Wednesday, 14th May 2025

Drug Seizure: ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಕಿಕ್ಕೇರಿಸಲು ಸಂಗ್ರಹಿಸಿದ್ದ 24 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ

Drug Seizure

ಬೆಂಗಳೂರು: ಹೊಸ ವರ್ಷಕ್ಕೆ ಕಿಕ್ಕೇರಿಸಲು ಸಂಗ್ರಹಿಸಿದ್ದ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿ, ವಿದೇಶಿ ಮಹಿಳೆಯನ್ನು ಬಂಧಿಸಿದ್ದಾರೆ. ನೈಜೀರಿಯಾದ ಖತರ್ನಾಕ್ ಮಹಿಳೆಯೊಬ್ಬಳು ದಿನಸಿ ಸಾಮಗ್ರಿ ಜತೆ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾಳೆ.

ನೈಜೀರಿಯನ್ ಮೂಲದ ರೋಜ್ಲೈಮ್ (40) ಎಂಬಾಕೆಯನ್ನು ಬಂಧಿಸಲಾಗಿದೆ. ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸೆಲೆಬ್ರೆಷನ್‌ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಯುವ ಪೀಳಿಗೆ ಹಾದಿ ತಪ್ಪಿಸಿ ಡ್ರಗ್ ಕಿಕ್ಕೇರಿಸಲು ಪೆಡ್ಲರ್‌ಗಳು ತಯಾರಾಗಿದ್ದಾರೆ. ಇದರ ಭಾಗವಾಗಿ ಕೋಟಿ ಕೋಟಿ ಬೆಲೆಯ ಮಾದಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ಲೇಡಿ ಪೆಡ್ಲರ್ ಸಿಸಿಬಿ ಬಲೆಗೆ ಬಿದ್ದಿದ್ದಾಳೆ. ಕರ್ನಾಟಕದ ಮಟ್ಟಿಗೆ ಇಷ್ಟು ದೊಡ್ಡಮಟ್ಟದ ಡ್ರಗ್ಸ್ ಪತ್ತೆಯಾಗಿರೋದು ಇದೆ ಮೊದಲು ಎಂದು ಹೇಳಲಾಗುತ್ತಿದೆ.

ಕೆ.ಆರ್. ಪುರದ ಟಿಸಿ ಪಾಳ್ಯದ ಅಂಗಡಿಯಲ್ಲಿ ಆರೋಪಿ, 24 ಕೋಟಿ ರೂ. ಮೌಲ್ಯದ 12 ಕೆಜಿ ಎಂಡಿಎಂಎ ವೈಟ್ ಮತ್ತು ಯೆಲ್ಲೊ ಕ್ರಿಸ್ಟಲ್ ಶೇಖರಣೆ ಮಾಡಿದ್ದಳು. ತನ್ನ ಅಂಗಡಿಯನ್ನ ಡ್ರಗ್ಸ್ ಶಾಪ್ ಆಗಿ ಪರಿವರ್ತಿಸಿದ್ದ ಮಹಿಳೆ, ಮುಂಬೈನಿಂದ ದಿನಸಿ ವಸ್ತುಗಳ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ತರಿಸುತ್ತಿದ್ದಳು. ಮುಂಬೈನ ಮಹಿಳೆಯೊಬ್ಬಳು ದಿನಸಿ ಪ್ಯಾಕೆಟ್‌ನಲ್ಲಿ ಡ್ರಗ್ಸ್ ಅಡಗಿಸಿ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದಳು.

ಮುಂಬೈನಲ್ಲಿರುವ ವಿದೇಶಿ ಮಹಿಳೆ ಜೂಲಿಯಟ್ ಇಲ್ಲಿನ ನೈಜೀರಿಯಾ ಮಹಿಳೆಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳು. ಈ ಡ್ರಗ್ಸ್ ಅನ್ನು ಸ್ಥಳೀಯ ನಿವಾಸಿಗಳು ಹಾಗೂ ಕೆಲ ಸಪ್ಲೈಯರ್ಸ್‌ಗೆ ಆರೋಪಿ ಮಹಿಳೆ ರಿಟೇಲ್‌ನಲ್ಲಿ ಮಾರಾಟ ಮಾಡುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ತಿಳಿದು ಸಿಸಿಬಿ ತಂಡ ಹೋಗಿತ್ತು. ಈ ವೇಳೆ ಮುಂಬೈನಿಂದ ಡ್ರಗ್ಸ್ ತಂದು ಕೊಡಬೇಕಾದಾಗ ರೆಡ್ ಹ್ಯಾಂಡ್‌ ಆಗಿ ಆಗಿ ರೋಜ್ಲೈಮ್ ಸಿಕ್ಕಿ ಬಿದ್ದಿದ್ದಾಳೆ.

ಇನ್ನು ಮುಂಬೈನಿಂದ ಡ್ರಗ್ಸ್ ತಂದಿದ್ದ ಜೂಲಿಯಟ್ ಎಂಬ ಮಹಿಳೆ ಪರಾರಿಯಾಗಿದ್ದು, ಸದ್ಯ ಸಿಸಿಬಿ ಪೊಲೀಸರು 24 ಕೋಟಿ ಮೌಲ್ಯದ ಡ್ರಗ್ಸ್‌ ಜತೆಗೆ 70 ಸಿಮ್‌ಗಳನ್ನು ಜಪ್ತಿ ಮಾಡಿದ್ದಾರೆ. 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರೋಜ್ಲೈಮ್ ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ವಾಸವಿದ್ದಾಳೆ. ಸದ್ಯ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರೋ ಜೂಲಿಯೆಟ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Viral News: 43 ವರ್ಷಗಳಲ್ಲಿ 12 ಬಾರಿ ವಿಚ್ಛೇದನ ಪಡೆದ ಖಿಲಾಡಿ ದಂಪತಿ ಇದೀಗ ಪೊಲೀಸ್‌ ವಶಕ್ಕೆ; ಏನಿದು ಪ್ರಕರಣ ?

14 ಕೋಟಿ ರೂ. ಮೌಲ್ಯದ ಕೊಕೇನ್ ಕ್ಯಾಪ್ಸುಲ್ ಸೇವಿಸಿದ್ದ ಕೀನ್ಯಾ ಮಹಿಳೆ; ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧನ

Chennai Airport

ಚೆನ್ನೈ: ಕೀನ್ಯಾದ ಮಹಿಳೆಯೊಬ್ಬಳು (Kenya Woman) 14.2 ಕೋಟಿ ರೂ. ಮೌಲ್ಯದ ಕೊಕೇನ್ (Cocaine Capsules) ಹೊಂದಿರುವ 90 ಕ್ಯಾಪ್ಸುಲ್‌ಗಳನ್ನು ಸೇವಿದ್ದು, ಕಸ್ಟಮ್ಸ್ ಅಧಿಕಾರಿಗಳು (Customs department) ಚೆನ್ನೈ ವಿಮಾನ ನಿಲ್ದಾಣದಲ್ಲಿ (Chennai Airport) ಬಂಧಿಸಿದ್ದಾರೆ. ಮಹಿಳೆ ಇಥಿಯೋಪಿಯಾದ ರಾಜಧಾನಿ ಅಡಿಸ್ ಅಬಾಬಾದಿಂದ ಚೆನ್ನೈಗೆ ಪ್ರಯಾಣಿಸಿದ್ದಳು ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಡಿಸೆಂಬರ್ 7ರಂದು ಇಥಿಯೋಪಿಯನ್ ಏರ್‌ಲೈನ್ಸ್‌ನಿಂದ ಅಡಿಸ್ ಅಬಾಬಾದಿಂದ ಚೆನ್ನೈಗೆ ಆಗಮಿಸಿದ ಕೀನ್ಯಾದ ಮಹಿಳಾ ಪ್ರಯಾಣಿಕನನ್ನು ಏರ್ ಇಂಟೆಲಿಜೆನ್ಸ್ ಯುನಿಟ್ ತಡೆಹಿಡಿದಿದೆ. ನಂತರ ವೈದ್ಯಕೀಯ ನೆರವಿನೊಂದಿಗೆ 90 ಸಿಲಿಂಡರಾಕಾರದ ಹೈಪರ್ಡೆನ್ಸ್ ವಸ್ತುಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಕೊಕೇನ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದಾಗ, ಸೈಕೋಟ್ರೋಪಿಕ್ ವಸ್ತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆಕೆಯ ಬಳಿ ಇದ್ದ ಒಟ್ಟು 1.4 ಕೆಜಿ ಕೊಕೇನ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿನ್ನ ಕಳ್ಳಸಾಗಣೆಯಲ್ಲಿ ಏರ್ ಇಂಡಿಯಾ ಸಿಬ್ಬಂದಿ ಬಂಧನ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಗೆ 1.7 ಕೆಜಿ 24-ಕ್ಯಾರೆಟ್ ಚಿನ್ನವನ್ನು ಕಳ್ಳ ಸಾಗಣೆ ಮಾಡಲು ಸಹಾಯ ಮಾಡಿದ್ದಕ್ಕಾಗಿ ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಭಾನುವಾರ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ಕೂಡಲೇ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ವಿಮಾನದೊಳಗೆ ಕ್ಯಾಬಿನ್ ಸಿಬ್ಬಂದಿಗೆ ಚಿನ್ನವನ್ನು ಹಸ್ತಾಂತರಿಸಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.

ಆರೋಪಿಗಳನ್ನು ಶೋಧನೆಗೆ ಒಳಪಡಿಸಿದ ನಂತರ ಕ್ಯಾಬಿನ್ ಸಿಬ್ಬಂದಿಯ ಒಳ ಉಡುಪುಗಳಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.