ಬೆಂಗಳೂರು: ಮಕರ ಸಂಕ್ರಾಂತಿಯ(Makara Sankranti) ಹಬ್ಬವನ್ನು ಭಾರತದ ಉದ್ದಗಲಕ್ಕೂ ನಾನಾ ಹೆಸರುಗಳಿಂದ ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂಕ್ರಾಂತಿಯ ಬಳಿಕ ಉತ್ತರಾಯಣದ ಪುಣ್ಯ ಕಾಲ ಆರಂಭವಾಗುತ್ತದೆ. ಉತ್ತರಾಯಣವು ದೇವತೆಗಳ ಪಾಲಿನ ಹಗಲಾಗಿದ್ದು, ಶುಭ ಸಮಾರಂಭಗಳಿಗೆ ಶುಭ ಸಂದರ್ಭ ಎಂಬ ನಂಬಿಕೆ ಇದೆ. ಈ ಮಕರ ಸಂಕ್ರಾಂತಿಯಂದು ಗಾಳಿ ಪಟಗಳನ್ನು ಹಾರಿಸುವ ಪದ್ಧತಿ ಇದೆ. ಗಾಳಿ ಪಟವನ್ನು ಹಾರಿಸಲು ಕೆಲವು ಕೌಶಲ, ತಾಳ್ಮೆಯ ಅಗತ್ಯ ಇದೆ. ಅದೇ ರೀತಿ ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿಯೂ ಕೌಶಲ, ತಾಳ್ಮೆ ಇದ್ದರೆ ಮಾತ್ರ ಆರ್ಥಿಕ ಸ್ವಾತಂತ್ರ್ಯ ಗಳಿಸಬಹುದು. ಹಾಗಾದರೆ ಉತ್ತರಾಯಣದಲ್ಲಿ ಫೈನಾನ್ಷಿಯಲ್ ಫ್ರೀಡಂ ಗಳಿಸೋದು ಹೇಗೆ? ಎಂಬುದನ್ನು ನೋಡೋಣ(Sankranti Financial Tips)
ಮಕರ ಸಂಕ್ರಾಂತಿ ಎಂದರೆ ಕತ್ತಲಿನಿಂದ ಬೆಳಕಿಗೆ ಪಯಣದ ಆರಂಭ. ಗಾಳಿಪಟವನ್ನು ಹಾರಿಸುವ ಮೂಲಕ ಈ ಸಂಕ್ರಮಣ ಕಾಲವನ್ನು ಆಚರಿಸಲಾಗುತ್ತದೆ. ಅಂದರೆ ಸರಿಯಾದ ದಿಕ್ಕಿಗೆ ಗಾಳಿ ಪಟವನ್ನು ಹಾರಿಸಿದರೆ ಮಾತ್ರ ಎತ್ತರಕ್ಕೆ ಹಾರುತ್ತದೆ. ಇದು ಜೀವನ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೂ ದ್ಯೋತಕವಾಗಿದೆ. ಗಾಳಿ ಪಟಕ್ಕೆ ಆಕಾಶದಲ್ಲಿ ಗಾಳಿ ಮತ್ತು ಪ್ರತಿಕೂಲ ಸನ್ನಿವೇಶ ಎದುರಾಗಬಹುದು. ಪರ್ಸನಲ್ ಫೈನಾನ್ಸ್ ಕೂಡ ಹಾಗೆಯೇ, ಸವಾಲುಗಳು ಎದುರಾಗಬಹುದು. ಗಾಳಿಪಟವನ್ನು ನಾಜೂಕಿನಿಂದ, ತಾಳ್ಮೆಯಿಂದ ಹಾರಿಸುವಂತೆ ಹೂಡಿಕೆಯನ್ನು ತಾಳ್ಮೆಯಿಂದ ಮುಂದುವರಿಸಬೇಕಾಗುತ್ತದೆ. ಅವಕಾಶಗಳಿಗೆ ಕಾಯಬೇಕಾಗುತ್ತದೆ.
ಗಾಳಿ ಪಟ ಹಾರಿಸುವಾಗ, ಅದರ ದಾರವನ್ನು ಸರಿಯಾದ ದಿಕ್ಕಿನಲ್ಲಿ ಬಿಡುವುದು ಮತ್ತು ಎಳೆಯುವುದು ಮುಖ್ಯವಾಗುತ್ತದೆ. ಅದೇ ರೀತಿ ಪರ್ಸನಲ್ ಫೈನಾನ್ಸ್ ನಲ್ಲಿ ಟೈಮಿಂಗ್ ಎನ್ನುವುದು ನಿರ್ಣಾಯಕವಾಗುತ್ತದೆ. ಷೇರು, ಮ್ಯೂಚುವಲ್ ಫಂಡ್, ಗೋಲ್ಡ್ ಬಾಂಡ್, ಆರ್‌ಐಟಿ ಅಥವಾ ಇತರ ಸಾಧನಗಳಲ್ಲಿ ಹೂಡಿಕೆ ಮಾಡುವಾಗ ಸರಿಯಾದ ವಾಲ್ಯುಯೇಶನ್‌ನಲ್ಲಿ ಹೂಡಿಕೆಯ ಅವಕಾಶವನ್ನು ಗಳಿಸಿಕೊಳ್ಳಬೇಕು. ಅಂದರೆ ಸರಿಯಾದ ಟೈಮ್‌ನಲ್ಲಿ ಹೂಡಿಕೆ ಮಾಡಬೇಕು.
ಗಾಳಿಪಟವನ್ನು ಹಾರಿಸುವಾಗ ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸಾಮಾನ್ಯ. ಅದೇ ರೀತಿಯಲ್ಲಿ ಹೂಡಿಕೆದಾರರು ಮಾರುಕಟ್ಟೆಯ ಟ್ರೆಂಡ್, ಇಂಡಸ್ಟ್ರಿಗಳ ಟ್ರೆಂಡ್, ಷೇರಿನ ವಾಲ್ಯುಯೇಶನ್, ಆರ್ಥಿಕತೆಯ ಸೂಚ್ಯಂಕಗಳನ್ನು ಅರ್ಥ ಮಾಡಿಕೊಳ್ಳಬೇಕು.
ಮಕರ ಸಂಕ್ರಾಂತಿ ಎಂದರೆ ರೈತರು ತಾವು ಬೆಳೆದ ಬೆಳೆಗಳ ಫಸಲನ್ನು ಕೊಯ್ಲು ಮಾಡುವ ಸಮಯ. ಹೂಡಿಕೆದಾರರು ಕೂಡ ತಮ್ಮ ಹೂಡಿಕೆಯ ಲಾಭ ಪಡೆಯಲು, ಸೂಕ್ತವಾದ ಕಾಲವನ್ನು ನಿರ್ಧರಿಸುವುದು ಕೂಡ ಮುಖ್ಯ. ರೈತರು ಕೂಡ ವೈವಿಧ್ಯಮಯವಾದ ಬೆಳೆಗಳ ಮೂಲಕ ಆದಾಯ ಗಳಿಸುತ್ತಾರೆ. ಹೂಡಿಕೆದಾರರೂ ರಿಸ್ಕ್ ಅನ್ನು ಕಡಿಮೆ ಮಾಡಲು ಹಲವು ಕಡೆಗಳಲ್ಲಿ ಇನ್ವೆಸ್ಟ್ ಮಾಡಬೇಕು. ಕೃಷಿಗೂ ದೀರ್ಘಾವಧಿಯ ದೂರದೃಷ್ಟಿ ಇರಬೇಕು. ಹೂಡಿಕೆಯೂ ದೀರ್ಘಕಾಲೀನ ಬದ್ಧತೆಯನ್ನು ಹೊಂದಿರಬೇಕು.
ಗಾಳಿಪಟವನ್ನು ಬಿಟ್ಟ ಬಳಿಕ ನೀವು ಅದರ ದಾರವನ್ನು ಯಾವಾಗ ಬಿಡಬೇಕು ಮತ್ತು ಯಾವಾಗ ಎಳೆಯಬೇಕು ಎಂದು ಎಚ್ಚರ ವಹಿಸುತ್ತೀರಿ. ಹೂಡಿಕೆಯನ್ನು ಆರಂಭಿಸಿದ ಬಳಿಕವೂ ಅದಕ್ಕೆ ಗುರಿಗಳನ್ನು ಇಟ್ಟು ನೋಡಬೇಕಾಗುತ್ತದೆ. ಹೂಡಿಕೆಗೆ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ಗೋಲ್ ಇರಬೇಕಾಗುತ್ತದೆ. ಇದಕ್ಕಾಗಿ ಫೈನಾನ್ಷಿಯಲ್ ಪ್ಲಾನ್ ಮಾಡಬೇಕಾಗುತ್ತದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಗಣನೀಯವಾಗಿ ಇಳಿಯುತ್ತಿದೆ. ಸೆನ್ಸೆಕ್ಸ್ 76,791 ಮತ್ತು ನಿಫ್ಟಿ 23,230ರ ಆಸುಪಾಸಿನಲ್ಲಿದೆ. 2024ರ ಸೆಪ್ಟೆಂಬರ್ 27ರಂದು ನಿಫ್ಟಿ ದಾಖಲೆಯ 26,277 ಮಟ್ಟದಲ್ಲಿತ್ತು. ಆಗ ಸೆನ್ಸೆಕ್ಸ್ 85,571ರ ಎತ್ತರದಲ್ಲಿತ್ತು. ಹಾಗಾದರೆ ಕಳೆದ ಮೂರು ತಿಂಗಳಿನಲ್ಲಿ ಸೆನ್ಸೆಕ್ಸ್ 8 ಸಾವಿರಕ್ಕೂ ಹಚ್ಚು ಅಂಕಗಳನ್ನು ಕಳೆದುಕೊಂಡಿದ್ದೇಕೆ? ನಿಫ್ಟಿ 3 ಸಾವಿರ ಅಂಕಗಳನ್ನು ಕಳೆದುಕೊಂಡಿದ್ದೇಕೆ? ಎಂಬ ಆತಂಕ ಹೂಡಿಕೆದಾರರಲ್ಲಿದೆ. ಆದರೆ ದೀರ್ಘಕಾಲೀನ ಹೂಡಿಕೆ ಮಾಡುವವರು ಇದಕ್ಕಾಗಿ ತೀರಾ ಚಿಂತೆಪಡಬೇಕಾಗದ ಅಗತ್ಯ ಇಲ್ಲ.
ಹೀಗಿದ್ದರೂ, ಷೇರು ಸೂಚ್ಯಂಕಗಳ ಕುಸಿತದ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಇದೆ.
ಒಂದು ಕಡೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟವನ್ನು ಮುಂದುವರಿಸಿದ್ದರೆ, ಅಮೆರಿಕದ ಬಾಂಡ್‌ಗಳ ಉತ್ಪತ್ತಿ ಕೂಡ ವೃದ್ಧಿಸಿದೆ. ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳ ತ್ರೈಮಾಸಿಕ ಫಲಿತಾಂಶ ದುರ್ಬಲವಾಗುವ ನಿರೀಕ್ಷೆಯೂ ಸೂಚ್ಯಂಕ ಇಳಿಕೆಗೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸಿದ್ದ ಕಾರ್ಪೊರೇಟ್ ಕಂಪನಿಗಳ ಆದಾಯ ಕಳೆದ ಆರು ತಿಂಗಳಿನಿಂದ ಇಳಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ ಕಳೆದ ಜುಲೈನಿಂದ 23% ಇಳಿಕೆಯಾಗಿದೆ. ರಿಟೇಲ್ ಬಿಸಿನೆಸ್ ದುರ್ಬಲವಾಗಿರುವುದು ಇದಕ್ಕೆ ಕಾರಣ. ಈಗ 2020ರ ಕೋವಿಡ್ ಕಾಲದ ಕೆಳ ಮಟ್ಟಕ್ಕೆ ದರ ಇಳಿದಿದೆ. ಹೀಗಿದ್ದರೂ, ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ ಏರಿಕೆಯಾಗುವ ವಿಶ್ವಾಸವನ್ನು ರೇಟಿಂಗ್ ಏಜೆನ್ಸಿಗಳು ವ್ಯಕ್ತಪಡಿಸಿವೆ.
ಅಮೆರಿಕದಲ್ಲಿ ಫೆಡರಲ್ ರಿಸರ್ವ್, ತನ್ನ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಕ್ಷೀಣವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಅಲ್ಲಿ ಅನಿರೀಕ್ಷಿತವಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಅಮೆರಿಕದಲ್ಲಿ ಬಡ್ಡಿ ದರ ಇಳಿಕೆಯಾಗದಿದ್ದರೆ, ಡಾಲರ್ ತನ್ನ ಪ್ರಾಬಲ್ಯವನ್ನು ಮುಂದುವರಿಸುತ್ತದೆ. ಅಮೆರಿಕದ ಬಾಂಡ್‌ಗಳಲ್ಲಿ ಹೂಡಿಕೆ ಹೆಚ್ಚಳವಾಗುತ್ತದೆ. ಹೂಡಿಕೆದಾರರು ಭಾರತದಂತಹ ಪ್ರಗತಿಶೀಲ ಮಾರುಕಟ್ಟೆಯಲ್ಲಿನ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಾರೆ. ಹೀಗಾಗಿ ಸೂಚ್ಯಂಕಗಳು ಕುಸಿಯುತ್ತಿವೆ. ಹೀಗಿದ್ದರೂ, ಭಾರತೀಯ ದೇಶೀಯ ಹೂಡಿಕೆದಾರರು ಅಚಲವಾಗಿ ನಿಂತಿರುವುದರಿಂದ ಅನುಕೂಲವಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ 86ಕ್ಕೆ ಇಳಿದಿದೆ. ಇದರ ಪರಿಣಾಮ ಭಾರತದ ಆಮದು ವೆಚ್ಚ ಹೆಚ್ಚಳವಾಗಲಿದೆ ಮತ್ತು ಹಣದುಬ್ಬರಕ್ಕೆ ಕಾರಣವಾಗಲಿದೆ. ಹೀಗಿದ್ದರೂ, ಇದಕ್ಕೆ ಇನ್ನೊಂದು ಆಯಾಮವೂ ಇದೆ. ಅದು ಯಾವುದೆಂದರೆ, ಪ್ರಗತಿಶೀಲ ರಾಷ್ಟ್ರಗಳು ರಫ್ತುದಾರರಿಗೆ ಅನುಕೂಲವಾಗಲು ತಮ್ಮ ಕರೆನ್ಸಿಗಳನ್ನು ಅಪಮೌಲ್ಯ ಮಾಡುತ್ತವೆ. ಆರ್‌ಬಿಐ ಕೂಡ ರೂಪಾಯಿಯ ಅಪಮೌಲ್ಯಕ್ಕೆ ಮಧ್ಯಪ್ರವೇಶಿಸದೆಯೇ, ರಫ್ತುದಾರರಿಗೆ ಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.
ಭಾರತದ ಷೇರು ಮಾರುಕಟ್ಟೆಯು 2024ರಲ್ಲಿ 8.2% ರಿಟರ್ನ್ಸ್ ಕೊಟ್ಟಿದ್ದರೆ, 2023ರಲ್ಲಿ 18.7% ರಿಟರ್ನ್ಸ್ ನೀಡಿತ್ತು. ಹೀಗೆ ಮಾರುಕಟ್ಟೆಯಲ್ಲಿ ರಿಟರ್ನ್ಸ್ ಏರುಪೇರಿನಿಂದ ಕೂಡಿರುವುದು ಸ್ವಾಭಾವಿಕ. ಇದೆಲ್ಲವೂ ಕಳವಳದ ವಿಷಯವಾಗಿದ್ದರೂ, ದೀರ್ಘಕಾಲೀನ ಹೂಡಿಕೆಯ ಮೇಲೆ ಪ್ರಭಾವ ಬೀರುವುದಿಲ್ಲ.
ಇನ್ನು 2025ರ ಸೆಕ್ಟರ್‌ವೈಸ್ ಔಟ್‌ಲುಕ್ ನೋಡೋದಿದ್ರೆ, ಮೂಲಸೌಕರ್ಯ, ಡಿಫೆನ್ಸ್, ಬ್ಯಾಂಕಿಂಗ್, ಬಿಲ್ಡಿಂಗ್ ಮೆಟೀರಿಯಲ್, ಫಾರ್ಮಾ, ಹೆಲ್ತ್‌ಕೇರ್ ಮತ್ತು ಎಫ್‌ಎಂಸಿಜಿ ಕ್ಷೇತ್ರಗಳಲ್ಲಿ ಷೇರು ದರಗಳು ಏರಿಕೆಯಾಗುವ ನಿರೀಕ್ಷೆ ಇದೆ.
ಅಂತಿಮವಾಗಿ ಹೂಡಿಕೆದಾರರು ಒಂದು ವಿಷಯವನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು. ಭಾರತವು 2025ರಲ್ಲಿಯೂ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. 6.5% ಜಿಡಿಪಿ ಗ್ರೋತ್ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ತನ್ನ ಮುನ್ನೋಟದಲ್ಲಿ ತಿಳಿಸಿದೆ. ಹೀಗಾಗಿ ದೀರ್ಘಾವಧಿ ಹೂಡಿಕೆಯ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಬಹುದು.
ಈಗ ಕಳೆದ ಒಂದು ವರ್ಷದಲ್ಲಿ ಹೆಚ್ಚು ಆದಾಯ ನೀಡಿದ 5 ಷೇರುಗಳನ್ನು ನೋಡೋಣ;
- ಚೋಳ ಮಂಡಳಂ ಇನ್ವೆಸ್ಟ್‌ಮೆಂಟ್ : 42%
- ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: 41%
- ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್: 35%
- ಯುಟಿಐ ಅಸೆಟ್ ಮ್ಯಾನೇಜ್ಮೆಂಟ್ : 31%
- ಮುತ್ತೂಟ್ ಫೈನಾನ್ಸ್ :30%
ಈ ಸುದ್ದಿಯನ್ನೂ ಓದಿ:Mark Zuckerberg: ಮಾರ್ಕ್ ಜುಕರ್‌ಬರ್ಗ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ!