ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಶ್ರೀಮಂತಿಕೆಯನ್ನ ಬೆಳ್ಳಿತೆರೆಗೆ ತರುವ ಉದ್ದೇಶದಿಂದ, ಕರಿಗಿರಿ ಫಿಲ್ಮ್ಸ್ ʼಹರಿದಾಸರ ದಿನಚರಿʼ ಚಿತ್ರವನ್ನು (Haridasara Dinachari Movie) ಹೆಮ್ಮೆಯಿಂದ ನಿಮ್ಮ ಮುಂದೆ ಇಡುತ್ತಿದೆ. ಈ ಚಿತ್ರವು 15ನೇ ಶತಮಾನದ ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ದೈನಂದಿನ ಜೀವನದ ಮನೋಹರ ದೃಶ್ಯಗಳನ್ನು ಒಳಗೊಂಡಿದೆ. ತಮ್ಮ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಪುರಂದರ ದಾಸರ ಜೀವನ ಯಾನದ ಒಂದು ದಿನದ ಕಲಾಪ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

ʼಹರಿದಾಸರ ದಿನಚರಿʼ ಜೀವನಚರಿತ್ರೆಯ ಚಿತ್ರವಲ್ಲ, ಇದು ಪ್ರೇಕ್ಷಕರನ್ನು ಆಳವಾದ ಭಕ್ತಿ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಯುಗಕ್ಕೆ ಕರೆದೊಯ್ಯುವ ಒಂದು ಅನುಭವ. ಅದ್ಭುತ ದೃಶ್ಯಗಳು ಮತ್ತು ಆತ್ಮಸ್ಪರ್ಶಿ ನಿರೂಪಣೆಯ ಮೂಲಕ, ಚಿತ್ರವು ಪುರಂದರ ದಾಸರು ತಮ್ಮ ದಿನಚರಿಯಲ್ಲಿ ಮುನ್ನಡೆಯುವುದನ್ನು, ಅವರ ಪ್ರಸಿದ್ಧ ʼಜಗದೋದ್ಧಾರನ ಆಡಿಸಿದಳೆ ಯಶೋದೆʼ ಹಾಡನ್ನು ರಚಿಸುವುದನ್ನು ಮತ್ತು ತಮ್ಮ ದೈನಂದಿನ ಆಚರಣೆಗಳಲ್ಲಿ ತೊಡಗುವುದನ್ನು ಚಿತ್ರೀಕರಿಸಲಾಗಿದೆ.
ಡಾ. ವಿದ್ಯಾಭೂಷಣರು ಶ್ರೀ ಪುರಂದರ ದಾಸರಾಗಿ ಅತ್ಯುತ್ತಮ ಮತ್ತು ಸ್ಪೂರ್ತಿದಾಯಕ ಅಭಿನಯವನ್ನು ನೀಡಿದ್ದಾರೆ. ಇತರ ಪಾತ್ರಗಳಲ್ಲಿ ಘನಶ್ಯಾಮ್ ಕೆ.ವಿ, ಗೋಕುಲ್ ಅಯ್ಯರ್, ವಾಸುದೇವ ಮೂರ್ತಿ ಕೆ.ಎನ್, ಚಲಪತಿ, ಪ್ರಸನ್ನ ವೆಂಕಟೇಶ ಮೂರ್ತಿ, ಪದ್ಮಕಲಾ, ಡಾ. ಜಿ.ಎಲ್. ಹೆಗ್ಡೆ ಮುಂತಾದವರಿದ್ದಾರೆ.
ಈ ಸುದ್ದಿಯನ್ನೂ ಓದಿ | Pralhad Joshi: ‘ಪಿಎಂ ಸೂರ್ಯ ಘರ್ʼ ಯೋಜನೆ; ಶೂನ್ಯ ಬಂಡವಾಳದಲ್ಲಿ ಜನರೇ ವಿದ್ಯುತ್ ಉತ್ಪಾದಕರಾಗಬಹುದು!
ಸಾಹಿತ್ಯ – ಶ್ರೀ ಪುರಂದರ ದಾಸರ ಕೃತಿಗಳು, ಗಾಯನ – ಡಾ. ವಿದ್ಯಾಭೂಷಣ, ಛಾಯಾಗ್ರಹಣ ಹರಿರಾಜು.ಎಂ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಮತ್ತು ನಿರ್ದೇಶನ: ಗಿರೀಶ್ ನಾಗರಾಜ, ಸಂಗೀತ- ಡಾ. ವಿದ್ಯಾಭೂಷಣ, ಹಿನ್ನೆಲೆ ಸಂಗೀತ: ರೊಣದ ಬಕ್ಕೇಶ್, ಸಂಕಲನ: ಸುಹಾಸ್ ಜಯ್, ನಿರೂಪಣೆ: ಶಿವರಾಮಯ್ಯ ಅವರದು ಎಂದು ನಿರ್ದೇಶಕ ಗಿರೀಶ್ ನಾಗರಾಜ ತಿಳಿಸಿದ್ದಾರೆ.