Saturday, 10th May 2025

Lakshmi Hebbalkar: ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕೆಂಬ ಸ್ವಾಮೀಜಿ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ಏನು?

lakshmi hebbalkar

ವಿಜಯಪುರ: ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದ್ದಾರೆ.

ʼಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಕುರಿತಂತೆ ವಿಜಯಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ದೇಶದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗೂ ಒಂದೇ ಕಾನೂನು, ಜನಸಾಮಾನ್ಯರಿಗೂ ಒಂದೇ ಕಾನೂನು. ಸ್ವಾಮೀಜಿಯವರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಇಂತಹ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ತಿಳಿಸಿದರು‌.

ಈ ಸುದ್ದಿಯನ್ನೂ ಓದಿ | MB Patil: ಜನವರಿಯಲ್ಲಿ ‘ಏಕಗವಾಕ್ಷಿ ವ್ಯವಸ್ಥೆ’ ಉದ್ಘಾಟನೆಗೆ ಸಿದ್ಧ; ಎಂ.ಬಿ. ಪಾಟೀಲ

ಪಂಚಮಸಾಲಿ ಸಮಾಜದ ಜತೆಗಿದ್ದೇನೆ

ನಾನು ಕರ್ನಾಟಕದ ಮಂತ್ರಿಯಾಗಿದ್ದರೂ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈಗಲೂ ಸಕ್ರಿಯವಾಗಿರುವೆ. ಮಂತ್ರಿಯಾಗಿರುವ ಕಾರಣ ಕೆಲಸದ ಒತ್ತಡದಿಂದಾಗಿ ಮೀಸಲಾತಿ ಹೋರಾಟದ ಒಂದೆರಡು ಸಭೆಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನನ್ನ ತಮ್ಮ ಹಾಗೂ ನನ್ನ ಮಗ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಪಂಚಮಸಾಲಿ ಸಮಾಜ ಸದಾ ನನ್ನೊಂದಿಗಿದೆ. ನಾನು ಕೂಡ ಯಾವಾಗಲೂ ಸಮಾಜದ ಜತೆ ಇರುವೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಾಲ್ಕು ಭಾರಿ ಭೇಟಿಯಾಗಿದ್ದೆವು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಈಗಾಗಲೇ ಮೂರು ಬಾರಿ ಭೇಟಿ ಮಾಡಲಾಗಿದೆ. ನಮ್ಮ ಸಮಾಜಕ್ಕೆ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Namma Metro: 2025ರ ಡಿಸೆಂಬರ್‌ನಲ್ಲಿ ನಮ್ಮ ಮೆಟ್ರೋ ಪಿಂಕ್‌ ಲೈನ್‌ ಸಂಚಾರಕ್ಕೆ ಮುಕ್ತ

ಸಚಿವ ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಮಾತನಾಡಲು ನಾನು ಪಕ್ಷದ ಅಧ್ಯಕ್ಷೆಯೂ ಅಲ್ಲ, ಹೈಕಮಾಂಡ್ ಕೂಡ ಅಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.