Saturday, 10th May 2025

Kannada Sahitya Sammelana: ಹರಿದುಬಂತು ಜನಸಾಗರ, ಸಮ್ಮೇಳನ ಅವ್ಯವಸ್ಥೆಯ ಆಗರ

Kannada Sahitya Sammelana

ಮಂಡ್ಯ: ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲ ರೀತಿಯಿಂದಲೂ ಸುವ್ಯವಸ್ಥಿತವಾಗಿ ನಡೆಯಲಿದೆ ಎಂದು ಉಸ್ತುವಾರಿ ಸಚಿವರು ಹಾಗೂ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಭರವಸೆ ಕೊಟ್ಟಿದ್ದರು. ಆದರೆ ಈ ಭರವಸೆಗಳೆಲ್ಲ ಛಿದ್ರಗೊಂಡು ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಗಾಳಿಯಲ್ಲಿ ಚೂರುಚೂರಾಗಿ ಹಾರಾಡಿದವು.

ವಿಐಪಿಗಳ ಆಗಮನವೇ ಪ್ರತಿನಿಧಿಗಳ ನೆಮ್ಮದಿಗೆ ಮೊದಲ ಧಕ್ಕೆ ಇಟ್ಟಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ವಿಐಪಿಗಳ ಅನುಕೂಲ ಹಾಗೂ ಸುರಕ್ಷತೆಗಾಗಿ ಮೊಬೈಲ್‌ ಜಾಮರ್‌ ಅಳವಡಿಸಲಾಗಿತ್ತು. ಹೀಗಾಗಿ ಸಮ್ಮೇಳನ ವೇದಿಕೆಯ ಆಸುಪಾಸಿನಲ್ಲಿ ಎಲ್ಲೂ ಯಾವ ಮೊಬೈಲ್‌ ನೆಟ್‌ವರ್ಕ್‌ ಕೂಡ ಕೆಲಸ ಮಾಡಲಿಲ್ಲ. ಇದರಿಂದ ಸ್ಟಾಲ್‌ಗಳಲ್ಲಿ ಹಾಗೂ ಪುಸ್ತಕ ಮಳಿಗೆಗಳಲ್ಲಿ ಇದ್ದವರು ಪರದಾಡಿದರು. ಯುಪಿಐ ವಹಿವಾಟು ನಡೆಸುವವರೇ ಅನೇಕರಾದ್ದರಿಂದ, ಪುಸ್ತಕ ಬಯಸಿ ಬಂದ ಸಾವಿರಾರು ಮಂದಿ ಅವುಗಳನ್ನು ಕೊಳ್ಳಲಾಗದೆ ಬರಿಗೈಯಲ್ಲಿ ವಾಪಸ್‌ ಹೋಗುವುದನ್ನು ಪುಸ್ತಕ ಮಾರಾಟಗಾರರು ಅಸಹಾಯಕರಾಗಿ ನೋಡುವಂತಾಯಿತು.

ಸಮ್ಮೇಳನದ ಧ್ವಜಾರೋಹಣ ಹಾಗೂ ಮೆರವಣಿಗೆಯಿಂದಲೇ ಸಮಯಪಾಲನೆಯ ಹಳಿ ತಪ್ಪಿತು. 10.30ಕ್ಕೆ ಶುರುವಾಗಬೇಕಿದ್ದ ಸಮಾರಂಭ 12ಗಂಟೆಯಾದರೂ ಆರಂಭವಾಗಲಿಲ್ಲ. ಇದರಿಂದಾಗಿ ಸಮ್ಮೇಳನಾಧ್ಯಕ್ಷರೂ ತಮ್ಮ ಭಾಷಣವನ್ನು ಮೊಟಕು ಮಾಡಬೇಕಾಯಿತು. ತಮ್ಮ ಭಾಷಣದ ಪ್ರಮುಖ ಅಂಶಗಳನ್ನು ಅವರು ಚುಟುಕಾಗಿ ಪ್ರಸ್ತಾವಿಸಿ ಮುಗಿಸಿದರು. ನಂತರ ಎಲ್ಲ ಗೋಷ್ಠಿಗಳೂ ಅದಕ್ಕನುಗುಣವಾಗಿ ಚಲಿಸಲಾರಂಭಿಸಿದವು. ಸಮಾನಾಂತರ ವೇದಿಕೆಗಳ ಗೋಷ್ಠಿಗಳಿಗೆ ಕೂಡ ಈ ಚಾಳಿ ದಾಟಿತು. ಕೆಲವು ಗೋಷ್ಠಿಗಳ ಭಾಷಣಕಾರರು ತಮ್ಮ ವಿಷಯವನ್ನು ಪ್ರಧಾನ ವೇದಿಕೆಯಲ್ಲಿ ಇಡಬೇಕಾಗಿತ್ತು ಎಂದು ಗೊಣಗಿಕೊಂಡರು.

ಮಧ್ಯಾಹ್ನದ ಹೊತ್ತಿಗಾಗಲೇ ಶೌಚಾಲಯಗಳು ಕೊಳೆತು ನಾರತೊಡಗಿದ್ದವು. ಸಿಟಿಯಿಂದ ದೂರದಲ್ಲಿರುವ ಜಾಗಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗಿತ್ತು. ಆದರೆ ಅದು ಯಾವುದಕ್ಕೂ ಸಾಲದೆ ಹೋಯಿತು. ವಿಐಪಿ ಕೌಂಟರ್‌ಗಳಲ್ಲಿದ್ದ ಶೌಚಾಲಯಗಳು ಕೂಡ ಅಧ್ವಾನವಾಗಿದ್ದವು. ಫೈಬರ್‌ ಶೌಚಾಲಯಗಳ ಚಿಲಕಗಳು ಸರಿಯಾಗಿ ಕೆಲಸ ಮಾಡಲಿಲ್ಲ. ಹೀಗಾಗಿ ಇದರೊಳಗೆ ಹೋದ ಮಹಿಳೆಯರು ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮುಗಿಸಿಕೊಳ್ಳಬೇಕಾಯಿತು. ಪುರುಷರು ತುಸು ದೂರದಲ್ಲಿದ್ದ ಕಬ್ಬಿನ ಗದ್ದೆಗಳಿಗೆ ಹೋಗಿ ನಿಸರ್ಗದ ಕರೆ ಮುಗಿಸಿ ಬಂದರು.

ಸಮಾನಾಂತರ ವೇದಿಕೆಗಳು ಪ್ರಧಾನ ವೇದಿಕೆಯಿಂದ ದೂರದಲ್ಲಿ ಹಾಗೂ ಒಳಗೆಲ್ಲೋ ಇದ್ದವು. ಅವು ಅಲ್ಲಿದೆ ಎಂಬುದು ಅಲ್ಲಿನ ಭಾಷಣಕಾರರಿಗೇ ಗೊತ್ತಾಗಲಿಲ್ಲ. ಕೇಳುಗರಿಗೂ ತಿಳಿಸುವ ವ್ಯವಸ್ಥೆ ಇರಲಿಲ್ಲ. ಅದನ್ನು ಸೂಚಿಸುವ ಫಲಕಗಳೂ ಇರಲಿಲ್ಲ. ಈ ಕುರಿತು ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿರಿಯ ಚಿತ್ರ ನಿರ್ಮಾಪಕ ರಾಜೇಂದ್ರ ಸಿಂಗ್‌ ಬಾಬು ಅವರೇ ವೇದಿಕೆಯ ಮೇಲಿನಿಂದಲೇ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಈ ಗೋಷ್ಠಿಗಳಿಗೆ ಜನರೂ ಬರಲಿಲ್ಲ. ಇನ್ನು ಸಮ್ಮೇಳನದ ತಾಣ ನಗರದಿಂದ ದೂರದಲ್ಲಿದೆ. ಸರಿಯಾದ ಪಾರ್ಕಿಂಗ್‌ ವ್ಯವಸ್ಥೆಯಿಲ್ಲ ಎಂದು ಕೆಲವರು ಗೊಣಗಿಕೊಂಡದ್ದು ಕೂಡ ಕೇಳಿಸಿತು.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಕಡೆಗೂ ಸಿಡಿಯಿತು ಬಾಡೂಟದ ಕಿಡಿ; ಗೋಷ್ಠಿಯಲ್ಲಿ ಬಾಡೂಟದ ಪರ ಧ್ವನಿ ಎತ್ತಿದ ಲೇಖಕಿ ಅಕ್ಷತಾ ಹುಂಚದಕಟ್ಟೆ