ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ಸಹಕಾರಿಯಾಗುವಂತೆ ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ (HK Patil) ಅವರು ಕೇಂದ್ರ ಸರ್ಕಾರವನ್ನು (Central Government) ಕೋರಿದ ಪರಿಣಾಮ ಕೇಂದ್ರವು ರಾಜ್ಯದ ಈ ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ 100 ಕೋಟಿ ರೂ. ಮಂಜೂರು ಮಾಡಿದೆ.
ಸವದತ್ತಿ ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಎಚ್.ಕೆ. ಪಾಟೀಲ ಅವರು ಕಳೆದ ಜನವರಿ 9, 2024 ರಂದು ಕೇಂದ್ರ ಪ್ರವಾಸೋದ್ಯಮ ಕಾರ್ಯದರ್ಶಿ ಅವರಿಗೆ ಪತ್ರ ಮುಖೇನ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಸವದತ್ತಿ ಅಭಿವೃದ್ಧಿ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.
ಈ ಸುದ್ದಿಯನ್ನೂ ಓದಿ | Good News: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿ ಡಿ.20ರವರೆಗೆ ವಿಸ್ತರಣೆ
ಸವದತ್ತಿ ಯಲ್ಲಮ್ಮ ದೇಗುಲಕ್ಕೆ ಒಂದು ಕೋಟಿಗೂ ಅಧಿಕ ಪ್ರವಾಸಿಗರೂ ಮತ್ತು ಭಕ್ತರು ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಪ್ರವಾಸಿಗರಿಗೆ ಅಗತ್ಯ ವಸತಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದ್ದು ಈಗಿರುವ ಸೌಕರ್ಯ ಉನ್ನತೀಕರಣ ಮತ್ತು ಹೊಸ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೂರು ಕೋಟಿ ರೂ.ಗಳ ಅಗತ್ಯವಿದೆ ಎಂಬುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು.
ತಮ್ಮ ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಸವದತ್ತಿ ದೇಗುಲ ಅಭಿವೃದ್ಧಿಗೆ 100 ಕೋಟಿ ರೂ. ಸೇರಿದಂತೆ ಬೆಂಗಳೂರಿನ ರೋವಿತ್ ಮತ್ತು ದೇವಿಕಾರಾಣಿ ಎಸ್ಟೇಟ್ ಅಭಿವೃದ್ಧಿಗೆ 99.17 ಕೋಟಿ ರೂ. ಬಿಡುಗಡೆಗೆ ಮುಂದಾಗಿರುವುದಕ್ಕೆ ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Home loan: ಮಹಿಳೆಯರಿಗೆ ಮಾತ್ರ ಸಿಗೋ ಗೃಹ ಸಾಲ ಲಾಭಗಳ ಲಿಸ್ಟ್!
ದೇಶದಲ್ಲೇ ‘ಗ್ಯಾರಂಟಿʼ ಸರ್ಕಾರ ಎಂದೇ ಜನಪ್ರಿಯವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರವು ತಮ್ಮ ಚುನಾವಣಾ ಪೂರ್ಣ ವಾಗ್ದಾನದಂತೆ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿ ಮೂಲಕ ಪ್ರವಾಸೋದ್ಯಮ ಯೋಜನೆಯನ್ನು ಜನ ಸಾಮಾನ್ಯರ ಕೈಗೆಟಕುವಂತೆ ಮಾಡಿದ್ದು, ಇದರ ಪರಿಣಾಮ ರಾಜ್ಯದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರೂ ಏರಿಕೆಯಾಗಿದ್ದಾರೆ. ಹೀಗಾಗಿ ಕೋಟಿ ಮಂದಿ ಭೇಟಿಯಿಂದ ಹೊಸ ದಾಖಲೆ ನಿರ್ಮಿಸಿರುವ ಸವದತ್ತಿ ಯಲ್ಲಮ್ಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರವು ಸವದತ್ತಿ ಯಲ್ಲಮ್ಮ ದೇಗುಲ ಮತ್ತು ರೋವಿತ್ ಎಸ್ಟೇಟ್ ಅಭಿವೃದ್ಧಿಗೆ ಸ್ಪಂದಿಸಿರುವುದು ಹರ್ಷ ತಂದಿದೆ.
-ಎಚ್.ಕೆ. ಪಾಟೀಲ, ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವರು.