ಬೆಳಗಾವಿ: ಜಿಲ್ಲೆಯಲ್ಲಿ ಪಾತಕಿಯೊಬ್ಬ ಜೋಡಿ ಕೊಲೆ (Double Murder Case) ಮಾಡಿದ್ದಾನೆ. ಪ್ರೀತಿಗೆ ವಿರೋಧಿಸಿದ್ದಕ್ಕೆ ಬಾಲಕಿಯ ತಾಯಿ ಮತ್ತು ಸಹೋದರನನ್ನು ಹತ್ಯೆ ಮಾಡಿರುವ ಪಾತಕಿ, ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದಾನೆ. ಈ ದಾರುಣ ಘಟನೆ ಬೆಳಗಾವಿ (Belagavi crime news) ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ನಡೆದಿದೆ.
ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ಜೋಡಿ ಕೊಲೆ ನಡೆದಿದೆ. ತಾಯಿ ಮಂಗಲಾ ನಾಯಕ್(45), ಪುತ್ರ ಪ್ರಜ್ವಲ್ ನಾಯಕ್(18) ಕೊಲೆಯಾದ ದುರ್ದೈವಿಗಳು. ರವಿ ಖಾನಾಪಗೋಳ ಎಂಬಾತ ಕೊಲೆಗಾರ.
ಮಂಗಲಾ ನಾಯಕ್ ಅವರ ಅಪ್ರಾಪ್ತ ವಯಸ್ಸಿನ ಮಗಳು ಹಾಗೂ ಆಕೆಗಿಂತ 15 ವರ್ಷ ಹೆಚ್ಚು ವಯಸ್ಸಿನ ರವಿ ಪ್ರೀತಿಸಿದ್ದರು. ಆದರೆ ಈ ಪ್ರೀತಿಯನ್ನು ವಿರೋಧಿಸಿದ್ದ ತಾಯಿ, ಮಗಳಿಗೆ ಬೈದು ಬುದ್ಧಿ ಹೇಳಿದ್ದಳು. ಈ ವಿಚಾರವಾಗಿ ರವಿಗೆ ಆಕೆಯ ಮೇಲೆ ಕೋಪವಿತ್ತು. ನಿನ್ನೆ ಹುಡುಗಿ ತಾಯಿಯ ಜೊತೆಗೆ ಜಗಳ ಮಾಡಿಕೊಂಡಿದ್ದು, ಇದನ್ನು ರವಿಗೆ ಪೋನ್ ಮಾಡಿ ಹೇಳಿದ್ದಳು. ಇದರಿಂದ ಕ್ರುದ್ಧನಾದ ರವಿ, ಕೂಡಲೇ ಅಲ್ಲಿಗೆ ಬಂದಿದ್ದು, ಆಕೆಯನ್ನು ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಆಗ ಅಡ್ಡ ಬಂದ ಆಕೆಯ ತಾಯಿ ಹಾಗೂ ತಮ್ಮನನ್ನು ಕೊಲೆ ಮಾಡಿದ್ದಾನೆ.
ಕೊಲೆಗೆ ರವಿಯ ಗೆಳೆಯ ಲೋಕೇಶ್ ಎಂಬಾತ ಕೂಡ ಸಹಕರಿಸಿದ್ದ ಎಂದು ಗೊತ್ತಾಗಿದೆ. ರಾಡ್ನಿಂದ ಥಳಿಸಿ ಇಬ್ಬರ ಕೊಲೆ ಮಾಡಲಾಗಿದೆ. ಕೊಲೆಯ ಬಳಿಕ ಬಾಲಕಿಯನ್ನು ಕರೆದುಕೊಂಡು ಇಬ್ಬರೂ ರವಿಯ ಮನೆಗೆ ಹೋಗಿದ್ದಾರೆ ಲೋಕೇಶ ಸಾಕ್ಷಿ ನಾಶ ಮಾಡಲು ರಕ್ತಸಿಕ್ತ ಬಟ್ಟೆಗಳನ್ನು ಸುಡುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇಬ್ಬರನ್ನೂ ಬಂಧಿಸಿರುವ ಪೊಲೀಸರು, ಅಪ್ರಾಪ್ತ ವಯಸ್ಕಳನ್ನು ಆತನ ಸೆರೆಯಿಂದ ಬಿಡಿಸಿದ್ದಾರೆ.
ಇದನ್ನೂ ಓದಿ: Murder Case: ಬೆಂಗಳೂರಲ್ಲಿ ಮತ್ತೊಬ್ಬ ಯುವತಿಯ ಬರ್ಬರ ಹತ್ಯೆ; ಪ್ರೇಯಸಿಯನ್ನೇ ಚಾಕು ಇರಿದು ಕೊಂದ ಪ್ರಿಯಕರ!