ಧಾರವಾಡ: ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ ದಲಿತ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ (Marakumbi case) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 98 ಮಂದಿ ಅಪರಾಧಿಗಳ ಪೈಕಿ 97 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ಧಾರವಾಡ ಪೀಠ, ಪ್ರಕರಣದ ಎ1 ಆರೋಪಿ ಮಂಜುನಾಥ್ ಹೊರತುಪಡಿಸಿ 97 ಆರೋಪಿಗಳಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಪ್ರಕರಣದ 97 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಎ1 ಮಂಜುನಾಥ್ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ.
ಏನಿದು ಪ್ರಕರಣ?
ಗಂಗಾವತಿ ತಾಲೂಕು ಮರಕುಂಬಿ ಗ್ರಾಮದಲ್ಲಿ ಕಳೆದ 2014ರ ಆ.29 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೈ ಕೋರ್ಟ್ ಆದೇಶ ನೀಡಿದೆ. ಕ್ಷೌರದ ಅಂಗಡಿ ಮತ್ತು ಹೋಟೆಲ್‌ಗೆ ಪ್ರವೇಶಕ್ಕೆ ಸಂಬಂಧಿಸಿದಂತೆ, ದಲಿತರು ಮತ್ತು ಗ್ರಾಮದ ಸವರ್ಣೀಯರ ನಡುವೆ ಗಲಾಟೆ ನಡೆದಿತ್ತು. ನಂತರ ಗಂಗಾವತಿಯ ಚಿತ್ರಮಂದಿರದಲ್ಲಿ ಆರಂಭವಾದ ಗಲಾಟೆ ಮರಕುಂಬಿ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಡುವ ಹಂತ ತಲುಪಿತ್ತು. ಗಲಾಟೆ ಹಿನ್ನೆಲೆ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟು ತನಿಖೆ ಆರಂಭಿಸಿದ್ದರು. ಆದರೆ, ಅದೇ ರಾತ್ರಿ ಆರೋಪಿಗಳು ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಟ್ಟಿದ್ದರು ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ತನಿಖೆ ನಡೆಸಿದ ಪೊಲೀಸರು ಒಟ್ಟು 117 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಹಲವರು ಆರೋಪಿಗಳು ಮೃತಪಟ್ಟಿದ್ದರು.
ಈ ಸುದ್ದಿಯನ್ನೂ ಓದಿ | Viral Video: ಅಪ್ಪನ ಜತೆ ನಡ್ಕೊಂಡು ಹೋಗ್ತಿದ್ದ ಬಾಲಕನ ಕಿಡ್ನಾಪ್‌ಗೆ ಯತ್ನ; ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ-ವಿಡಿಯೊ ಇದೆ
ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅ.24ರಂದು ಆದೇಶಿಸಿತ್ತು. ಪ್ರಕರಣದ ಉಳಿದ 3 ಅಪರಾಧಿಗಳಿಗೆ 5 ವರ್ಷ ಜೈಲು ಹಾಗೂ ತಲಾ 2 ಸಾವಿರ ರೂ. ದಂಡ ಹಾಕಿ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ಐತಿಹಾಸಿಕ ಆದೇಶ ಹೊರಡಿಸಿದ್ದರು.