Sunday, 11th May 2025

Kannada Sahitya Sammelana: ಕನ್ನಡ ಭಾಷೆ ಸಂದಿಗ್ಧ ಪರಿಸ್ಥಿತಿಯಲ್ಲಿದೆ: ಡಾ. ಮಹೇಶ ಜೋಶಿ ಬೇಸರ

Kannada Sahitya Sammelana

ಮಂಡ್ಯ: ಬದಲಾದ ಸಂದರ್ಭದಲ್ಲಿ ಕನ್ನಡ ಭಾಷೆ (Kannada Sahitya Sammelana) ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ , ನಾಡೋಜ ಡಾ. ಮಹೇಶ ಜೋಶಿ ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ‌ಶುಕ್ರವಾರದಿಂದ ಆರಂಭವಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಇಂತಹ ವೇದಿಕೆಗಳ ಮುಖೇನ ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ‌ನಿರಾಸಕ್ತಿ ಹೆಚ್ಚಾಗಿ ಕನ್ನಡ ಭಾಷೆಯಿಂದ ವಿಮುಖರಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಇದಕ್ಕೆ ಮಕ್ಕಳು ಮಾತ್ರ ಹೊಣೆಗಾರರಲ್ಲ, ಮಕ್ಕಳ ಪೋಷಕರೂ ಹೊಣೆಗಾರರು ಎಂದು ಸೂಚ್ಯವಾಗಿ ತಿಳಿಸಿದರು.

ಕನ್ನಡ ಭಾಷೆ ಕೇವಲ ಅನ್ನದ ಭಾಷೆಯಲ್ಲ, ಈ ನೆಲದ ಅಸ್ಮಿತೆ. ಈ ಭಾಷೆಗೆ ತನ್ನದೇ ಆದ ಗಟ್ಟಿತನ ಇದೆ. ಸಾಂಸ್ಕೃತಿಕ ವೈಭವ ಇದೆ. ಆ ಕಾರಣಕ್ಕಾಗಿ ಎಲ್ಲರೂ ಈ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಇದು ಕೇವಲ ಸಮ್ಮೇಳನ ಮಾತ್ರವಲ್ಲ, ಸಾಂಸ್ಕೃತಿಕ ಜಾತ್ರೆ. ಈ ನೆಲದ ಇತಿಹಾಸ, ಪರಂಪರೆ ಸಾರುವ ಜಾತ್ರೆ. ಇಂತಹ ಜಾತ್ರೆ ಸದಾ ಚಲನೆಯಲ್ಲಿರಬೇಕು ಎಂದು ಆಶಿಸಿದರು.

ಈ ಸುದ್ದಿಯನ್ನೂ ಓದಿ | Kannada sahitya sammelana: ಕನ್ನಡವೇ ಕಲಿಕೆಯ ಮಾಧ್ಯಮವಾಗಲಿ; ರಾಜ್ಯ ಸರ್ಕಾರಕ್ಕೆ ಸಮ್ಮೇಳನಾಧ್ಯಕ್ಷ ಗೊರುಚ 21 ಹಕ್ಕೊತ್ತಾಯ

ಹಿಂದಿ ಹೇರಿಕೆ ನಿಲ್ಲಿಸಿ, ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನ್ಯಾಯವಾದ ಪಾಲು ಕೊಡಿ: ಕೇಂದ್ರದ ವಿರುದ್ಧ ಗೊರುಚ ಕಿಡಿ

ಒಕ್ಕೂಟ ಸರಕಾರದಿಂದ ತೆರಿಗೆ ಪಾಲಿನ ಸಲ್ಲಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ರಾಜ್ಯದಲ್ಲಿ ಅನ್ಯಭಾಷಿಕರ ಅಪಾರ ವಲಸೆಯಿಂದ ನಾಡುನುಡಿಯ ಮೇಲೆ ಆಗುತ್ತಿರುವ ದುಷ್ಪರಿಣಾಮ, ಆಂಗ್ಲ ಮಾಧ್ಯಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ತೆರೆಯುವಿಕೆ, ಕನ್ನಡದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಬೆಳವಣಿಗೆ, ಹಿಂದಿಯ ಹೇರಿಕೆ ತಡೆಯುವಿಕೆ ಹಾಗೂ ಬಹುತ್ವಕ್ಕೆ ಮನ್ನಣೆ, ಕನ್ನಡದ ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆ- ಇವೆಲ್ಲವೂ ‌87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರ ಭಾಷಣದಲ್ಲಿ ಸ್ಥಾನ ಪಡೆದುಕೊಂಡವು.

ಪ್ರಾಥಮಿಕ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು ಎಂದು ಸಮ್ಮೇಳನಾಧ್ಯಕ್ಷರು ಎಚ್ಚರಿಸಿದರು.

ಒಕ್ಕೂಟ ಸರ್ಕಾರವು ಹಣಕಾಸು ಆಯೋಗಗಳ ಶಿಫಾರಸ್ಸುಗಳಿಗೆ ಅನುಗುಣವಾಗಿ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲನ್ನು ವರ್ಗಾಯಿಸುತ್ತಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಈ ತೆರಿಗೆ ಪಾಲಿನ ಬಗೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಹೇಳುವುದರಲ್ಲಿ ಸತ್ಯಾಂಶವಿದೆ. ನಬಾರ್ಡ್ ಕರ್ನಾಟಕಕ್ಕೆ ನೀಡುತ್ತಿದ್ದ ಮರುಹಣಕಾಸು ಸಾಲವನ್ನು 2024-25ರಲ್ಲಿ ಶೇ. 58ರಷ್ಟು ಕಡಿತ ಮಾಡಿದೆ. ಈ ಮಾತುಗಳನ್ನು ರಾಜಕೀಯ ಬಣ್ಣದ ಮೂಲಕ ನೋಡುವುದು ಸಲ್ಲ ಎಂದು ಗೊರುಚ ನುಡಿದರು.

ಬಹುಭಾಷಾ ಸಂಸ್ಕೃತಿ ನೀತಿಯನ್ನು ಸಂವಿಧಾನಾತ್ಮಕವಾಗಿ ಕೇಂದ್ರ ಸರ್ಕಾರವು ಪಾಲಿಸಬೇಕು. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕು ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ, ರಾಜ್ಯಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕನ್ನಡವು ಕರ್ನಾಟಕದಲ್ಲಿ ಸಾರ್ವಭೌಮ ಎಂದರೆ, ಅದು ಭಾಷಾಂಧತೆಯಲ್ಲ. ಅದು ಒಂದು ಆದರ್ಶ ಜನತಂತ್ರದ ಬಹುಮುಖ್ಯ ಗುಣ ಎಂದು ಗೊರುಚ ಗುಡುಗಿದರು.

ಈ ಸುದ್ದಿಯನ್ನೂ ಓದಿ | Kannada sahitya sammelana: ಆಂಗ್ಲ ಮಾಧ್ಯಮ ಶಾಲೆ ತೆರೆಯುವಿಕೆ ನಿಲ್ಲಿಸಿ, ಖಾಸಗಿ ಶಾಲೆಗಳಿಗೂ ಅನುಮತಿ ಬೇಡ: ಗೊ.ರು. ಚನ್ನಬಸಪ್ಪ ಆಗ್ರಹ