Monday, 12th May 2025

Girl Dies: ಕಟ್ಟಡದಿಂದ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ಸಾವು

Girl Dies

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ಗೆ ಬಳಸಿದ್ದ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ಮೃತಪಟ್ಟಿರುವುದು (Girl Dies) ವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ಶನಿವಾರ ನಡೆದಿದೆ. ತೇಜಸ್ವಿನಿ (15) ಮೃತ ಬಾಲಕಿ. ಶಾಲೆ ಮುಗಿದ ಬಳಿಕ ರಸ್ತೆ ಪಕ್ಕ ಬಾಲಕಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಟ್ಟಡದಿಂದ ಮರದ ತುಂಡು ಬಿದ್ದು ದುರ್ಘಟನೆ ಸಂಭವಿಸಿದೆ.

ಶನಿವಾರವಾಗಿದ್ದರಿಂದ ಮಧ್ಯಾಹ್ನ ಸ್ಕೂಲ್‌ ಮುಗಿಸಿದ ಬಳಿಕ ಡ್ಯಾನ್ಸ್‌ ಕ್ಲಾಸ್‌ಗೆ ಬಾಲಕಿ ಹೋಗಿದ್ದಳು. ಅಲ್ಲಿಂದ ಮನೆಗೆ ವಾಪಸ್‌ ಆಗುತ್ತಿದ್ದಾಗ ಕಟ್ಟಡದ ಮೇಲಿಂದ ರಭಸವಾಗಿ ಮರದ ತುಂಡು ಬಾಲಕಿ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಪ್ರಕರಣ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೇಜಸ್ವಿನಿ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Tumkur News: ಮಾಜಿ ಶಾಸಕ ಗೌರಿಶಂಕರ್ ತಾಯಿ ಸಿದ್ದಗಂಗಮ್ಮ ಅನಾರೋಗ್ಯದಿಂದ ವಿಧಿವಶ

ಬಿಡದಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಐವರು ಕಾರ್ಮಿಕರಿಗೆ ಗಂಭೀರ ಗಾಯ!

ರಾಮನಗರ: ಬಾಯ್ಲರ್‌ ಸ್ಫೋಟಗೊಂಡು ಐವರು ಕಾರ್ಮಿಕರು ಗಂಭೀರವಾಗಿ ಗಾಯಗಳಾಗಿರುವ ಘಟನೆ (Boiler Explosion) ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಆರ್ಬಿಟ್ ಪವರ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟವಾಗಿದ್ದು, ಉತ್ತರ ಭಾರತದ ಮೂಲದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.

ಅಮ್ಮೇಶ್, ತರುಣ್, ಉಮೇಶ್, ಸಂತುನ್ ಹಾಗೂ ಲಖನ್‌ ಗಾಯಾಳುಗಳು. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬಿಡದಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಟಾಟಾ ಏಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯ

Koratagere News

ಕೊರಟಗೆರೆ: ಹೊರ ಸಂಚಾರ ಮುಗಿಸಿಕೊಂಡು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ (Koratagere News) ಮಾವತ್ತೂರಿನ ಸಮೀಪ ಗೌಡನ ಕುಂಟೆ ಗೇಟ್ ಬಳಿ ಘಟನೆ ನಡೆದಿದೆ. ಗಾಯಾಳು ಮಕ್ಕಳಿಗೆ ದೊಡ್ಡ ಸಾಗ್ಗೆರೆ ಆಸ್ಪತ್ರೆ ಹಾಗೂ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

50ಕ್ಕೂ ಹೆಚ್ಚು ಮಕ್ಕಳನ್ನು ಶೈಕ್ಷಣಿಕ ಪ್ರವಾಸದಿಂದ ವಾಪಸ್ ಕರೆದೊಯ್ಯುತ್ತಿದ್ದ ಟಾಟಾ ಏಸ್‌‌ ವಾಹನ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ 15ಕ್ಕೂ ಹೆಚ್ಚು ಮಕ್ಕಳಿಗೆ ತಲೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಕೋಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಯೋಗೇಶ್ ಮತ್ತು ತಂಡ ಭೇಟಿ ನೀಡಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕೊಳಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲಾ ಮಕ್ಕಳು ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾದ ವಿಷಯ ತಿಳಿದ ತಕ್ಷಣ ಕೊರಟಗೆರೆ ಸರ್ಕಾರಿ ಆಸ್ಪತ್ರೆ ವೈದ್ಯರು ಅಲರ್ಟ್ ಆಗಿದ್ದು, ಮಕ್ಕಳು ಆಸ್ಪತ್ರೆಗೆ ಬಂದ ತಕ್ಷಣ ಚಿಕಿತ್ಸೆ ನೀಡಲಾಗಿದೆ. ಆತಂಕಗೊಂಡ ಪೋಷಕರು ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. 4 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಕ್ಕಳಿಗೆ ತುರ್ತು ಚಿಕಿತ್ಸೆ ಕೊಡಿಸಲು ಗೃಹ ಸಚಿವ‌ ಡಾ. ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಆಸ್ಪತ್ರಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಮಕ್ಕಳ ಜೀವದ ಜತೆ ಶಿಕ್ಷಕ ಚೆಲ್ಲಾಟವಾಡಿದ್ದು, 50ಕ್ಕೂ ಹೆಚ್ಚು ಮಕ್ಕಳನ್ನು ಟಾಟಾ ಏಸ್‌ನಲ್ಲಿ ಕರೆದುಕೊಂಡು ಹೋಗಲು ಅನುಮತಿ ಕೊಟ್ಟವರು ಯಾರು? ಕೊರಟಗೆರೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಇಂತಹ ಅನಾಹುತಗಳಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸೂಕ್ತ ವ್ಯವಸ್ಥೆ ಇಲ್ಲದೆ ಮಕ್ಕಳನ್ನು ಖಾಸಗಿ ವಾಹನದಲ್ಲಿ ಕರೆದೊಯ್ದ ಶಿಕ್ಷಕನ ವಿರುದ್ಧ ಕ್ರಮ ಆಗ್ರಹ ಕೇಳಿಬಂದಿದೆ. ಅಪಘಾತವಾದ ಸಮಯದಲ್ಲಿ ಶಾಲಾ ಶಿಕ್ಷಕನೇ ಟಾಟಾ ಏಸ್‌ ಅನ್ನು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Madhugiri News: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌; ಡಿವೈಎಸ್‌ಪಿಗೆ 14 ದಿನ ನ್ಯಾಯಾಂಗ ಬಂಧನ