Saturday, 10th May 2025

JDS Meeting: ಚನ್ನಪಟ್ಟಣ ಸೋಲಿನಿಂದ ಯಾರೂ ಎದೆಗುಂದಬೇಕಿಲ್ಲ; ಕೆಚ್ಚಿನಿಂದ ಪಕ್ಷ ಕಟ್ಟೋಣ: ಎಚ್.ಎಂ. ರಮೇಶ್ ಗೌಡ

JDS Meeting

ಬೆಂಗಳೂರು: ಚನ್ನಪಟ್ಟಣ (Channapatna) ವಿಧಾನಸಭೆ ಕ್ಷೇತ್ರದ ಫಲಿತಾಂಶದ ಆತ್ಮಾವಲೋಕನ ಹಾಗೂ ಮುಂಬರುವ ಬಿಬಿಎಂಪಿ (BBMP) ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆಗಳ ಬಗ್ಗೆ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಹತ್ವದ ಸಭೆ (JDS Meeting) ನಡೆಯಿತು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಪ್ರಮುಖವಾಗಿ ಸದಸ್ಯತ್ವ ಅಭಿಯಾನ, ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಯಿತು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಮಾತನಾಡಿ, ಚನ್ನಪಟ್ಟಣ ಸೋಲಿನ ಬಗ್ಗೆ ಯಾರೂ ಎದೆಗುಂದುವ ಅಗತ್ಯವಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ವಾಮಮಾರ್ಗದಿಂದ ಪಡೆದುಕೊಂಡಿರುವ ಗೆಲುವು ಅದಾಗಿದೆ. ಹೀಗಾಗಿ ಕಾರ್ಯಕರ್ತರು, ಮುಖಂಡರು ಚಿಂತೆ ಮಾಡದೆ ಕೆಚ್ಚಿನಿಂದ ಪಕ್ಷ ಕಟ್ಟಲು ತೊಡಗಬೇಕಿದೆ ಎಂದು ಹೇಳಿದರು.

ಸಂಘಟನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರೂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಆದೇಶದಂತೆ ಎಲ್ಲರೂ ಕೆಲಸ ಮಾಡಬೇಕು. ಬೆಂಗಳೂರಿನಲ್ಲಿ ಪ್ರತಿ ವಾರ್ಡ್, ಮತಗಟ್ಟೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 327 ಬಾಣಂತಿಯರ ಸರಣಿ ಸಾವು; ಕುಮಾರಸ್ವಾಮಿ ಕಳವಳ

ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಿದೆ. ಆದರೆ, ಉಪ ಚುನಾವಣೆಯಲ್ಲಿ ಆ ಪಕ್ಷ ಕೈಚಳಕ ತೋರಿಸಿ ಗೆದ್ದಿದೆ. ಅದು ಹೇಗೆಲ್ಲಾ ವಾಮಮಾರ್ಗಗಳನ್ನು ಅನುಸರಿಸಿತು ಎನ್ನುವ ಬಗ್ಗೆ ಹಾದಿಬೀದಿಯಲ್ಲಿ ಜನರು ಚರ್ಚೆ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.

ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮುಖ್ಯ. ಹೀಗಾಗಿ ತಳಮಟ್ಟದಿಂದ ನಾವು ಸಂಘಟನೆ ಮಾಡಿಕೊಂಡು ಬರಬೇಕು. ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Nikhil Kumaraswamy: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಹೊಸ ಶಾಸಕರಿಂದ ಜೆಡಿಎಸ್‌ ಕಾರ್ಯಕರ್ತರಿಗೆ ಹಿಂಸೆ; ನಿಖಿಲ್ ಕುಮಾರಸ್ವಾಮಿ ಆರೋಪ

ಸಭೆಯಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಮುಖಂಡರಾದ ಜಗದೀಶ್, ಶೈಲಜಾ ರಾವ್, ಮಾಜಿ ಶಾಸಕ ಶಿವರಾಜ್, ಪಾಲಿಕೆ ಮಾಜಿ ಸದಸ್ಯರಾದ ಮುನಿಸ್ವಾಮಿ, ಅಂದಾನಪ್ಪ, ನಂದಾ ಸಿಂಗ್, ತಾರಾ ಲೋಕೇಶ್, ವೇಣುಗೋಪಾಲ್ ಹಾಗೂ ಇತರರು ಭಾಗಿಯಾಗಿದ್ದರು.