Saturday, 10th May 2025

Vande Bharat Train: ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು; ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಗಿಫ್ಟ್!

Vande Bharat Train

ಹುಬ್ಬಳ್ಳಿ: ಗಣೇಶ ಹಬ್ಬದ ವೇಳೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮತ್ತೊಂದು ಕೊಡುಗೆ ನೀಡಿದೆ. ಹಬ್ಬಕ್ಕೂ ಮುನ್ನ ರೈತರಿಗೆ ಹೆಸರು, ಉದ್ದು, ಸೋಯಾಬಿನ್, ಸೂರ್ಯಕಾಂತಿಗೆ ಬೆಂಬಲ ಬೆಲೆ ಕೊಡುಗೆ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು (Vande Bharat Train) ಸಂಚಾರದ ಮತ್ತೊಂದು ಗಿಫ್ಟ್ ನೀಡಿದೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಪ್ರಸ್ತಾವನೆಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ-ಪುಣೆ ಮಧ್ಯೆ ಎರಡನೇ ವಂದೇ ಭಾರತ್ ರೈಲು ಆರಂಭಿಸುವ ಶುಭ ಸಂದೇಶ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | HD Kumaraswamy: ಕೇಂದ್ರ ಸರ್ಕಾರದಿಂದ ಆಟೊ ಉದ್ದಿಮೆಗೆ ಉತ್ತೇಜನ; ಉದ್ಯೋಗವಕಾಶ ಹೆಚ್ಚಳ ನಿರೀಕ್ಷೆ

ಅತಿ ಶೀಘ್ರದಲ್ಲೇ ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರಿಗೆ ಮಾಹಿತಿ ನೀಡಿದ್ದಾರೆ.

ವಂದೇ ಭಾರತ್‌ಗೆ ಮನವಿ ಮಾಡಿದ್ದರು ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಹುಬ್ಬಳ್ಳಿ- ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಅಶ್ವಿನಿ ವೈಷ್ಣವ್ ಅವರಿಗೆ ಜುಲೈ ಮೊದಲ ವಾರದಲ್ಲಷ್ಟೇ ಪತ್ರ ಬರೆದು ಮನವಿ ಮಾಡಿದ್ದರು.

ರಾಜ್ಯದಲ್ಲಿ ಬೆಂಗಳೂರು ನಂತರ ಪ್ರಮುಖ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕಿದೆ. ಅಲ್ಲದೇ, ವಂದೇ ಭಾರತ್ ರೈಲು ಸಂಚಾರದಿಂದ ಈ ಭಾಗದ ವಾಣಿಜ್ಯೋದ್ಯಮ, ಕೈಗಾರಿಕಾ ವಸಾಹತು ಬೆಳವಣಿಗೆಗೆ ಅನುಕೂಲ ಆಗುತ್ತದೆ ಎಂದು ಸಚಿವ ಜೋಶಿ ಕೇಂದ್ರದ ಗಮನ ಸೆಳೆದಿದ್ದರು.

ಹುಬ್ಬಳ್ಳಿಯಿಂದ ಮುಂಬೈ ಸಂಪರ್ಕಕ್ಕೂ ಈ ಮಾರ್ಗ ಅತ್ಯಂತ ಪ್ರಮುಖವಾಗಲಿದೆ ಎಂಬುದನ್ನು ಜೋಶಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೆ ಒತ್ತಾಯಿಸಿದ್ದರು.

ಹುಬ್ಬಳ್ಳಿ-ಧಾರವಾಡದ ಜನರಿಗೆ ಹಬ್ಬದ ಈ ಶುಭ ಸಂದರ್ಭದಲ್ಲಿ ವಂದೇ ಭಾರತ್ ರೈಲು ಸಂಚಾರ ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲಿಯೇ ಹುಬ್ಬಳ್ಳಿ- ಪುಣೆ ನಡುವೆ ಹುಬ್ಬಳ್ಳಿಯ ಎರಡನೇಯ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸಂಚರಿಸಲಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಉದ್ಘಾಟನೆ ದಿನ, ವೇಳಾಪಟ್ಟಿ ಶೀಘ್ರ ಪ್ರಕಟ

ವಂದೇ ಭಾರತ್ ರೈಲು ಸಂಚಾರದ ಉದ್ಘಾಟನೆ ದಿನ ಮತ್ತು ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಆದಷ್ಟು ಬೇಗ ಪ್ರಕಟಿಸಲಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Suburban Rail Project: ಉಪನಗರ ರೈಲು ಯೋಜನೆ; 2026ರ ಡಿಸೆಂಬರ್‌ಗೆ ಕಾರಿಡಾರ್‌ 2, 4 ಪೂರ್ಣ

ಪ್ರಧಾನಿಗೆ, ರೈಲ್ವೆ ಸಚಿವರಿಗೆ ಜೋಶಿ ಧನ್ಯವಾದ

ನಮ್ಮ ವಿಭಾಗದ ರೇಲ್ವೆ ಅಭಿವೃದ್ಧಿಗೆ, ವಿಕಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಮೂಲಕ ಮಹತ್ವದ ಕೊಡುಗೆ ನೀಡಿದ್ದು, ಉತ್ತರ ಕರ್ನಾಟಕ ಜನರ ಪರವಾಗಿ ಧನ್ಯವಾದ ಅರ್ಪಿಸುವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *