ಮಂಡ್ಯ: ಪ್ಯಾನ್ ಇಂಡಿಯಾ ಎಂಬುದು ಇಡೀ ಕನ್ನಡ ಚಿತ್ರೋದ್ಯಮವನ್ನು (Kannada Sahitya Sammelana) ಕೊಲ್ಲುತ್ತಿರುವ ಪರಿಕಲ್ಪನೆ. ಯಾರೋ ಒಂದೊಬ್ಬರ ಲಾಭಕ್ಕಾಗಿ ಇಡೀ ಚಲನಚಿತ್ರೋದ್ಯಮದವರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಗುಡುಗಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ‘ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದ ಸವಾಲುಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಸಮಸ್ಯೆಗಳು ಅಂದಿನಿಂದಲೂ ಇವೆ. ಅಂದು ಅದನ್ನು ಎದುರಿಸಲು ಎಲ್ಲರೂ ಒಟ್ಟಾಗುವಂತೆ ರಾಜ್‌ಕುಮಾರ್ ಅವರ ನಾಯಕತ್ವ ಇತ್ತು. ಇಂದು ಅಂಥವರು ಯಾರೂ ಇಲ್ಲ. ಹೀಗಾಗಿ ಪರಭಾಷಿಕರು ಮೆರೆಯುತ್ತಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಅನ್ಯಭಾಷೆ ಚಿತ್ರಗಳನ್ನು ಜನ 2000 ಟಿಕೆಟ್ ದರ ಕೊಟ್ಟು ನೋಡುತ್ತಿದ್ದಾರೆ. ಆದರೆ ನಮ್ಮ ಚಿತ್ರಗಳು ದಿವಾಳಿಯಾಗುತ್ತಿವೆ. ಇದಕ್ಕೆ ಅರ್ಥವಿದೆಯೇ ಎಂದು ಅವರು ಪ್ರಶ್ನಿಸಿದರು.
ಇಂದಿನ ನಟರು ಅವರದೇ ವ್ಯವಹಾರ, ಇಮೇಜ್ ಕಟ್ಟಿಕೊಳ್ಳುವುದರಲ್ಲಿ ಆಸಕ್ತರಾಗಿದ್ದಾರೆ. ಯಾರೂ ಉದ್ಯಮದ ಬೆಳವಣಿಗೆ ಯೋಚಿಸುತ್ತಿಲ್ಲ. ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ ತೆರಿಗೆ ಹಾಕಬೇಕು. ಕನ್ನಡ ಚಿತ್ರಗಳಿಗೆ ಹೆಚ್ಚಿನ ವಿನಾಯಿತಿ ಕೊಡಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಬಂಗಾರದ ಮನುಷ್ಯದಂಥ ಚಿತ್ರವನ್ನು ಇವತ್ತು ಮಾಡುವ ಸಾಹಸ ಯಾರೂ ಮಾಡುವುದಿಲ್ಲ. ನೆಟ್‌ಫ್ಲಿಕ್ಸ್‌ನಂಥ ಒಟಿಟಿಗಳಲ್ಲಿ ಕನ್ನಡ ಚಿತ್ರಗಳಿಗೆ ಆದ್ಯತೆಯೇ ಇಲ್ಲ. ಅವುಗಳನ್ನು ನಾವು ಯಾಕೆ ಬಿಟ್ಟಿಯಾಗಿ ಒಳಗೆ ಬಿಟ್ಟುಕೊಳ್ಳಬೇಕು ಎಂದು ಅವರು ಪ್ರಶ್ನಿಸಿದರು. ಅವರ್ಯಾರಿಗೂ ಇಲ್ಲದ ಸೆನ್ಸಾರ್ ಕನ್ನಡ ಚಿತ್ರಗಳಿಗೆ ಮಾತ್ರ ಇದೆ. ಒಟಿಟಿ ಕಂಟೆಂಟ್‌ಗಳಲ್ಲಿ ಪ್ರಣಯದ ದೃಶ್ಯಗಳೇ ಇಪ್ಪತ್ತು ನಿಮಿಷ ಇರುತ್ತವೆ. ನಾವು ನಮ್ಮ ಅತ್ಯುತ್ತಮ ಸಂಸ್ಕೃತಿಯ ವಿಷಯಗಳನ್ನು ತೆಗೆದುಕೊಂಡು ಹೋದರೆ ಮನ್ನಣೆ ಇಲ್ಲವಾಗಿದೆ ಎಂದು ಬೇಸರಿಸಿದರು.
ʼಗಂದದ ಗುಡಿʼ ಫಿಲಂ ಅನ್ನೇ ಇನ್ನೊಂದು ರೀತಿಯಿಂದ ʼಪುಷ್ಪʼ ಮಾಡಿದ್ದಾರೆ. ನನ್ನ ಮುತ್ತಿನ ಹಾರ ಚಿತ್ರವನ್ನೇ ತುಸು ಬದಲಾಯಿಸಿ ʼಅಮರನ್ʼ ಚಿತ್ರ ಮಾಡಿದರು. ಅವರು ಮುನ್ನೂರು ಕೋಟಿ ಲಾಭ ಮಾಡಿಕೊಂಡರು. ನಾನು ನಷ್ಟ ಮಾಡಿಕೊಂಡೆ ಎಂದು ಬಾಬು ನುಡಿದರು. ವಸುಧೇಂದ್ರ ಅವರ ತೇಜೋ ತುಂಗಭದ್ರಾ ಕಾದಂಬರಿ ಅದ್ಭುತವಾಗಿದೆ. ಅದನ್ನು ತೆಗೆದುಕೊಂಡು ಒಬ್ಬರು ನಿರ್ಮಾಪಕರಲ್ಲಿಗೆ ಹೋಗಿದ್ದೆ. ಅವರು ಕತೆಯನ್ನು ಕೇಳಿಸಿಕೊಳ್ಳಲೇ ತಯಾರಿರಲಿಲ್ಲ. ಇದು ಕನ್ನಡದ ಕತೆಗಳ ಇಂದಿನ ಸ್ಥಿತಿಯಾಗಿದೆ ಎಂದು ವಿಷಾದಿಸಿದರು.
ಒಟಿಟಿಯಿಂದ ಮೊದಲ ಸವಾಲು ಕನ್ನಡ ಭಾಷೆಗೆ ಉಂಟಾಗಿದೆ. ಮಕ್ಕಳು ಬೇರೆ ಭಾಷೆಯ ಕಂಟೆಂಟ್ ಅನ್ನೇ ಬಯಸುತ್ತಿದ್ದಾರೆ. ಪ್ರಮುಖ ಒಟಿಟಿಗಳಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯವಿಲ್ಲ ಎಂದು ʼಚಲನಚಿತ್ರ ಎದುರಿಸುತ್ತಿರುವ ಒಟಿಟಿ ಸವಾಲುʼ ಕುರಿತು ಮಾತನಾಡಿದ ಡಿ. ಸತ್ಯಪ್ರಕಾಶ್ ಹೇಳಿದರು. ಕನ್ನಡದ ನಿರ್ದೇಶಕರಿಗೆ ಗಂಭೀರ ಸವಾಲು ಒದಗಿದೆ. ಕನ್ನಡದಲ್ಲಿ ಯೋಚಿಸುವ ಮನಸ್ಸುಗಳಿಗಾಗಿ ಸಿನಿಮಾ ಮಾಡಬೇಕೇ ಅಥವಾ ಬೇರೆ ಭಾಷೆಯವರನ್ನು ಗಮನದಲ್ಲಿಟ್ಟುಕೊಂಡೇ ಮಾಡಬೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಮಾರುಕಟ್ಟೆಯಲ್ಲಿ ಯಾವುದಕ್ಕೆ ರೀಚ್ ಇದೆಯೋ ಅದನ್ನೇ ಬಯಸುವವರು ಒಟಿಟಿಯಲ್ಲಿರುತ್ತಾರೆ. ಹೀಗಾಗಿ ಸೃಜನಶೀಲ ನಿರ್ದೇಶಕರಿಗೆ, ಸ್ವತಂತ್ರ ಚಿಂತಕರಿಗೆ ಅವಕಾಶ ಇಲ್ಲದಾಗಿದೆ. ಪ್ಯಾನ್ ಇಂಡಿಯಾ ಎಂದರೆ ಎಲ್ಲರನ್ನೂ ತಲುಪುವುದು ಎಂದರ್ಥ. ಆದರೆ ಎಲ್ಲರನ್ನೂ ತಲುಪುವುದು ಎಂಬುದಕ್ಕೆ ಅರ್ಥವಿಲ್ಲ. ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಎಂಬ ಹಾಡು ನಮ್ಮದು. ಕಲಾವಿದರ ಯೋಚನೆಗಳನ್ನು ಹೀಗೆ ಸಂಕುಚಿತ ಮಾಡಲಾಗುತ್ತಿದೆ. ಕೇವಲ ಸೆಕ್ಸ್, ಡ್ರಗ್ಸ್ ಮತ್ತು ಕ್ರೈಮ್ ಮಾತ್ರ ರೀಚ್ ಆಗುತ್ತಿದೆ. ಇದಕೆ ಉತ್ತರವಾಗಿ, ಕನ್ನಡದ ನಿರ್ದೇಶಕರು, ನಟರು, ನಿರ್ಮಾಪಕರು ಸಿಂಡಿಕೇಟ್ ಮಾಡಿಕೊಂಡು ಒಟಿಟಿಯವರ ಜೊತೆ ಹೋರಾಡಬೇಕಿದೆ ಎಂದರು.
ಕುಟುಂಬವನ್ನು ಒಂದೆಡೆ ಸೇರಿಸುವ ಶಕ್ತಿ ಕಿರುತೆರೆಗೆ, ಧಾರಾವಾಹಿಗಳಿಗೆ ಇತ್ತು. ಇಂದೂ ಅದು ಇದೆ. ಅದನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ನಟಿ ರಂಜಿನಿ ರಾಘವನ್ ನುಡಿದರು. ಅವರು ʼಕಿರುತೆರೆ ಸಾಧ್ಯತೆ ಮತ್ತು ಸವಾಲುಗಳುʼ ಕುರಿತು ಮಾತನಾಡಿದರು. ಟಿವಿ ಎಂದರೆ ಗೃಹಿಣಿಯಂತೆ. ಕುಟುಂಬದ ಎಲ್ಲರೂ ಆಕೆಯನ್ನು ಬಳಸಿಕೊಳ್ಳುತ್ತಾರೆ. ಆದರೆ ನಂತರ ಕಡೆಗಣಿಸುತ್ತಾರೆ ಅಥವಾ ದೂರುತ್ತಾರೆ. ನಾನು ನಟಿಸಿದ ಪುಟ್ಟಗೌರಿ ಮದುವೆ ಸೀರಿಯಲ್ ಅತಿ ಹೆಚ್ಚು ಟಿಆರ್‌ಪಿ ಗಳಿಸಿತ್ತು. ಆದರೆ ತುಸು ಗಂಭೀರವಾದ ಕನ್ನಡತಿ ಸೀರಿಯಲ್ ಅಷ್ಟು ಸೀರಿಯಲ್ ಪಡೆಯಲಿಲ್ಲ. ಹೀಗೆ ಮನೋಧರ್ಮಗಳನ್ನು ನೋಡಿಕೊಂಡು ಅವರವರಿಗೆ ಬೇಕಾದ ಕಂಟೆಂಟ್ ಕೊಡಬೇಕಿದೆ ಎಂದರು.
ಜನರಿಂದ ಸರಿಯಾದ ಪ್ರತಿಕ್ರಿಯೆ. ಬೇಡಿಕೆ ಬಂದರೆ ಅಂಥ ಕಂಟೆಂಟ್ ಸೃಷ್ಟಿಯಾಗುತ್ತದೆ. ಹೊಸ ವೀಕ್ಷಕರು ಸೃಷ್ಟಿಯಾಗುತ್ತಿದ್ದಾರೆ. ಕನ್ನಡದ ಕಿರುತೆರೆ ಸನ್ನಿವೇಶ ಧನಾತ್ಮಕವಾಗಿದೆ. ಹೊಸಹೊಸ ವಿಷಯಗಳಿಗೆ ನಿರ್ಮಾಪಕ ನಿರ್ದೇಶಕರು ತೆರೆದುಕೊಳ್ಳಬೇಕು ಎಂದರು.
ಗೋಷ್ಠಿಯ ಆಶಯ ಭಾಷಣ ಮಾಡಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ ಅವರು, ರಾಜಕಾರಣಿಗಳಷ್ಟು ಮನರಂಜನೆ ಕೊಡಲು ಇತ್ತೀಚೆಗೆ ನಾವು ಕಲಾವಿದರು ವಿಫಲರಾಗಿದ್ದೇವೆ. ಒಮ್ಮೆ ಇಡೀ ಭಾರತದ ರಂಗಭೂಮಿ, ಕನ್ನಡದ ರಂಗಭೂಮಿಯತ್ತ ತಿರುಗಿ ನೋಡುವಂತಾಗಿತ್ತು. ಅಂಥ ರಂಗಭೂಮಿಗೆ ಸರ್ಕಾರ ಹಾಗೂ ಜನರ ಪ್ರೋತ್ಸಾಹ ಇನ್ನಷ್ಟು ಬೇಕಿದೆ. ರಂಗಭೂಮಿ ಅಭಿವೃದ್ಧಿಗಾಗಿಯೇ ಪ್ರಾಧಿಕಾರ ರಚಿಸಬೇಕಿದೆ ಎಂದರು.
ರಂಗಭೂಮಿಯಿಂದ ಚಲನಚಿತ್ರಕ್ಕೆ ಹೋದವರು ರಂಗಭೂಮಿಯನ್ನು ಮರೆಯಬಾರದು. ರಂಗಾಯಣಗಳನ್ನು ಬಲಿಷ್ಠಗೊಳಿಸಬೇಕು. ವರ್ಷಕ್ಕೆ ಸುಮಾರು 300-400 ಕೋಟಿಯಷ್ಟು ಖರ್ಚು ರಾಜ್ಯದ ಗ್ರಾಮೀಣ ಜನತೆಯೇ ರಂಗಭೂಮಿಗಾಗಿ ಮಾಡುತ್ತಿದ್ದಾರೆ. ರಾಮ- ಕೃಷ್ಣರು ಜನರ ಮನದಲ್ಲಿ ಉಳಿದಿರುವುದು ಹಿಂದುತ್ವದಿಂದ ಅಲ್ಲ, ಬದಲಾಗಿ ರಂಗಭೂಮಿಯಿಂದ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಗೋಷ್ಠಿಯಲ್ಲಿದ್ದರು. ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಯಾಕೆ ಬರುತ್ತಿಲ್ಲ ಎಂಬುದನ್ನು ಗಂಭೀರವಾಗಿ ಎಲ್ಲರೂ ಸೇರಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಹಿರಿಯ ಪತ್ರಕರ್ತ, ವಿಮರ್ಶಕ ಎನ್.ಎಸ್ ಶ್ರೀಧರಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಗೂಗಲ್, ಕೃತಕ ಬುದ್ಧಿಮತ್ತೆಗೂ ಕನ್ನಡ ಕಲಿಸಿ: ಗೊ.ರು. ಚನ್ನಬಸಪ್ಪ ಕರೆ
ಭಾಷಣಗಾರರ ಸಿಟ್ಟು
ಚಲನಚಿತ್ರ ಕುರಿತ ಗೋಷ್ಠಿಯನ್ನು ಪ್ರಧಾನ ವೇದಿಕೆಯಿಂದ ದೂರ ಇಟ್ಟಿರುವುದಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ಆಕ್ರೋಶ ವ್ಯಕ್ತವಾಯಿತು. ನಮ್ಮನ್ನು ಕೇಳುವವರೇ ಇರಲಿಲ್ಲ. ಯಾರು ನೀವು ಎಂದು ಸೆಕ್ಯುರಿಟಿ ಪೊಲೀಸರು ತಡೆದು ಒಳಗೆ ಬರಲು ಬಿಡಲಿಲ್ಲ ಎಂದು ರಾಜೇಂದ್ರ ಸಿಂಗ್ ಆಕ್ಷೇಪಿಸಿದರು. ಗೋಷ್ಠಿಯ ಆಯೋಜಕರು ಸಂಪನ್ಮೂಲ ವ್ಯಕ್ತಿಗಳಿಗೆ ಬ್ಯಾಡ್ಜ್ ಒದಗಿಸಬೇಕಿತ್ತು. ಊಟ ಇಲ್ಲ, ಗತಿಗೆಟ್ಟವರಂತೆ ಸ್ಟೇಜಿಗೆ ಬಂದಿದ್ದೇವೆ. ಇಂಥ ಆತಿಥ್ಯದಿಂದ ಮಂಡ್ಯಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ ಆಕ್ರೋಶಿಸಿದರು.