ಮಂಡ್ಯ: ಒಂದಷ್ಟು ತಿಂಗಳುಗಳಿಂದ ಸಮ್ಮೇಳನದಲ್ಲಿ (Kannada Sahitya Sammelana) ಬಾಡೂಟ ಬೇಕು ಎಂಬ ಕೂಗಿ ಕೇಳಿ ಬಂದಿತ್ತು. ಅವರು ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅದು ಆಹಾರ ಸಂಸ್ಕೃತಿಯ ವಿಷಯವಷ್ಟೇ ಅಲ್ಲ. ಬಹುತ್ವದ ಭಾರತದಲ್ಲಿ ಎಲ್ಲರಿಗೂ ಹಕ್ಕಿದೆ ಎಂದು ಲೇಖಕಿ ಮತ್ತು ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಬಾಡೂಟದ ಪರ ಧ್ವನಿ ಎತ್ತಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ-1ರಲ್ಲಿ ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಗೋಷ್ಠಿ-1 ರಲ್ಲಿ ಅವರು ಮಾತನಾಡಿದರು. ಕನ್ನಡ ಪುಸ್ತಕಗಳು ಮತ್ತು ಓದುಗ ಬಳಗ ವಿಷಯದ ಬಗ್ಗೆ ಮಾತನಾಡಬೇಕಿದ್ದ ಅಕ್ಷತಾ ಹುಂಚದಕಟ್ಟೆ ವಿಷಯಾಂತರ ಮಾಡಿ, ಬಾಡೂಟದ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಕೆಲ ನಿಮಿಷಗಳ ನಂತರ ಮುಖ್ಯ ವಿಷಯವನ್ನು ಪ್ರಸ್ತಾಪಿಸಿದರು.
ಕನ್ನಡದ ಹಿರಿಯ ಕವಿಗಳಾದ ಪಂಪ, ಪೊನ್ನ, ರನ್ನ ಅವರುಗಳು ರಾಜಾಶ್ರಯದಲ್ಲಿದ್ದರು ಕೂಡ ಜನ ಸಾಮಾನ್ಯರ ಮೇಲೆ ಗಮನಹರಿಸಿ ಅವರುಗಳಗೆ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯವನ್ನು ರಚಿಸಿದರು. ಆದರೆ ಇಂದಿನ ಓದುಗರು ಹಾಗೂ ಪುಸ್ತಕಗಳಲ್ಲಿ 2 ವಿಧಗಳಿವೆ. ಓದುಗರಲ್ಲಿ ಇವತ್ತಿನ ಓದು ಹಾಗೂ ಅರಿವು ಹೆಚ್ಚಿಸುವ ಓದು, ಪುಸ್ತಕದಲ್ಲಿ ಇಂದಿನ ಆಶಯ ನೆರವೇರಿಸುವ ಪುಸ್ತಕ ಹಾಗೂ ಅರಿವು ಪ್ರಜ್ಞೆಯನ್ನು ವಿಸ್ತರಿಸುವ ಪುಸ್ತಕ ಎಂಬುದಾಗಿ 2 ವಿಧಗಳಿವೆ. ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು, ಪ್ರಕಾಶಕರು, ಲೇಖಕರು ಮಾಡುತ್ತ ಬರುತ್ತಿದೆ. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಶ್ರಮಿಸಬೇಕು. ಜೊತೆಗೆ ಪುಸ್ತಕದ ಓದನ್ನು ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಬೇಕು ಎಂದರು.

ಕೆ.ಎಲ್. ರಾಜಶೇಖರ್ ಅವರು ಮುದ್ರಣ ಕ್ಷೇತ್ರದ ತಲ್ಲಣಗಳು ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿ ಭಾರತ ಮುದ್ರಣ ಕ್ಷೇತ್ರಕ್ಕೆ 500 ವರ್ಷದ ಇತಿಹಾಸವಿದ್ದು, ಕರ್ನಾಟಕ ಮುದ್ರಣ ಕ್ಷೇತ್ರಕ್ಕೆ 200 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಆದರೂ ಅನೇಕ ತಲ್ಲಣಗಳು ಮುದ್ರಣ ಕ್ಷೇತ್ರದಲ್ಲಿವೆ. ಮುದ್ರಣ ಕ್ಷೇತ್ರದಲ್ಲಿ ಮುದ್ರಣಾ ಪೂರ್ವ, ಮುದ್ರಣ, ಮುದ್ರಣೋತ್ತರ ಎಂಬ ಮೂರು ಸವಾಲುಗಳಿವೆ. ಮುದ್ರಣ ಕ್ಷೇತ್ರವು ವೃತ್ತಿ ಆಧಾರಿತ ಕೋರ್ಸ್ ಅನ್ನು ಶುರು ಮಾಡಿದರು ಹಾಗೂ ಮುದ್ರಣ ತಂತ್ರಜ್ಞಾನ ವಿಷಯವನ್ನು ಅಳವಡಿಸಿದರು ಯಾರು ಕೂಡ ಇದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಯುವಜನರು ಹಣ ಗಳಿಕೆಗೆ ಸುಲಭ ಮಾರ್ಗಗಳನ್ನು ಹಿಡಿಯುತ್ತಿದ್ದಾರೆ ಎಂದರು.
ಜಿಎಸ್‌ಟಿ ತೆರಿಗೆಯು ಮುದ್ರಣ ಮಾಧ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಶೇಕಡಾ 5 % ರಷ್ಟು ಮುದ್ರಣ ಮಾಧ್ಯಮದ ಪ್ರಕಾಶಕರು, ಲೇಖಕರು ಹಾಗೂ ಓದುಗನ ಮೇಲೆ ಪರೋಕ್ಷ ತೆರಿಗೆ ಬೀಳುತ್ತಿದೆ. ಇದರಿಂದ ಕೆಲವು ಮುದ್ರಣ ಮಾಧ್ಯಮ ಸಂಸ್ಥೆಗಳು ಮುಚ್ಚಲ್ಪಟ್ಟವು. ಇನ್ನುಮುಂದೆ ಶೇಕಡಾ ಕೇವಲ 3 % ರಷ್ಟು ಜಿ ಎಸ್ ಟಿ ವಿಧಿಸಿದರೆ ಮುದ್ರಣ ಮಾಧ್ಯಮವು ಚೇತರಿಸಿಕೊಳ್ಳಲಿವೆ. ಕನ್ನಡ ಮುದ್ರಣ ಕ್ಷೇತ್ರವನ್ನು ಬಲಪಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳ ಕುರಿತು ನಡೆದ ಗೋಷ್ಠಿಯಲ್ಲಿ ಭವಿಷ್ಯದ ಪುಸ್ತಕೋದ್ಯಮ ವಿಷಯದ ಬಗ್ಗೆ ಮಾತನಾಡಿದ ಸಾಹಿತಿ ಮತ್ತು ಪ್ರಕಾಶಕ ವಸುಧೇಂದ್ರ ಅವರು ಕಾಗದಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂದಿಗೂ ಸಹ ಕಾಗದವನ್ನು ಉಪಯೋಗಿಸುತ್ತಿದ್ದೇವೆ. ಪುಸ್ತಕಗಳು ಮತ್ತು ಅದರ ಮಹತ್ವ ಪ್ರಜಾಪ್ರಭುತ್ವದ ಅಡಿಗಲ್ಲು ಯಾವುದೇ ಲಂಗು ಲಗಾಮಿಲ್ಲದೆ ಜನರು ಪುಸ್ತಕಗಳನ್ನು ಓದುವಂತಾದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುವುದು ಎಂದು ಹೇಳಿದರು.
ಇಂದಿನ ಆಧುನಿಕತೆಯಲ್ಲಿ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುವುದು ಹೇಗೆ ಮುಖ್ಯ ಎಂಬುದನ್ನು ಓದುಗರಿಗೆ ತಿಳಿಸಬೇಕು. ಪ್ರತಿವರ್ಷ ಹತ್ತು ಸಾವಿರ ಪುಸ್ತಕಗಳು ಮುದ್ರಣವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನನ್ನ ಪುಸ್ತಕವನ್ನು ಪ್ರಚಾರ ಮಾಡುವುದು ಹೇಗೆ ಎಂಬ ಗೊಂದಲ ಪ್ರತಿ ಲೇಖಕನಿಗೂ ಇದೆ.
ಪ್ರಚಾರದ ಕೊರತೆಯಿಂದ ಒಳ್ಳಯ ಪುಸ್ತಕಗಳು ಓದುಗರಿಗೆ ತಲುಪುತ್ತಿಲ್ಲ ಎಂದರು.
ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುಗರಿಗೆ ಆನ್ಲೈನ್‌ನಲ್ಲಿ ಇ-ಪುಸ್ತಕಗಳು, ಎಐಗಳ ಮೂಲಕ ಮತ್ತು ಆಡಿಯೋ ಪುಸ್ತಕದ ಮಾಹಿತಿಯನ್ನು ಓದುಗರಿಗೆ ಸಿಗುತ್ತವೆ ಅದರೆ ಅದರ ಬಳಸಿಕೊಳ್ಳುವವರ ಕಡಿಮೆ ಇದೆ ಎಂದರು.
ಪೇಪರ್ ಬಳಕೆ ಕಡಿಮೆ ಇರಬಹುದು ಅದರೆ ಅದರ ವಿಸ್ತೀರ್ಣೆ ಬೇರೆ ರೀತಿಯಲ್ಲಿ ಹೆಚ್ಚಾಗಿ ಬೆಳಿಯುತ್ತಿದೆ ಹಾಗೂ ಪುಸ್ತಕ ಮುದ್ರಣದಲ್ಲಿ ಮಾತ್ರ ಕಡಿಮೆಯಾಗಿದೆ ಎಂದು ಹೇಳಿದರು .
ಇದೇ ವೇಳೆ ಮಾತನಾಡಿದ ಅಶೋಕ್ ಕುಮಾರ್ ಕಾಗದದ ಬೆಲೆ ಏರಿಕೆಯಿಂದ ಕೃತಿಗಳ ಮುದ್ರಣ ಕಷ್ಟದಾಯಕವಾಗಿದ್ದು ಪುಸ್ತಕ ಮುದ್ರಣಕ್ಕೆ ಸರ್ಕಾರದ ಸಹಾಯ ಧನ ಸಹಾಯಹಸ್ತ ಅಗತ್ಯವಾಗಿದ್ದು ಇದರಿಂದ ಸಾಹಿತ್ಯ ಕೃಷಿಗೆ ಅನುಕೂಲವಾಗಲಿದೆ ಎಂದು ನುಡಿದರು.
ಪ್ರಕಾಶಕರು ಹಾಗೂ ಮುದ್ರಕರು : ಸವಾಲುಗಳು ಮತ್ತು ಪರಿಹಾರಗಳು ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದ ಅಶೋಕ ಕುಮಾರ್ ಅವರು 1963 ರಲ್ಲಿ ಮುದ್ರಣ ಪ್ರಾರಂಭವಾಯಿತು. 25 ವರ್ಷಗಳ ಹಿಂದೆ ಪ್ರತಿಯೊಬ್ಬರ ಕೈಯಲ್ಲಿದೆ ಒಂದು ಪುಸ್ತಕ ಹಾಗೂ ಒಂದು ಲೇಖನಿ ಇರುತ್ತಿತ್ತು. ಆದರೆ ಇಂದು ತಂತ್ರಜ್ಞಾನ ಮುಂದುವರಿದು ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಆದ್ದರಿಂದ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಮೊಬೈಲ್ ಬಳಕೆಯಿಂದಾಗಿ ಓದುಗರ ಸಂಖ್ಯೆಯು ಕಡಿಮೆಯಾಗುತ್ತಿದೆ. ಆದರೂ ಕೂಡ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿಲ್ಲ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನು ಆಡಿದ ಸಪ್ನಾ ಬುಕ್ ಹೌಸ್‌ನ ದೊಡ್ಡೇಗೌಡ ಅವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪುಸ್ತಕದ ಅಗತ್ಯ ಬಹಳವಾಗಿದೆ. ಕನ್ನಡ ಪತ್ರಿಕೋದ್ಯಮ ಯಾವ ರೀತಿ ಸಮಸ್ಯೆಯನ್ನು ಎದುರಿಸುತ್ತಿದೆ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ. ಪುಸ್ತಕ ತಯಾರಿಸಲು ಬೇಕಾಗಿರುವ ಕಚ್ಚಾ ಸಾಮಗ್ರಿಗಳ ಬೆಲೆಯು ಹೆಚ್ಚಾಗುತ್ತಿದ್ದು, ಪುಸ್ತಕ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿಲ್ಲ. ಬಿಡುಗಡೆಯಾದ ಎಲ್ಲಾ ಪುಸ್ತಕಗಳನ್ನು ಪ್ರಕಟಿಸಲು ಕಷ್ಟ ಸಾಧ್ಯ. ಯಾಕೆಂದರೆ ಓದುಗರ ಸಂಖ್ಯೆ ಕಡಿಮೆಯಿದೆ ಎಂದರು. ಪುಸ್ತಕ ಸಗಟು ಬೆಲೆ ಸ್ಥಗಿತವಾಗಿದ್ದು, ಇಂದಿನ ದಿನಗಳಲ್ಲಿ ಪ್ರಕಾಶಕರು ಸಂಕಷ್ಟದಲ್ಲಿದ್ದಾರೆ. ಗ್ರಂಥಾಲಯದಲ್ಲಿ ಹೊಸ ಓದುಗರು ಸಿಗುತ್ತಿಲ್ಲ. ಓದುಗರು ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಓದುಗರು ಪುಸ್ತಕದ ಇಂದಿನ ಗುಣಮಟ್ಟವನ್ನು ಗಮನಿಸದೆ, ಪುಸ್ತಕದ ರಿಯಾಯತಿಯನ್ನು ಗಮನಿಸುತ್ತಾರೆ. ಎಲ್ಲರೂ ಖಾಸಗಿ ಮನೋರಂಜನೆಗೆ ಒಳಗಾಗುತ್ತಿದ್ದು, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಮನೋರಂಜನೆ ಪಡುತ್ತಿದ್ದಾರೆ. ಕನ್ನಡ ಓದುಗರ ಸಂಖ್ಯೆ ಮೊಬೈಲ್ ಬಂದ ಮೇಲೆ ಕ್ಷೀಣಿಸತೊಡಗಿತು. ಕನ್ನಡ ಪ್ರಕಾಶಕರು ಹಾಗೂ ಲೇಖಕರಿಗೆ ಉತ್ತೇಜನ ನೀಡುವ ಮೂಲಕ ಪುಸ್ತಕೋದ್ಯಮಕ್ಕೆ ಇರುವ ಸಂಕಷ್ಟವನ್ನು ಪರಿಹರಿಸಬೇಕು ಎಂದು ಸರ್ಕಾರದಲ್ಲಿ ಮನವಿ ಮಾಡಿಕೊಂಡರು. ಸರ್ಕಾರ ಈ ಕುರಿತು ಗಮನಹರಿಸದಿದ್ದರೆ ಲೇಖಕರು ಮತ್ತು ಪ್ರಕಾಶಕರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಪ್ಯಾನ್ ಇಂಡಿಯಾ ಚಂದನವನವನ್ನು ಕೊಲ್ಲುತ್ತಿದೆ: ರಾಜೇಂದ್ರ ಸಿಂಗ್ ಬಾಬು
ಗದಗ ವಿದ್ಯಾನಿಧಿ ಪ್ರಕಾಶನ ಜಯದೇವ ಮೆಣಸಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಳೆದ 15 ವರ್ಷಗಳಿಂದ ಪುಸ್ತಕಗಳು ಅಳಿವಿನಂಚಿನಲ್ಲಿವೆ ಎಂಬುದು ಕಂಡು ಬರುತ್ತಿದೆ. ಅತಿಯಾದ ಹೆಚ್ಚಿನ ಮೊಬೈಲ್ ಬಳಕೆಯ ಅಂತರ್ಜಾಲ ವ್ಯವಸ್ಥೆಯಿಂದ ಹಾಗೂ ಮುದ್ರಣ ಕ್ಷೇತ್ರದಲ್ಲಿ ಕಾರ್ಮಿಕರ ಸಂಖ್ಯೆ ಕೊರತೆಯಿಂದ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂಬುದು ತಿಳಿದುಬರುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬದುಕಬೇಕು ಎಂದು ತಿಳಿಸಿದರು.