Wednesday, 14th May 2025

DK Shivakumar: ಅಕ್ರಮ, ಕಳಪೆ ಗುಣಮಟ್ಟದ ಕಟ್ಟಡಗಳ ತೆರವಿಗೆ ಮುಲಾಜಿಲ್ಲದೆ ಕ್ರಮ; ಡಿ.ಕೆ. ಶಿವಕುಮಾರ್

Manmohan Singh

ಬೆಂಗಳೂರು: ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಹಾಗೂ ಕಳಪೆ ಗುಣಮಟ್ಟದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಯುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಜತೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹಾಗೂ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಸಭೆಯಲ್ಲಿ ಯಾವ ವಿಚಾರವಾಗಿ ಚರ್ಚೆಯಾಯಿತು ಎಂದು ಕೇಳಿದಾಗ, “ಮಳೆಯಿಂದ ಹಾನಿಯಾಗಿರುವ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಜತೆಗೆ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ನಾವು ಮುಂದಾಗಿದ್ದೇವೆ. ಈ ಹಿಂದೆ ಅಧಿಕಾರಿಗಳಿಗೆ ಇದ್ದ ಅಧಿಕಾರವನ್ನು ಕಳೆದ ಸರ್ಕಾರ ಮೊಟಕುಗೊಳಿಸಿತ್ತು. ಈಗ ನಮ್ಮ ಸರ್ಕಾರ ಬಿಬಿಎಂಪಿ, ಬಿಡಿಎ, ಬಿಎಂಆರ್ ಡಿಎ ಅಧಿಕಾರಿಗಳಿಗೆ ಈ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ಅಧಿಕಾರ ನೀಡುತ್ತಿದ್ದೇವೆ. ಕೂಡಲೇ ಇಂತಹ ಆಸ್ತಿಗಳ ನೋಂದಣಿ ನಿಲ್ಲಿಸಲಾಗುವುದು. ಇದೇ ವೇಳೆ ಒತ್ತುವರಿ ತೆರವುಗೊಳಿಸುವ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಈ ವಿಚಾರದಲ್ಲಿ ನಾವು ಪ್ರಮುಖ ತೀರ್ಮಾನ ಕೈಗೊಂಡಿದ್ದೇವೆ”ಎಂದು ವಿವರಿಸಿದರು.

ಈ ಸುದ್ದಿಯನ್ನೂ ಓದಿ | Karnataka Rain: ಭಾರಿ ಮಳೆ; ಮನೆ, ಪ್ರಾಣ ಹಾನಿ ಪ್ರಕರಣಗಳಲ್ಲಿ 48 ಗಂಟೆಯೊಳಗೆ ಪರಿಹಾರ ನೀಡಲು ಸಿಎಂ ಸೂಚನೆ

ಮಳೆಯಿಂದ ಆಗಿರುವ ತೊಂದರೆ ಬಗ್ಗೆ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ಬೆಂಗಳೂರು ನಗರದಲ್ಲಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿದ್ದು ಹಾಗೂ ಕಳಪೆ ಗುಣಮಟ್ಟದ ಕಟ್ಟಡ ಕುಸಿತ ಹೊರತಾಗಿ ಮಳೆಯಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ” ಎಂದು ತಿಳಿಸಿದರು.

“ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಿ, ಅವರನ್ನು ಸುರಕ್ಷಿತವಾಗಿ ಹೋಟೆಲ್‌ಗಳಲ್ಲಿ ಇರಿಸಿ ಅವರಿಗೆ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆ ನೀಡಿದ್ದೇವೆ. ನಮ್ಮ ಅಧಿಕಾರಿಗಳು ದಿನದ 24 ತಾಸುಗಳು ಕೆಲಸ ಮಾಡಿದ್ದಾರೆ” ಎಂದು ಹೇಳಿದರು.

ಮಳೆಯಿಂದ ಆಗುವ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರವೇನು ಎಂದು ಕೇಳಿದಾಗ, “ಒಂದೇ ಬಾರಿಗೆ ಮಳೆನೀರುಗಾಲುವೆ ನಿರ್ಮಾಣ ಮಾಡುತ್ತಿದ್ದೇವೆ. ಹೀಗಾಗಿ ರಾಜಕಾಲುವೆ ಅಕ್ಕಪಕ್ಕ 50 ಅಡಿ ಜಾಗ ಬಿಟ್ಟು ಅಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಈ ರಸ್ತೆ ನಿರ್ಮಾಣದಿಂದ ಕಟ್ಟಡಗಳಿಗೂ ರಕ್ಷಣೆ ಸಿಗುತ್ತದೆ ಹಾಗೂ ಕಾಲುವೆಗಳ ಸ್ವಚ್ಛ ಕಾರ್ಯಕ್ಕೂ ನೆರವಾಗಲಿದೆ. ಮೊದಲ ಹಂತದಲ್ಲಿ 300 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.

ಬೆಳೆ ಹಾನಿಗೆ ಪರಿಹಾರ

ಸಭೆಯಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಯಾವ ಸೂಚನೆ ನೀಡಲಾಗಿದೆ ಎಂದು ಕೇಳಿದಾಗ, “ಎಲ್ಲೆಲ್ಲಿ ರೈತರ ಬೆಳೆಗಳಿಗೆ ಹಾನಿಯಾಗಿವೆ ಅವರಿಗೆ ಪರಿಹಾರ ನೀಡಲು ಸೂಚಿಸಲಾಗಿದೆ” ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಅ. 28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ

ರೈತರ ಜಮೀನನ್ನು ವಕ್ಫ್ ಮಂಡಳಿ ಮೂಲಕ ವಶಪಡಿಸಿಕೊಂಡು ಓಲೈಕೆ ರಾಜಕಾರಣ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.