 ಲಕ್ಷ ಡಿಮ್ಯಾಂಡ್ ಮಾಡಿತ್ತು. ಹೆಣ್ಣು ಸಿಗದೇ ಕೊನೆಗೆ ಮದುವೆಗೆ ವ್ಯಕ್ತಿ ಒಪ್ಪಿಕೊಂಡಿದ್ದ. ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆ ನಡೆದಿತ್ತು. ಮದುವೆ ದಿನವೇ ಪೂರ್ಣ 4 ಲಕ್ಷ ಹಣವನ್ನು ಬ್ರೋಕರ್ ಟೀಂ ಪಡೆದಿತ್ತು.
ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದರಿಂದ ಪತ್ನಿ ಬಗ್ಗೆ ವಿಚಾರಿಸಲು ಪತಿ ಹೋದ ವೇಳೆ ಈಗಾಗಲೇ ಪತ್ನಿಗೆ ಎರಡು ಮದುವೆಯಾದ ಬಗ್ಗೆ ತಿಳಿದುಂದಿದೆ. ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಬ್ರೋಕರ್ ಟೀಂ ಕರೆ ತಂದಿತ್ತು. ಹೀಗಾಗಿ ಬ್ರೋಕರ್ ಟೀಂಗೆ ತಾನು ನೀಡಿದ 4 ಲಕ್ಷ ಹಣ ಮರಳಿಸುವಂತೆ ಯುವಕ ಸೋಮಶೇಖರ್ ಕೇಳಿಕೋಂಡಿದ್ದ. ಹಣ ವಾಪಸ್ ನೀಡದ ಹಿನ್ನೆಲೆ ಮುಧೋಳ ಪೋಲಿಸ್ ಠಾಣೆಯಲ್ಲಿ 7 ಜನರ ವಿರುದ್ಧ ದೂರು ದಾಖಲಿಸಿದ್ದಾನೆ. ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಇಂತಹ ದೊಡ್ಡ ಜಾಲವೇ ಇದೆ

ಈ ಬಗ್ಗೆ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಪ್ರತಿಕ್ರಿಯಿಸಿ, ಮದುವೆ ಮಾಡಿಸಿ ಹಣ ಹೊಡೆಯಲು ಒಂದು ದೊಡ್ಡ ಜಾಲವೇ ಇದೆ. ಈ ಗ್ಯಾಂಗ್ ಎಲ್ಲಿ ಕಾರ್ಯಪ್ರವೃತ್ತಿಯಾಗಿದೆ ಅಂತ ತನಿಖೆ ಮಾಡುತ್ತಿದ್ದೇವೆ. ಈ ಜಾಲದಲ್ಲಿ ಆರೋಪಿಗಳು ಬೆಳಗಾವಿ, ರಾಮದುರ್ಗ, ಶಿವಮೊಗ್ಗ, ಧಾರವಾಡ ಮೂಲದವರಿದ್ದಾರೆ. ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸುವ ಕೆಲಸ ಮಾಡುತ್ತೇವೆ. ಇವರಿಂದ ಈ ಹಿಂದೆಯೂ ಇಂತಹ ಪ್ರಕರಣ ನಡೆದಿದೆ. ಎಲ್ಲವನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Shot Himself: ಶೌಚಾಲಯದಲ್ಲಿ ಗುಂಡು ಹಾರಿಸಿಕೊಂಡು CISF ಯೋಧ ಆತ್ಮಹತ್ಯೆ!