ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ (Guruprasad Passed away) (52) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾದನಾಯಕಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಿರ್ದೇಶಕ ಗುರುಪ್ರಸಾದ್ ಅವರು 3 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಅವರ ಮೃತದೇಹ ಅಪಾರ್ಟ್‌ಮೆಂಟ್ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ನಿನ್ನೆ ಗುರುಪ್ರಸಾದ್ ಹುಟ್ಟುಹಬ್ಬ. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್ ಕೊಟ್ಟಿದೆ.

ಇನ್ನು ಮೂರು ದಿನಗಳ ಹಿಂದೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬರತೊಡಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು, ಗುರುಪ್ರಸಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ಗುರುಪ್ರಸಾದ್ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಗುರುಪ್ರಸಾದ್ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕ ನಿರ್ದೇಶಿಸಿದ ‘ಎದ್ದೇಳು ಮಂಜುನಾಥ’ ಭಾರಿ ದೊಡ್ಡ ಹಿಟ್ ಆಯ್ತು, ಕಲ್ಟ್ ಕಾಮಿಡಿ ಸಿನಿಮಾ ಆಗಿ ಗುರುತಿಸಲಾಗುತ್ತಿದೆ. ಅದಾದ ಬಳಿಕ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮಾಡಿದರು. ಈ ಸಿನಿಮಾ ಮೂಲಕ ಡಾಲಿ ಧನಂಜಯ್ ನಾಯಕನಾಗಿ ಪರಿಚಯಗೊಂಡರು. ಅದಾದ ಬಳಿಕ 2017 ರಲ್ಲಿ ‘ಎರಡನೇ ಸಲ’ ನಿರ್ದೇಶಿಸಿದರು. ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು.

ಇದಾದ ಬಳಿಕ ಅವರು ನಿರ್ದೇಶನ ಮಾಡಿದ್ದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲಗಳಿಗೆ ಸಿಲುಕಿದ್ದರು. ಮಾತ್ರವಲ್ಲದೆ ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಸಹ ಆಗಿದ್ದರು ಎನ್ನಲಾಗುತ್ತಿದೆ.
1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದ್ದರು. ಇನ್ನು ಇವರ ನಿರ್ದೇಶನದ ‘ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ‘ಡೈರೆಕ್ಟರ್ ಸ್ಪೇಷಲ್’,’ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ ‘ಮಠ’, ‘ಎದ್ದೇಳು ಮಂಜುನಾಥ’,’ಮೈಲಾರಿ’, ‘ಹುಡುಗರು’,’ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Giri Dwarakish: ತಮಿಳಿನ ಹಲವು ಸಿನಿಮಾಗಳಲ್ಲಿ ದ್ವಾರಕೀಶ್ ಕಿರಿಯ ಮಗ ಗಿರಿಗೆ ಅವಕಾಶ