ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (Govt Employees) ರಾಜ್ಯಾಧ್ಯಕ್ಷರಾಗಿ ಎರಡನೇ ಭಾರಿಗೆ ಆಯ್ಕೆಯಾಗಿರುವ ಸಿ.ಎಸ್. ಷಡಾಕ್ಷರಿ (C.S. Shadakshari) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಂಘದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಸಿಎಂ ಗೃಹಕಚೇರಿ ಕೃಷ್ಣದಲ್ಲಿ ಸೋಮವಾರ ಸಂಜೆ ಜಿಲ್ಲೆ, ತಾಲೂಕು ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ನಿಯೋಗದೊಂದಿಗೆ ಸಿಎಂ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
ಇದೇ ಸಂಧರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಂಬಂಧ ಸರ್ಕಾರದಿಂದ ರಚಿತವಾಗಿರುವ ಅಧಿಕಾರಿಗಳ ಸಮಿತಿಯಿಂದ ಶೀಘ್ರ ವರದಿ ಪಡೆದು ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಗೊಳಿಸುವಂತೆ ಮನವಿ ಮಾಡಲಾಯಿತು. ಈ ವಿಷಯವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಿತಿಯಿಂದ ಶೀಘ್ರ ವರದಿ ಪಡೆದು ಈಡೇರಿಸುವ ಭರವಸೆ ನೀಡಿದ್ದಾರೆ.

ಅಲ್ಲದೇ, ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉಚಿತ ನಗದುರಹಿತ ಚಿಕಿತ್ಸೆ ನೀಡುವ ʼಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆʼ (ಕೆ.ಎ.ಎಸ್.ಎಸ್) ಯನ್ನು ಶೀಘ್ರವಾಗಿ ಅನುಷ್ಠಾಗೊಳಿಸುವ ಭರವಸೆ ನೀಡಿದರು.
ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಎಸ್ ಷಡಾಕ್ಷರಿರವರಿಗೆ ಮುಖ್ಯಮಂತ್ರಿಗಳು ಶುಭ ಹಾರೈಸಿದರಲ್ಲದೆ, ಸಂಘದ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾದ ರಮೇಶ್ ಸಂಗಾ, ಕೊಪ್ಪಳ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ರಾಮನಗರ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಕೆಲವು ತಾಲೂಕು ಸಂಘಗಳ ಅಧ್ಯಕ್ಷರು- ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ರಾಜ್ಯಾಧ್ಯಕ್ಷರ ನಿಯೋಗದಲ್ಲಿದ್ದರು.
ಸಿಎಂ ಅವರನ್ನು ಭೇಟಿಯಾದ ಸಮಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿಯಾಗಿ ನಿಯೋಗದಿಂದ ಅಭಿನಂದನೆ ಸಲ್ಲಿಸಲಾಗಿದೆ. ಇದೇ ವೇಳೆ ನೌಕರರ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಮನವಿ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | CM Siddaramaiah: ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಷಡಾಕ್ಷರಿಯಿಂದ ಸಿಎಂ ಸಿದ್ದರಾಮಯ್ಯ ಭೇಟಿ, ಬೇಡಿಕೆ ಮಂಡನೆ
2ನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ ಆಯ್ಕೆ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (Govt Employees) 2024-2029ನೇ ಅವಧಿಯ ಚುನಾವಣೆಯಲ್ಲಿ ಜಯ ಗಳಿಸುವ ಮೂಲಕ ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಎರಡನೇ ಬಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಾಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ (CS Shadakshari) ಹಾಗೂ ಖಜಾಂಚಿಯಾಗಿ ಶಿವರುದ್ರಯ್ಯ ವಿ.ವಿ ಆಯ್ಕೆಯಾಗಿದ್ದಾರೆ.
ಸಂಘದ 971 ಪ್ರತಿನಿಧಿಗಳು ಅಧ್ಯಕ್ಷ ಹಾಗೂ ಖಜಾಂಚಿ ಆಯ್ಕೆಗೆ ಮತ ಚಲಾವಣೆಗೆ ಹಕ್ಕು ಹೊಂದಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹುದ್ದೆಗೆ ಹಾಲಿ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರ ಸಹೋದರ ಬಿ.ಪಿ. ಕೃಷ್ಣೆಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಷಡಾಕ್ಷರಿ ಅವರು 507 ಮತಗಳನ್ನು ಪಡೆದು ಬಿ.ಪಿ. ಕೃಷ್ಣೆಗೌಡ (442 ಮತ) ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.
ಇನ್ನು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಜಾಸತ್ತಾತ್ಮಕ ವೇದಿಕೆಯ ಶಿವರುದ್ರಯ್ಯ ವಿ.ವಿ. ಅವರು 485 ಮತಗಳನ್ನು ಪಡೆದು ನಾಗರಾಜ ಆರ್. ಜುಮ್ಮನ್ನನವರ (467) ವಿರುದ್ಧ ಗೆದ್ದು, ಸಂಘದ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.