Sunday, 11th May 2025

Electricity Price Hike: ವಿದ್ಯುತ್‌ ಗ್ರಾಹಕರಿಗೆ ಕಾದಿದೆ ಶಾಕ್‌, ಶೀಘ್ರದಲ್ಲೇ ದರ ಹೆಚ್ಚಳ

electrcity price hike

ಬೆಂಗಳೂರು: ಸದ್ಯದಲ್ಲೇ ಕರೆಂಟ್‌ ದರ ಏರಿಕೆ ಆಗಲಿದೆ. ಜನಸಾಮಾನ್ಯರಿಗೆ ವಿದ್ಯುತ್ ದರ ಹೆಚ್ಚಳದ (Electricity Price Hike) ಶಾಕ್ ನೀಡಲು ಎಸ್ಕಾಮ್‌ಗಳು ಮುಂದಾಗಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ವಿದ್ಯುತ್ ದರ ಏರಿಕೆ ಮಾಡಲು ಒಪ್ಪಿಗೆ ಸೂಚಿಸುವಂತೆ ಪ್ರಸ್ತಾಪ ಸಲ್ಲಿಸಿವೆ.

ಮುಂದಿನ ಮೂರು ವರ್ಷಗಳ ಅವಧಿಗೆ ಹೆಚ್ಚಾಗಲಿರುವ ವಿದ್ಯುತ್‌ ದರದ ವಿವರವನ್ನು ಎಸ್ಕಾಮ್‌ಗಳು ಹಂಚಿಕೊಂಡಿವೆ. ಕೆಇಆರ್‌ಸಿಗೆ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕಾಂಗಳು ವಿದ್ಯುತ್ ದರವನ್ನು ಹೆಚ್ಚಿಸುವಂತೆ ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ವಿದ್ಯುತ್ ಖರೀದಿಗೆ ತಗಲುವ ವೆಚ್ಚ ಹಾಗೂ ಪೂರೈಕೆ, ಕಲ್ಲಿದ್ದಲು ಸಂಗ್ರಹಣೆಗೆ ತಗಲುವ ವೆಚ್ಚ ಸೇರಿದಂತೆ ಇತರೆ ಖರ್ಚುಗಳು ಹೆಚ್ಚಾಗಿದ್ದು ಆರ್ಥಿಕ ಒತ್ತಡವನ್ನು ಉಲ್ಬಣಗೊಳಿಸಿವೆ ಎಂದು ಪ್ರಸ್ತಾವನೆಯಲ್ಲಿ ಕಂಪನಿಗಳು ಹೇಳಿಕೊಂಡಿವೆ.

ಹೀಗಾಗಿ ಪ್ರತಿ ಯೂನಿಟ್‌ಗೆ 1 ರೂಪಾಯಿ 50 ಪೈಸೆ ದರ ಏರಿಕೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದರೆ, ಇತರೆ ಎಸ್ಕಾಮ್‌ಗಳು ಪ್ರತಿ ಯೂನಿಟ್‌ಗೆ 1 ರೂಪಾಯಿ 20 ಪೈಸೆ ಹೆಚ್ಚಳಕ್ಕೆ ಕೋರಿವೆ. ಪ್ರತಿ ಯೂನಿಟ್‌ಗೆ ಮೊದಲ ವರ್ಷ ಅಂದರೆ 2025-26ಕ್ಕೆ 67 ಪೈಸೆ, 2ನೇ ವರ್ಷ ಅಂದರೆ 2026-27ಕ್ಕೆ ಯೂನಿಟ್‌ಗೆ 74 ಪೈಸೆ ಹಾಗೂ ಮೂರನೇ ವರ್ಷ ಅಂದರೆ 2027-28ಕ್ಕೆ 91 ಪೈಸೆ ವಿಸ್ತರಣೆ ಮಾಡಲು ಮನವಿ ಮಾಡಲಾಗಿದೆ. ಒಂದು ವೇಳೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಸೂಚಿಸಿದರೆ ಪ್ರಸ್ತಾವನೆಯಂತೆ ವಿದ್ಯುತ್ ದರ ಹೆಚ್ಚಾಗಲಿದೆ.

ವಿದ್ಯುತ್ ದರಗಳನ್ನು ವಾರ್ಷಿಕವಾಗಿ ಪರಿಶೀಲಿಸುವ ಮತ್ತು ಪರಿಷ್ಕರಿಸುವ ಕೆಇಆರ್‌ಸಿ ಪ್ರಸ್ತುತ ಎಸ್ಕಾಮ್‌ಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಪ್ರಕ್ರಿಯೆಯ ಭಾಗವಾಗಿ ಈಗಾಗಲೇ ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸಲಾಗಿದ್ದು, ಆಯೋಗವು ತನ್ನ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಅನುಮೋದನೆ ದೊರೆತರೆ 2025 ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.

ಕೆಇಆರ್‌ಸಿ ಈ ಪ್ರಸ್ತಾವನೆಗಳ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ. ಆಯೋಗ ಮೊದಲಿನಿಂದಲೂ ಎಸ್ಕಾಮ್‌ಗಳ ಆರ್ಥಿಕ ಅಗತ್ಯಗಳನ್ನು ಮಾತ್ರವಲ್ಲದೆ ಗ್ರಾಹಕರ ಕೈಗೆಟುಕುವಂತೆ ದರವನ್ನು ಸಮತೋಲನಗೊಳಿಸಿಕೊಂಡು ಬಂದಿದೆ. ಈ ಬಾರಿ ಆಯೋಗ ವಿದ್ಯುತ್ ದರವನ್ನು ಎಷ್ಟು ಹೆಚ್ಚಿಸಲಿದೆ ಎಂದು ಕಾದು ನೋಡಬೇಕಿದೆ. ಕೆಇಆರ್‌ಸಿ ಸಾರ್ವಜನಿಕ ಸಮಾಲೋಚನೆ ವೇಳೆ ವಿದ್ಯುತ್ ದರ ಏರಿಕೆಗೆ ಕೈಗಾರಿಕೆಗಳಿಂದ ವಿರೋಧ ವ್ಯಕ್ತವಾಗಿದೆ. ಮೂರು ವರ್ಷದ ದರ ಏರಿಕೆ ನಿರ್ಧಾರವನ್ನು ಒಮ್ಮೆಗೆ ಮಾಡುವುದು ಸಮಂಜಸವಲ್ಲ ಎಂದು ಕಂಪನಿಗಳು ಅಭಿಪ್ರಾಯಪಟ್ಟಿವೆ.

ಪ್ರಸ್ತುತ ಗೃಹ ಬಳಕೆಗೆ ಗೃಹ ಜ್ಯೋತಿ ಯೋಜನೆ ಇರುವುದರಿಂದ ಗೃಹ ಬಳಕೆಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟುವುದಿಲ್ಲ. ಆದರೆ ಒಂದು ವೇಳೆ ವಿದ್ಯುತ್‌ ಬಳಕೆ ಶುಲ್ಕಕ್ಕಿಂತ ನಿಗದಿತ ಶುಲ್ಕ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ದೊಡ್ಡ ಹೊರೆಯಾಗುವುದು ಖಚಿತ.

ಇದನ್ನೂ ಓದಿ: Renewable Energy: ದೇಶದ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ