ಕೊರಟಗೆರೆ: ಕೊರಟಗೆರೆ ತಾಲೂಕು ಕೃಷಿಕ ಸಮಾಜಕ್ಕೆ (Koratagere News) 14 ವರ್ಷದ ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸೇರಿ ನೂತನ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ. 2025 ರಿಂದ 2029ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಜಿ. ಮಲ್ಲಪ್ಪ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ (Koratagere Krishika Samaj) ಸ್ಥಾನಕ್ಕೆ ಜಿ. ಮಲ್ಲಪ್ಪ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಉಳಿದಂತೆ ಯಾರು ಕೂಡ ಅರ್ಜಿ ಸಲ್ಲಿಸದ ಕಾರಣ ಅವರ ಅವಿರೋಧ ಆಯ್ಕೆ ಘೋಷಿಸಲಾಗಿದೆ.
ಈ ವೇಳೆ ನೂತನ ಅಧ್ಯಕ್ಷ ಜಿ.ಮಲ್ಲಪ್ಪ ಮಾತನಾಡಿ, ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಜಿ. ಪರಮೇಶ್ವರ್ ಅವರ ಸಹಕಾರದಿಂದ 15 ಜನ ಸದಸ್ಯರ ಒಮ್ಮತದಿಂದ ಇಂದು ಕೃಷಿ ಸಮಾಜದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಎಲ್ಲ ಸದಸ್ಯರ ಜೊತೆಗೂಡಿ ತಾಲೂಕಿನ ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಕೃಷಿಕ ಸಮಾಜದ ಪದಾಧಿಕಾರಿಗಳ ಚುನಾವಣೆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಆ ಸಮಸ್ಯೆ ಬಗೆಹರಿದ ಹಿನ್ನೆಲೆ ಕಳೆದ 14 ವರ್ಷಗಳ ಬಳಿಕ ಚುನಾವಣೆ ನಡೆಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಪದಾಧಿಕಾರಿಗಳ ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಉಳಿದ ಯಾರೊಬ್ಬರು ಅರ್ಜಿ ಸಲ್ಲಿಸದ ಕಾರಣ ಅರ್ಜಿ ಸಲ್ಲಿಸಿದ ಅಭ್ಯರ್ಥಿ ಜಿ.ಮಲ್ಲಣ್ಣ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ಉಪಾಧ್ಯಕ್ಷರಾಗಿ ಜಿ.ಕೆ. ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜು ಎ.ಆರ್., ಖಜಾಂಚಿಯಾಗಿ ಪಿ.ವಿ. ವೀರಭದ್ರಯ್ಯ, ಜಿಲ್ಲಾ ಪ್ರತಿನಿಧಿಯಾಗಿ ಡಿ.ಕೆ. ರಂಗನಾಥ್ ಅವಿರೋಧವಾಗಿ ಆಯ್ಕೆಯಾದರೆ ಇನ್ನುಳಿದವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ರುದ್ರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವತ್ಥ್ ನಾರಾಯಣ್, ಅರಕೆರೆ ಶಂಕರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಓಬಳರಾಜು, ಮುಖಂಡರಾದ ಮಾಲಿಂಗಪ್ಪ, ಚಿಕ್ಕ ರಂಗಯ್ಯ, ಎಲ್ಐಸಿ ರಾಜಣ್ಣ,ತುಮುಲ್ ಮಾಜಿ ನಿರ್ದೇಶಕ ಈಶ್ವರಪ್ಪ,ದಿನೇಶ್ ಸೇರಿ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಈ ಸುದ್ದಿಯನ್ನೂ ಓದಿ | Govt Employees: ಒಪಿಎಸ್ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಿಎಂ ಭರವಸೆ