Saturday, 10th May 2025

KAS Prelims Exam: ಡಿ.29ಕ್ಕೆ ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ; ಯಾರೆಲ್ಲಾ ಬರೆಯಬಹುದು?

KAS Prelims Exam

ಬೆಂಗಳೂರು: ಕೆಎಎಸ್‌ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಭಾಷಾಂತರ ಸೇರಿ ಹಲವು ಲೋಪದೋಷ ಕಂಡುಬಂದ ಹಿನ್ನೆಲೆ ಮುಂದೂಡಿಕೆಯಾಗಿದ್ದ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ದಿನಾಂಕ ನಿಗದಿ ಮಾಡಿದೆ. ಶೀಘ್ರ ದಿನಾಂಕ ಘೋಷಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದರಿಂದ, ಡಿ.29ಕ್ಕೆ ಕೆಎಎಸ್‌ ಪ್ರಿಲಿಮ್ಸ್‌ ಮರು ಪರೀಕ್ಷೆಯನ್ನು (KAS Prelims Exam) ಕೆಪಿಎಸ್‌ಸಿ ನಿಗದಿಪಡಿಸಿದೆ.

ಈ ಬಗ್ಗೆ ಕೆಪಿಎಸ್‌ಸಿ ಪ್ರಕಟಣೆ ಹೊರಡಿಸಿದ್ದು, 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಮತ್ತು ತಿದ್ದು ಪಡಿ ಅಧಿಸೂಚನೆಗಳನ್ನು ಕ್ರಮವಾಗಿ 2024ರ ಮಾರ್ಚ್‌ 26, ಏಪ್ರಿಲ್ 2, ಏಪ್ರಿಲ್ 19 ಮತ್ತು ಜುಲೈ 6ರಂದು ಹೊರಡಿಸಲಾಗಿತ್ತು. ಈ ಹುದ್ದೆಗಳಿಗೆ ಪೂರ್ವಭಾವಿ ಮರುಪರೀಕ್ಷೆಯನ್ನು (KAS Prelims Re-Exam) ಡಿ. 29ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ಈ ದಿನಾಂಕದಂದು ಯಾವುದೇ ಪರೀಕ್ಷೆಯು ನಿಗದಿಯಾಗದಿರುವ ಕುರಿತು ಪರಿಶೀಲಿಸಲಾಗಿದೆ. ಆದರೆ ಈ ತಿದ್ದುಪಡಿ ಅಧಿಸೂಚನೆ ಜಾರಿಯಾದ ನಂತರ ಇನ್ನಿತರೆ ಯಾವುದೇ ಪರೀಕ್ಷೆ ನಿಗದಿಯಾದಲ್ಲಿ ಅದಕ್ಕೆ ಆಯೋಗವು ಹೊಣೆಯಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ತಿಳಿಸಿದೆ.

ಯಾರೆಲ್ಲಾ ಮರು ಪರೀಕ್ಷೆ ಬರೆಯಬಹುದು?

ಗೆಜೆಟೆಡ್‌ ಪ್ರೊಬೆಷನರ್ಸ್‌ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು 384 ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆಯನ್ನು, ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳೂ ಬರೆಯಬಹುದಾಗಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.

ಈ ಹಿಂದೆ ಆ.27ರಂದು ಕೆಎಎಸ್‌ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಮುಂದೂಡಬೇಕು ಎಂಬ ಅಭ್ಯರ್ಥಿಗಳ ವಿರೋಧದ ನಡುವೆ ಪರೀಕ್ಷೆ ನಡೆದಿತ್ತು. ಆದರೆ, ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡ ಭಾಷಾಂತರದಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಕೆಪಿಎಸ್‌ಸಿ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ ಹೊರಹಾಕಿತ್ತು. ಬಳಿಕ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಎರಡು ತಿಂಗಳ ಒಳಗೆ ಮರುಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರು ಕೆಪಿಎಸ್‌ಸಿಗೆ ಸೂಚನೆ ನೀಡಿದ್ದರು.

ಸಿಎಂ ಸಿದ್ದರಾಮಯ್ಯ ಅವರು ಎರಡು ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದರಿಂದ ಶೀಘ್ರವೇ ಪರೀಕ್ಷಾ ದಿನಾಂಕ ಘೋಷಿಸಬೇಕು ಎಂದು ಅಭ್ಯರ್ಥಿಗಳು ಒತ್ತಾಯ ಮಾಡಿದ್ದರು. ಹೀಗಾಗಿ ಕೆಪಿಎಸ್‌ಸಿ ಪರೀಕ್ಷಾ ದಿನಾಂಕ ಘೋಷಿಸಿದೆ.