Sunday, 11th May 2025

Fraud case: ಡಿ.ಕೆ.ಸುರೇಶ್ ತಂಗಿ ಎಂದು ಹೇಳಿ 8.41 ಕೋಟಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ; ನಟ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಹೇಳಿಕೊಂಡು ಮಹಿಳೆಯೊಬ್ಬರು 2.42 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ ಪ್ರಕರಣದ ಬೆನ್ನಲ್ಲೇ ಅಂತಹುದೇ ಮತ್ತೊಂದು ಕೇಸ್‌ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಈ ಬಾರಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ ಖರೀದಿಸಿ ಕೋಟ್ಯಂತರ ರೂಪಾಯಿ ವಂಚನೆ (Fraud case) ಮಾಡಿರುವುದು ಕಂಡುಬಂದಿದೆ.

ಮಾಜಿ ಸಂಸದ ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ ಆರೋಪದಲ್ಲಿ ಐಶ್ವರ್ಯ ಗೌಡ, ಪತಿ‌ ಹರೀಶ್ ಕೆ.ಎನ್. ಹಾಗೂ ಸಿನಿಮಾ ನಟ ಧರ್ಮೇಂದ್ರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರ್‌ಆರ್ ನಗರ ನಿವಾಸಿ ಆಗಿರುವ ಐಶ್ವರ್ಯ ಗೌಡ ವಿರುದ್ಧ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್​ ಮಾಲೀಕರಾದ ವನಿತಾ ಐತಾಳ್‌ ದೂರು ನೀಡಿದ್ದಾರೆ.

ಐಶ್ವರ್ಯ ಗೌಡ 2023ರ ಅಕ್ಟೋಬರ್​ನಿಂದ 2024 ಏಪ್ರಿಲ್‌ವರೆಗೆ ಹಂತ ಹಂತವಾಗಿ ಚಿನ್ನ ಪಡೆದಿದ್ದರು. ಆದರೆ, ಹಣ ಕೇಳಿದಾಗ ಡಿ.ಕೆ. ಸುರೇಶ್​ರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸಿನಿಮಾ ಧರ್ಮೇಂದ್ರ ಅವರಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಇನ್ನು ಐಶ್ವರ್ಯ ಗೌಡ ಅವರ ಪತಿ‌ ಹರೀಶ್ ಕೆ.ಎನ್ ಕೂಡ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ನಾನು ಡಿ.ಕೆ ಸುರೇಶ್ ತಂಗಿ, ನನಗೆ ಅನೇಕ‌ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಬ್ಯುಸಿನೆಸ್ ವುಮೆನ್. ನಿಮಗೆ ಒಳ್ಳೆ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದೆಲ್ಲ ಹೇಳಿ ವನಿತಾ ಅವರನ್ನು ಐಶ್ವರ್ಯ ನಂಬಿಸಿದ್ದರು ಎನ್ನಲಾಗಿದೆ. ಸದ್ಯ ಘಟನೆ ಬಗ್ಗೆ ಚಂದ್ರ ಲೇಔಟ್​ನಲ್ಲಿರುವ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್ ಮಾಲೀಕರಾದ ವನಿತಾ ಅವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Smuggler Sunil Yadav:‌ ಶೂಟೌಟ್‌ನಲ್ಲಿ ಸ್ಮಗ್ಲರ್ ಸುನಿಲ್ ಯಾದವ್ ಬಲಿ; ಲಾರೆನ್ಸ್‌ ಬಿಷ್ಣೋಯ್‌ ಆಪ್ತನಿಂದ ಕೃತ್ಯ?

ಸಿ.ಟಿ.ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ

ಹುಬ್ಬಳ್ಳಿ: ಸಿ.ಟಿ.ರವಿ ಅಶ್ಲೀಲ ಹೇಳಿಕೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ನೀಡಿದ್ದು, ಸಿ.ಟಿ ರವಿ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ. ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಎಲ್ಲ ವಿಚಾರಗಳ ಬಗ್ಗೆ ತನಿಖೆ ಆಗಲೆಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಆ ರೀತಿ ಹೇಳಿಲ್ಲ ಎನ್ನುತ್ತಾರೆ. ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಎಂದು ಹೇಳುತ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ಮಾಡಲು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಸಿ.ಟಿ ರವಿ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ. ತನಿಖೆ ನಡೆಯುವಾಗ ನಾವು ಯಾವುದೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದಿದ್ದಾರೆ.

ಸಿ.ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ಪೀಕರ್ ತಮ್ಮ ಕೆಲಸ ತಾವು ಮಾಡುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಆದರೆ ತನಿಖೆಯನ್ನು ಸರಿಯಾಗಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸಿಟಿ ರವಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ವಿಳಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವೊಂದು ಕಾರಣಕ್ಕೆ ಕೇಸ್‌ ದಾಖಲಿಸುವುದು ವಿಳಂಬವಾಗಿರಬಹುದು. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಅದನ್ನು ಪಾಲನೆ ಮಾಡಲ್ಲ. ಅವರಿವರು ಆರೋಪ ಮಾಡುತ್ತಾರೆ ಎಂದು ನಾವು ಇಲಾಖೆ ನಡೆಸಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.

ಈ ಸುದ್ದಿಯನ್ನೂ ಓದಿ | Viral Video: ಚಂಡಮಾರುರತ ಅಬ್ಬರಕ್ಕೆ ಹಡಗುಕಟ್ಟೆ ಸಂಪೂರ್ಣ ಧ್ವಂಸ; ಮುಂದೇನಾಯ್ತು? ವಿಡಿಯೊ ನೋಡಿ