ಮ್ಯೂನಿಚ್ (ಜರ್ಮನಿ): ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್ ಡಿಸೈನ್ನಂತಹ ಗಮನಾರ್ಹ ಬೆಳವಣಿಗೆಯ ಸಾಧ್ಯತೆ ಇರುವ ವಲಯಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಜತೆ ಕೆಲಸ ಮಾಡಲು ಜರ್ಮನಿಯ ಸ್ವತಂತ್ರ ರಾಜ್ಯ ಬವೇರಿಯಾವು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ ಎಂದು ರಾಜ್ಯ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ತಿಳಿಸಿದ್ದಾರೆ. ಇನ್ವೆಸ್ಟ್ ಕರ್ನಾಟಕದ (Invest Karnataka) ಅಂತಾರಾಷ್ಟ್ರೀಯ ರೋಡ್ಷೋ ಅಂಗವಾಗಿ ಜರ್ಮನಿ ಪ್ರವಾಸದಲ್ಲಿರುವ ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು, ಬವೇರಿಯಾದ ಆರ್ಥಿಕ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ರೋಲ್ಯಾಂಡ್ ವೀಗರ್ಟ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ಸಭೆಯಲ್ಲಿ ಉಭಯ ರಾಜ್ಯಗಳ ನಡುವಣ ವಾಣಿಜ್ಯ ಬಾಂಧವ್ಯ ವೃದ್ಧಿಸುವ ಮಾರ್ಗೋಪಾಯಗಳನ್ನು ಪ್ರಮುಖವಾಗಿ ಚರ್ಚಿಸಲಾಯಿತು. ಮುಂದಿನ ವರ್ಷ ಕರ್ನಾಟಕಕ್ಕೆ ಬವೇರಿಯಾದ ವಾಣಿಜ್ಯ ನಿಯೋಗ ಕಳಿಸಿಕೊಡುವುದಾಗಿ ವೀಗರ್ಟ್ ಅವರು ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಸಚಿವ ಪಾಟೀಲ ಅವರು ಬವೇರಿಯಾದ ಯುರೋಪ್ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳ ರಾಜ್ಯ ಸಚಿವ ಎರಿಕ್ ಬಿಸ್ವೆಂಜರ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು. ಸಮಾಲೋಚನೆಯಲ್ಲಿ ಜೈವಿಕ ತಂತ್ರಜ್ಞಾನ ಹಾಗೂ ನವೋದ್ಯಮಗಳಲ್ಲಿ ಬಾಂಧವ್ಯ ವೃದ್ಧಿ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗಿತ್ತು.

ಆಹಾರ ಹಾಗೂ ಪಾನೀಯ ಕೈಗಾರಿಕೆಗಳಲ್ಲಿ ಬಳಕೆಯಾಗುವ ಸಲಕರಣೆಗಳನ್ನು ತಯಾರಿಸುವ ಜಾಗತಿಕ ಪ್ರಮುಖ ಸಂಸ್ಥೆ ಜಿಇಎ ಗ್ರೂಪ್ ಸೇರಿದಂತೆ ಜರ್ಮನಿಯ ಪ್ರಮುಖ ಕೈಗಾರಿಕೆಗಳ ಮುಖ್ಯಸ್ಥರ ಜತೆಗೂ ರಾಜ್ಯದ ನಿಯೋಗವು ಮಾತುಕತೆ ನಡೆಸಿತು. ಭವಿಷ್ಯದ ಯೋಜನೆಗಳ ಭಾಗವಾಗಿ ಬೆಂಗಳೂರಿನಲ್ಲಿ ಇರುವ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಬಗ್ಗೆ ಕಂಪನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಜೋಹಾನ್ನೆಸ್ ಗಿಲೋಥ್ ಅವರು ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | PDO Exam: ಡಿ.7, 8ರಂದು ಪಿಡಿಒ ನೇಮಕಾತಿ ಪರೀಕ್ಷೆ; ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ
ಬವೇರಿಯಾ ಕೈಗಾರಿಕಾ ಸಂಘ (ಬಿಐಎ) ಮತ್ತು ಐಎಚ್ಕೆ ಮ್ಯೂಂಚೆನ್ ಜತೆಗಿನ ಸಭೆಯಲ್ಲಿ ರಾಜ್ಯದ ನಿಯೋಗವು, ನಾವೀನ್ಯತೆ, ಸುಲಲಿತ ಉದ್ದಿಮೆ – ವಹಿವಾಟು ಹಾಗೂ ಪರಿಣತ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನು ವಿವರಿಸಲಾಯಿತು.
ರಾಜ್ಯ ಸರ್ಕಾರದ ಜತೆ ಸಹಯೋಗ ವಿಸ್ತರಿಸಲು ಹಾಗೂ ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ತನ್ನ ಸದಸ್ಯರ ಗಮನಕ್ಕೆ ತರುವುದರ ಬಗ್ಗೆ ಈ ಎರಡೂ ಸಂಘಟನೆಗಳು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿವೆ. ಬವೇರಿಯಾದ ಜೈವಿಕ ತಂತ್ರಜ್ಞಾನದ ಪ್ರಮುಖ ಸಂಘಟನೆಯಾಗಿರುವ ಬಿಯೊಎಂ ಜತೆಗಿನ ಸಭೆಯಲ್ಲಿ ಸಚಿವ ಪಾಟೀಲ ಅವರು ʼಕ್ವಿನ್ ಸಿಟಿʼ ಯೋಜನೆ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಕರ್ನಾಟಕದ ಸಾಮರ್ಥ್ಯಗಳನ್ನು ವಿವರಿಸಿದರು. ಜರ್ಮನಿಯಲ್ಲಿ ನಡೆದ ರೋಡ್ಷೋ, ಕರ್ನಾಟಕವು ಜಾಗತಿಕ ಹೂಡಿಕೆಯ ಪ್ರಮುಖ ತಾಣವಾಗಿರುವುದನ್ನು ಸ್ಥಳೀಯ ಹೂಡಿಕೆದಾರರಿಗೆ ಯಶಸ್ವಿಯಾಗಿ ಪರಿಚಯಿಸಿದೆ.
ಈ ಸುದ್ದಿಯನ್ನೂ ಓದಿ | Forest Movie: ಅಡ್ವೆಂಚರಸ್ ಕಾಮಿಡಿ ಕಥಾ ಹಂದರವುಳ್ಳ ʼಫಾರೆಸ್ಟ್ʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.