Monday, 12th May 2025

Jain Monk: 8 ದಿನಗಳ ಯಮ ಸಲ್ಲೇಖನ ವ್ರತದ ಮೂಲಕ ದೇಹ ತ್ಯಜಿಸಿದ ಜೈನ ಮುನಿ

jain monk

ಬೆಳಗಾವಿ: ಬೈಲಹೊಂಗಲ ತಾಲೂಕಿನ (belagavi news) ದೇವಲಾಪುರ ಕ್ಷೇತ್ರದ ಜ್ಞಾನೇಶ್ವರ ಮುನಿ ಮಹಾರಾಜರು (Jain monk) 8 ದಿನಗಳ ಯಮ ಸಲ್ಲೇಖನ ವ್ರತದ (sallekhana vrata) ಮೂಲಕ ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಜ್ಞಾನೇಶ್ವರ ಮುನಿ ಮಹಾರಾಜರು ದೇವಲಾಪುರದ ಅಷ್ಟಮ ನಂದೀಶ್ವರ ಕ್ಷೇತ್ರದ ಸಂಸ್ಥಾಪಕರಾಗಿದ್ದರು. ಕಳೆದ ನವೆಂಬರ್ 13ರಂದು ಯಮ ಸಲ್ಲೇಖನ ವ್ರತ ಸ್ವೀಕರಿಸಿದ್ದರು. 8 ದಿನಗಳ ಬಳಿಕ ನಿನ್ನೆ ಸಂಜೆ 5 ಗಂಟೆಗೆ ಸಮಾಧಿ ಮರಣ ಹೊಂದಿದ್ದಾರೆ.

ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 11ರಿಂದ ಮುನಿಗಳ ಅಂತಿಮ ದಹನ ಕ್ರಿಯಾ ವಿಧಿವಿಧಾನಗಳು ಆರಂಭವಾದವು. ಸಂಜೆ 5ಕ್ಕೆ ಸಹಸ್ರಾರು ಭಕ್ತಗಣದ ಸಮ್ಮುಖದಲ್ಲಿ ದೇವಲಾಪುರ ಕ್ಷೇತ್ರದಲ್ಲಿ ಮುನಿಗಳ ಅಂತ್ಯಕ್ರಿಯೆ ನೆರವೇರಿತು.

ಜ್ಞಾನೇಶ್ವರ ಮುನಿ ಮಹಾರಾಜರು ದೇವಲಾಪುರದಲ್ಲಿ ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. 300ಕ್ಕೂ ಅಧಿಕ ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ, ಮೌಲ್ಯ ಶಿಕ್ಷಣ ನೀಡಿದ್ದರು. ಕುಲಭೂಷನ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ಗ್ರಾಮೀಣ ಜನತೆಗೆ ಅನುಕೂಲ ಮಾಡಿದ್ದಾರೆ. ಧಾರವಾಡ, ಬೆಳಗಾವಿಯಲ್ಲಿ ನೂರಕ್ಕೂ ಅಧಿಕ ಜಿನಮಂದಿರಗಳನ್ನು ಕಟ್ಟಿಸಿದ್ದಾರೆ.

ಮುನಿ ಮಹಾರಾಜರು ಧಾರವಾಡ ತಾಲೂಕಿನ ಗರಗ ಗ್ರಾಮದ ಬಡ ಕುಟುಂಬದಲ್ಲಿ 12 ಜುಲೈ 1941ರಲ್ಲಿ ಜನಿಸಿದ್ದರು. ಸ್ವಸಾಧನೆ ಮೂಲಕ ತಹಶೀಲ್ದಾರ್ ಹುದ್ದೆಗೇರಿದ ಜ್ಞಾನೇಶ್ವರ ಮುನಿಗಳು ಜನಸೇವೆಯಲ್ಲಿ ತೊಡಗಿಕೊಂಡು, ನಿವೃತ್ತಿ ನಂತರ ಮುನಿ ದೀಕ್ಷೆ ಪಡೆದು ಲೋಕಕಲ್ಯಾಣಕ್ಕಾಗಿ ಜೀವನ ಸಮರ್ಪಿಸಿಕೊಂಡಿದ್ದಾರೆ. ಜ್ಞಾನೇಶ್ವರ ಮುನಿ ಮಹಾರಾಜರು 2000ರಲ್ಲಿ ಬಾಹುಬಲಿ ಮುನಿಮಹಾರಾಜರಿಂದ ಬ್ರಹ್ಮಚರ್ಯ ದೀಕ್ಷೆ ಸ್ವೀಕರಿಸಿದ್ದರು. 9 ನವೆಂಬರ್ 2011ರಲ್ಲಿ ದಿಗಂಬರ ಮುನಿ ದೀಕ್ಷೆ ಪಡೆದಿದ್ದರು.

ಇದನ್ನೂ ಓದಿ: ಜೀವಜಲ ಉಳಿಸಲು ಮುಂದಾದ ಜೈನಸಂಘಟನೆ