Thursday, 15th May 2025

Lawyers Protest: ವಕೀಲನ ಮೇಲೆ ಹಲ್ಲೆಗೆ ವ್ಯಾಪಕ ಖಂಡನೆ; ಸಿಪಿಐ ಅಮಾನತಿಗೆ ಒತ್ತಾಯ

Lawyers Protest

ತುಮಕೂರು: ವಕೀಲನ ಮೇಲೆ ಸಿಪಿಐ ಹಲ್ಲೆ ಮಾಡಿರುವುದನ್ನು ಖಂಡಿಸಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದ ಮುಂದೆ ನೂರಾರು ವಕೀಲರು ಮಂಗಳವಾರ ಪ್ರತಿಭಟನೆ (Lawyers Protest) ನಡೆಸಿದರು. ತಾಲೂಕಿನ ಹೊನ್ನೇನಹಳ್ಳಿಯಲ್ಲಿ ರೈಲ್ವೆಗೆ ಜಮೀನು ಸ್ವಾಧೀನಪಡಿಸಿಕೊಂಡ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಸಿಪಿಐ ದಿನೇಶ್ ಕುಮಾರ್ ಅವರು ವಕೀಲ ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿದ ವಕೀಲರು, ಕೂಡಲೇ ಸಿಪಿಐನ ಅಮಾನತು ಮಾಡುವಂತೆ ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ವಕೀಲ ರವಿಕುಮಾರ್ ಮಾತನಾಡಿ, ನಮ್ಮ ಭೂಮಿಯನ್ನು ಯಾವುದೇ ನೋಟಿಸ್ ನೀಡದೆ ರೈಲ್ವೆ ಇಲಾಖೆ ವಶಪಡಿಸಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಏಕಾಏಕಿ ಸಿಪಿಐ ದಿನೇಶ್ ಕುಮಾರ್ ನನಗೆ ಹೊಡೆದಿದ್ದಾರೆ. ಬೂಟು ಗಾಲಿನಿಂದ ಒದ್ದು, ಶರ್ಟ್ ಹಿಡಿದು ಕೈದಿಗಳನ್ನು ಎಳೆದುಕೊಂಡು ಹೋದಂತೆ ಹೋಗಿದ್ದಾರೆ. ನಾನು ಏನೂ ಮಾಡಿಲ್ಲ, ಆದರೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್.ಪಿ ಅಶೋಕ್ ಅವರನ್ನು ಸುತ್ತುವರಿದ ವಕೀಲರು ಸಿಪಿಐ ಅಮಾನತಿಗೆ ಪಟ್ಟುಹಿಡಿದರು. ವಕೀಲರ ಮನವಿ ಆಲಿಸಿದ ಪೊಲೀಸ್ ವರಿಷ್ಠಾಧಿಕಾರಿ, ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ವಕೀಲರು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಈ ಸುದ್ದಿಯನ್ನೂ ಓದಿ | Bullets Fired: ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿ; ತಪ್ಪಿದ ಭಾರಿ ಅನಾಹುತ