ಬಳ್ಳಾರಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಇಂದು ಬಾಣಂತಿಯರ ಸಾವುಗಳು ಸಂಭವಿಸಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳ್ಳಾರಿ ಜಿಲ್ಲಾ ಆಸ್ಪತ್ರೆ ಭೇಟಿ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಜಿಲ್ಲಾಸ್ಪತ್ರೆಯ ಎದುರೇ ಧರಣಿ ಕುಳಿತಿದ್ದ ಶ್ರೀರಾಮುಲು ಅವರ ಬಳಿ ನೇರವಾಗಿ ತೆರಳಿದ ಸಚಿವ ದಿನೇಶ್ ಗುಂಡೂರಾವ್, ಧರಣಿ ಕೈ ಬಿಡುವಂತೆ ಮನವಿ ಮಾಡಿದರು.

ಬಾಣಂತಿಯರ ಸಾವಿನ ವಿಚಾರದಲ್ಲಿ ಪ್ರತಿಭಟಿಸುವುದನ್ನು ನಾನು ವಿರೋಧಿಸಲ್ಲ. ಆದರೆ ಈ ರೀತಿಯ ಸಾವಿನ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣವೇ ನಾನೇ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ತಜ್ಞರ ತಂಡವನ್ನು ಕಳಿಸಿ ಎಲ್ಲಿ ಲೋಪದೋಷಗಳಾಗಿವೆ ವರದಿ ನೀಡುವಂತೆ ಕೇಳಿದ್ದೆ. ಅವರು ನೀಡಿರುವ ವರದಿಯ ಪ್ರಕಾರ ವೈದ್ಯರ ಸೇವೆಯಲ್ಲಿ ಯಾವುದೇ ಕುಂದು ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಿಂಗರ್ ಲ್ಯಾಕ್ಟೇಟ್ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ನಮಗೂ ಈ ಮೊದಲು ಐವಿ ದ್ರಾವಣದ ಮೇಲೆ ಅನುಮಾನವಿತ್ತು. 6 ತಿಂಗಳ ಹಿಂದೆಯೇ ನಾವು ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನು ತಡೆಹಿಡಿದಿದ್ವಿ. ಆದರೆ ಕಂಪನಿಯವರು ಕೋರ್ಟ್ ಮೊರೆ ಹೋಗಿ ಸೆಂಟ್ರಲ್ ಡ್ರಗ್ ಲ್ಯಾಬ್ನಿಂದ ಪಾಸಿಟಿವ್ ವರದಿ ತಂದು KSMCL ನಿಂದ ಬಿಡುಗಡೆ ಮಾಡಿಸಿಕೊಂಡ್ರು ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು. ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲು ಕ್ರಮ ವಹಿಸುತ್ತಿದ್ದು, ಕಂಪನಿಯವರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಲಾಗಿದೆ. ರಾಜ್ಯಾದ್ಯಂತ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಯನ್ನು ನಿಲ್ಲಿಸಲಾಗಿದೆ ಎಂದು ಸಚಿವ ಗುಂಡೂರಾವ್ ಸ್ಪಷ್ಟಪಡಿಸಿದರು. ಸಚಿವರ ಸ್ಪಷ್ಟನೆ ಬಳಿಕ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆಯನ್ನು ಕೈಬಿಟ್ಟರು.
ಈ ಸುದ್ದಿಯನ್ನೂ ಓದಿ | CM Siddaramaiah: ಬಾಣಂತಿಯರ ಸರಣಿ ಸಾವು; ಸಮಿತಿ ವರದಿ ಬಂದ ನಂತರ ಸೂಕ್ತ ಕ್ರಮ; ಸಿದ್ದರಾಮಯ್ಯ
ಆಸ್ಪತ್ರೆ ಭೇಟಿ ನೀಡಿ ಆಪರೇಷನ್ ಥಿಯೇಟರ್ಗಳನ್ನು ಪರಿಶೀಲಿಸಿದ ಸಚಿವರು, ಸರ್ಜರಿಗಳ ಸಂದರ್ಭದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ ನೀಡಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪಶ್ಚಿಮ ಬಂಗಾಳ ಕಂಪನಿ ಪೂರೈಸಿದ್ದ 192 ಐವಿ ರಿಂಗರ್ ಲ್ಯಾಕ್ಟೇಟ್ ಬ್ಯಾಚ್ಗಳನ್ನು ತಡೆಹಿಡಿದಿದ್ದು, ಆಸ್ಪತ್ರೆಗಳಿಂದ ಹಿಂಪಡೆಯಲಾಗಿದೆ. ಕಂಪನಿ ವಿರುದ್ಧ ಪ್ರಾಸಿಕ್ಯೂಷನ್ಗೆ ಸೂಚಿಸಿದ್ದೇನೆ ಎಂದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಗ್ಲುಕೋಸ್ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ. ಐವಿ ದ್ರಾವಣಕ್ಕಾಗಿ ಹೊಸ ಟೆಂಡರ್ ಪ್ರಕ್ರಿಯೆ ಕೂಡ ನಡೆಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಕೋವಿಡ್ ಅಕ್ರಮ; ಹಣ ತಿಂದವರನ್ನು ಬಿಡುವುದಿಲ್ಲ ಎಂದ ಡಿಕೆಶಿ
ಮೃತ ಬಾಣಂತಿಯರಾದ ನಂದಿನಿ, ಲಲಿತಾ ಹಾಗೂ ಕೂಡ್ಲಿಗಿಯ ಸುಮಯಾ ಅವರುಗಳ ಮನೆಗಳಿಗೆ ಭೇಟಿ ನೀಡಿದ ಆರೋಗ್ಯ ಸಚಿವರು, ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ಈ ಪ್ರಕರಣದಿಂದ ನೋವುಂಟಾಗಿದೆ. ಬಾಣಂತಿಯರನ್ನು ಆರೈಕೆ ಮಾಡಿ ಜೀವ ಉಳಿಸಲು ಸಾಧ್ಯವಿರುವಾಗ ಈ ರೀತಿಯ ಸಾವುಗಳು ಸಂಭವಿಸಬಾರದು. ಮುಂದೆ ಈ ರೀತಿಯ ಸಾವುಗಳು ಆಗದಂತೆ ಎಚ್ವರಿಕೆ ವಹಿಸುವುದರ ಜತೆಗೆ, ಘಟನೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಖುವುದಾಗಿ ಕುಟುಂಬ ವರ್ಗದವರಿಗೆ ಸಚಿವರು ಭರವಸೆ ನೀಡಿದರು. ಮೃತ ಬಾಣಂತಿಯರ ಕುಟುಂಬ ವರ್ಗದವರಿಗೆ ಸರ್ಕಾರ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು, ಹೆಚ್ವಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.