ಮಂಡ್ಯ: ಸಾಹಿತಿಗಳು ರಾಜಕಾರಣವನ್ನು ಅಸ್ಪೃಶ್ಯತೆಯಿಂದ ನೋಡುತ್ತಿರುವುದು ದುರ್ದೈವ. ಸಾಹಿತ್ಯ ಕೃಷಿ (Kannada Sahitya Sammelana) ಮಾಡುವವರು ರಾಜಕಾರಣಿಗಳನ್ನು ಬಹಳ ದೂರವಿಡಲು ನೋಡುತ್ತಾರೆ. ರಾಜಕಾರಣಿಗಳ ಕೃತಿಗಳನ್ನು ಸಾಹಿತ್ಯಾರ್ಥದಲ್ಲಿ ಪರಿಗಣಿಸುತ್ತಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಆಯೋಜಿಸಿದ್ದ ʼಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯʼ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಸಾಹಿತ್ಯ ರಚನೆ ಅವರ ಪಾತ್ರಗಳನ್ನು ಒಳಗೊಂಡಿರುತ್ತದೆ. ಇದು ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ ಎಂಬುದು ದುರದೃಷ್ಟಕರ. ಎಲ್ಲಾ ಸಾಹಿತ್ಯವೂ ಪ್ರಾಮಾಣಿಕವಾಗಿ ಬರದ ಕಾಲಘಟ್ಟವೂ ಇದೆ. ಪ್ರಜಾಪ್ರಭುತ್ವದ ಬಂದ ಮೇಲೆ ಎಲ್ಲಾ ರೀತಿಯ ಮಗ್ಗಲುಗಳನ್ನು ಸಾಹಿತ್ಯದ ಮೂಲಕ ಕಲಿಯಬಹುದಾಗಿದೆ. ರಾಜಕಾರಣಿ, ಸಾಹಿತಿ ಪ್ರತ್ಯೇಕಿಸುವ ವ್ಯವಸ್ಥೆ ಹೋಗಲಾಡಿಸಬೇಕು. ರಾಜಕೀಯ ಹಾಲಿನಲ್ಲಿ ತುಪ್ಪ ಇದ್ದ ಹಾಗೆ. ನಮ್ಮ ಬದುಕಿನಲ್ಲಿ ರಕ್ತ ರಹಿತ ಸಂಘರ್ಷ ಇರಬೇಕಾದರೆ ರಾಜಕಾರಣ ಇರಬೇಕು. ಸಾಹಿತ್ಯ ರಾಜಕಾರಣ ಪರಿಗಣಿಸಿ ನಿತ್ಯ ಬದುಕಿಗೆ ನಮ್ಮ ಸಂವಿಧಾನ ಅಸ್ತ್ರ. ಸಂವಿಧಾನವನ್ನು ಸಾಹಿತ್ಯ, ಧರ್ಮ ಎಂದು ತಿಳಿದುಕೊಂಡು ಬದುಕಬೇಕು ಎಂದು ತಿಳಿಸಿದರು.
ರಾಜಕೀಯ ವಿಶ್ಲೇಷಕ ರವೀಂದ್ರ ರೇಷ್ಮೆ ಅವರು ಮಾತನಾಡಿ, ನಾವು ರಕ್ತಪಾತ ಸಹಿತ ಯುದ್ಧ, ರಾಜಕೀಯ ನೋಡುತ್ತಿದ್ದೇವೆ. ಕ್ರಿಯಾಶೀಲತೆ ಹಾಗೂ ಚಿಂತನಾಶೀಲತೆ ಸಾಹಿತ್ಯಗಳಲ್ಲಿ ಎರಡು ಲಕ್ಷಣಗಳು. ರಾಜಕಾರಣ ಒಂದು ಅನಿಷ್ಠ ಎಂದು ಮಾತನಾಡುವುದು ಸಹಜವಾಗಿದೆ. ಮಹಾತ್ಮ ಗಾಂಧೀಜಿ, ನೆಹರೂ ಬರವಣಿಗೆಯಲ್ಲಿ ಬದುಕು ಸಾಕ್ಷಾತ್ಕಾರಗೊಳಿಸುವ ವಿಚಾರ ಕಾಣಬಹುದು. ಸಾಹಿತಿಗಳು ರಾಜಕಾರಣ ಕುರಿತು ಪುಸ್ತಕಗಳು ಹೆಚ್ಚಾಗಿ ಬರೆಯುತ್ತಿಲ್ಲ ಎಂದು ಹೇಳಿದರು.
ರಾಜಕೀಯ ಚಿಂತಕ ಬಿ.ಎಲ್.ಶಂಕರ್ ಅವರು ಮಾತನಾಡಿ, ರಾಜಕಾರಣ ಮತ್ತು ಸಾಹಿತ್ಯ ಒಂದೇ. ಕರ್ನಾಟಕದ ಇತಿಹಾಸದಲ್ಲಿನ ಚಳವಳಿಗಳು ಹಾಗೂ ಸಾರ್ವಜನಿಕ ಬದುಕು ನೀತಿ ನಿರೂಪಣೆ ಮಾಡಲು ಅನೇಕ ಸಾಹಿತ್ಯ ಪುಸ್ತಕಗಳು ನೆರವಾಗಿದೆ. ಅನೇಕ ಕವಿಗಳು ತಮ್ಮ ಕವಿತೆಗಳಲ್ಲಿ ರಾಜಕೀಯ ವಿಷಯಗಳನ್ನು ಪರಿಚಯಿಸಿದ್ದಾರೆ. ಮಹಿಳೆಯರು ಹಕ್ಕುಗಳಿಗಾಗಿ ಕವಯಿತ್ರಿಗಳು ಸಾಹಿತ್ಯ ರೂಪಿಸಿದ್ದಾರೆ. ರಾಷ್ಟ್ರದಲ್ಲಿ ನೀತಿ ನಿರೂಪಣೆಗೆ ಸಾಕಷ್ಟು ಸಾಹಿತಿಗಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಅನ್ನದಾನಿ ಮಾತನಾಡಿ, ರಾಜಕೀಯ ಹಾಗೂ ಸಾಹಿತ್ಯ ಹಾಲು ಜೇನಿನಂತೆ. ಎರಡೂ ಬೇರೆ ಬೇರೆಯಾದರೆ ಬದುಕು ದುಸ್ಥರ. ರಾಜಕೀಯ ಹೊರತುಪಡಿಸಿ ನಾವೇನೂ ಮಾಡಲು ಸಾಧ್ಯವಿಲ್ಲ. 10ನೇ ಶತಮಾನದಲ್ಲಿ ಪ್ರಾರಂಭಗೊಂಡ ಸಾಹಿತ್ಯ ಇಂದಿಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಧರ್ಮ, ಸಾಮಾಜಿಕ ಹಾಗೂ ರಾಜಕೀಯ ನೆಲೆಗಟ್ಟು ಮೀರಿಸುವ ಶಕ್ತಿ ಸಾಹಿತ್ಯಕ್ಕಿದೆ. ಜಾನಪದ ಹಾಗೂ ಶಿಷ್ಟ ಸಾಹಿತ್ಯ ಎರಡು ಸಾಹಿತ್ಯಗಳಿವೆ. ಜಾನಪದ ಸಾಹಿತ್ಯಕ್ಕೆ ಬರವಣಗೆ ಇರಲಿಲ್ಲ. ರಾಜ್ಯದಲ್ಲಿ ಹಲವಾರು ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗುತ್ತದೆ. ರಾಜಕೀಯ ಹೊರತುಪಡಿಸಿ ಪ್ರಶಸ್ತಿ ಘೋಷಣೆ ಸಾಧ್ಯವಿಲ್ಲ. ಸಾಹಿತ್ಯಕ್ಕಡ ಓಟಿನ ಮುಲಾಜಿಲ್ಲ. ಸತ್ಯವನ್ನ ನಿರ್ಭಯವಾಗಿ ಹೇಳಲು ಸಾಹಿತ್ಯಕ್ಕೆ ಮಾತ್ರ ಸಾಧ್ಯ ಎಂದು ಹೇಳಿದರು.
ಉತ್ತಮ ಸಾಹಿತ್ಯ ರಾಜಕಾರಣಕ್ಕೆ ದಿಕ್ಸೂಚಿ
ಪತ್ರಿಕಾಕ್ಷೇತ್ರ ಹಾಗೂ ಸಾಹಿತ್ಯ ಲೋಕ ಮೂಲ ಕರ್ತವ್ಯ ಮರೆತಿದೆ. ಜನರ ಸೇವಕರಾಗಿ ಕೆಲಸ ಮಾಡುತ್ತಿಲ್ಲ. ಮಾಲೀಕರಾಗಿ ವಿರೋಧ ಪಕ್ಷದ ನಾಯಕನಂತಿರಬೇಕು. ಸಂದರ್ಭಗಳನ್ನು ಟೀಕೆ, ವಿರೋಧ ಮಾಡುತ್ತಿವೆ.
ಸಾಹಿತ್ಯ ಕ್ಷೇತ್ರದ ಎಲ್ಲರ ಮನಸ್ಥಿತಿ ಬದಲಾಗಬೇಕಿದೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸ್ವೀಕಾರ ಮಾಡಬೇಕು. ವಿಧಾನಸಭೆಯಲ್ಲಿ ಆಗುವ ಭಾಷಗಳ ಸಂಕೋಲೆ ಸಾಹಿತ್ಯದ ಮೂಲಕ ಹೊರತರಬೇಕು. ರಾಜಕಾರಣ ಬಹಳಷ್ಟು ಹದಗೆಡುತ್ತಿರುವುದು ಸಾರ್ವಜನಿಕರು ಅಳಲಾಗಿದೆ. ತಪ್ಪುಗಳನ್ನು ಬರಹದ ಮೂಲಕ ಪ್ರಚುರಪಡಿಸಬಹುದು. ಸಾಹಿತ್ಯದ ಮೂಲಕ ರಾಜಕಾರಣ ಬದಲಾಯಿಸಬಹುದು. ರಾಜಕಾರಣಕ್ಕೆ ಮಾರ್ಗದರ್ಶನ ಮಾಡುವ ಸಾಹಿತ್ಯಬೇಕಿದೆ. ಗಾಂಧೀಜಿ ಬರವಣಿಗೆಯಿಂದ ಸಮಾಜ ಬದಲಾವಣೆಗೆ ಸಾಹಿತ್ಯ ನೀಡಿದ್ದಾರೆ. ಸಾಹಿತಿಗಳನ್ನು ನಾವು ದೂರ ಇಡುವ ಪ್ರಶ್ನೆ ಇಲ್ಲ. ಉತ್ತಮ ಸಾಹಿತ್ಯ ರಾಜಕಾರಣಕ್ಕೆ ದಿಕ್ಸೂಚಿ ಎಂದು ಸಚಿವ ಎಚ್.ಕೆ.ಪಾಟೀಲ್ ಅವರು ತಿಳಿಸಿದರು.
ಸಾಹಿತ್ಯ ಸಮ್ಮೇಳನ ನಡೆಯಲು ರಾಜಕಾರಣ ಕಾರಣ. ಸರಕಾರ ದುಡ್ಡು ಕೊಡದಿದ್ದರೆ ಸಮ್ಮೇಳನ ನಡೆಯಲು ಹೇಗೆ ಸಾಧ್ಯ. ರಾಜಕೀಯ ಮಾಡದಿದ್ದರೆ ಸುಲಭವಾಗಿ ಸಾಹಿತ್ಯ ಬೆಳೆಯಲು ಸಾಧ್ಯವಿಲ್ಲ.
| ಅನ್ನದಾನಿ, ಮಾಜಿ ಶಾಸಕ
ಸಾಹಿತ್ಯ ದೋಣಿ, ನೀರು ರಾಜಕೀಯವಿದ್ದಂತೆ. ರಾಜಕೀಯ ಎಂಬ ನೀರಿನ ಮೇಲೆ ದೋಣಿ ಎಂಬ ಸಾಹಿತ್ಯ ಸಾಗುವ ಅನಿವಾರ್ಯವಿದೆ. ರಾಜಕೀಯ ನೀರಿನ ಮೇಲೆ ಸಾಹಿತ್ಯೆಂಬ ದೋಣಿ ತೇಲಿ ಗುರಿಮುಟ್ಟಲಿ.
| ನಾಡೋಜ ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ