Saturday, 10th May 2025

Konkan Railway: ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ: ಸಚಿವ ಸೋಮಣ್ಣ

konkan railway

ಬೆಂಗಳೂರು: ಕೊಂಕಣ ರೈಲ್ವೆಯನ್ನು (Konkan Railway) ಭಾರತೀಯ ರೈಲ್ವೆಯೊಂದಿಗೆ (Indian Railways) ವಿಲೀನಗೊಳಿಸಲು ಕೇಂದ್ರ ಸರ್ಕಾರ (Central Government) ಚಿಂತನೆ ನಡೆಸಿದೆ. ಜನರಿಗೆ ನೀಡುವ ಸೇವೆಗಳನ್ನು ಸುಧಾರಿಸುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದು ರೈಲ್ವೆ ಖಾತೆಯ ಸಹಾಯಕ ಸಚಿವ ವಿ ಸೋಮಣ್ಣ (V Somanna) ಹೇಳಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದ ಪುಣೆ ಹುಬ್ಬಳ್ಳಿ ನಡುವಣ ವಂದೇ ಭಾರತ್ ರೈಲನ್ನು (Vande Bharat Train) ಸ್ವಾಗತಿಸಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದ ಅವರು, ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ, ಕೊಂಕಣ ರೈಲ್ವೆ ವಿಲೀನದ ವಿಚಾರ ಪ್ರಸ್ತಾಪಿಸಿದರು.

ಕೊಂಕಣ ರೈಲ್ವೆ ಜಾಲವು ಕೇರಳದಿಂದ ಮಹಾರಾಷ್ಟ್ರದವರೆಗೆ ವ್ಯಾಪಿಸಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಒಟ್ಟು 742 ಕಿ.ಮೀ. ಕ್ರಮಿಸುತ್ತದೆ. ಇಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಹೀಗಾಗಿ ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಲೀನ ವಿಚಾರವಾಗಿ ನಾವು ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ, ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ಈ ಹಿಂದೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರದ ಶೇ 50ರಷ್ಟು ಕೊಡುಗೆಯೊಂದಿಗೆ ರಾಜ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ದೊರೆಯುವುದಿಲ್ಲ. ಈ ಕಾರಣಕ್ಕೆ ಎಲ್ಲಾ ವೆಚ್ಚವನ್ನು ಕೇಂದ್ರವೇ ಭರಿಸಲು ನಿರ್ಧರಿಸಿದೆ ಎಂದು ಸೋಮಣ್ಣ ತಿಳಿಸಿದರು.

ರಾಜ್ಯದ ಹಲವು ಬಾಕಿ ಇರುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಮೂರು ವರ್ಷಗಳಲ್ಲಿ ಬೆಳಗಾವಿ-ಧಾರವಾಡ ನಡುವಿನ ನೇರ ರೈಲು ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಆರಂಭವಾದ ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲು ಧಾರವಾಡ, ಸತಾರಾ, ಸಾಂಗ್ಲಿ, ಮೀರಜ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಕೇವಲ 8.5 ಗಂಟೆಗಳಲ್ಲಿ 557 ಕಿಮೀ ಕ್ರಮಿಸುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಸಮಯವನ್ನು ಸುಮಾರು 3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Vande Bharat train : 6 ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ; ವಿವರ ಇಲ್ಲಿದೆ…

Leave a Reply

Your email address will not be published. Required fields are marked *