ಬೆಂಗಳೂರು: ಪಂಚಮಸಾಲಿ ಸಮಾಜದ ಶಾಂತಿಯುತ ಪ್ರತಿಭಟನೆ, ಹೋರಾಟಗಾರರ ಮೇಲೆ ಸರ್ಕಾರವು ಲಾಠಿ ಚಾರ್ಜ್ ನಡೆಸಿ ಅಮಾನವೀಯವಾಗಿ ವರ್ತಿಸಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದಡಿ ಪಂಚಮಸಾಲಿಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿ. ನಿನ್ನೆ ನಡೆದ ಲಾಠಿಚಾರ್ಜ್ ಸಂಬಂಧ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸುವಂತೆ ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Job Fair: ಜ.19ರಂದು ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳ
ಬೆಳಗಾವಿಯಲ್ಲಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಆಗ ನಡೆಸಿದ ಲಾಠಿಚಾರ್ಜ್ನಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ಜನ ಲಿಂಗಾಯತ ಸಮುದಾಯಕ್ಕೆ ಸೇರಿದ ಪಂಚಮಸಾಲಿ ರೈತರು ಗಾಯಗೊಂಡಿದ್ದಾರೆ. ಸರ್ಕಾರದ್ದು ಸರ್ವಾಧಿಕಾರಿ ನಡೆ, ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಖಂಡಿಸಿದರು.
ಪಂಚಮಸಾಲಿ ಸಮುದಾಯದ ಬೇಡಿಕೆ ಇವತ್ತು ನಿನ್ನೆಯದಲ್ಲ, 2 ಎ ಮೀಸಲಾತಿ ಸಂಬಂಧ ಈ ಸರ್ಕಾರ ಬಂದ ಆರಂಭದಿಂದ ಅವರ ಬೇಡಿಕೆಗಳನ್ನು ಪುನರುಚ್ಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ 2 ಸಿ, 2 ಡಿ ಅಡಿ ಎರಡು ರೀತಿ ಮೀಸಲಾತಿ ಕೊಟ್ಟು, ಅದರಡಿಯಲ್ಲಿ ವಿವಿಧ ಸಮುದಾಯಗಳನ್ನು ಒಟ್ಟು ಸೇರಿಸಿ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿತ್ತು ಎಂದು ಅವರು ವಿವರಿಸಿದರು.
2 ಸಿಗೆ ಶೇ. 4 ಮೀಸಲಾತಿ ಇದ್ದುದನ್ನು ಶೇ. 6 ಮಾಡಿದ್ದು, 2 ಡಿ ಅಡಿ ಶೇ. 5 ಇದ್ದುದನ್ನು ಶೇ. 7 ಮಾಡಿದ್ದರು. ಪಂಚಮಸಾಲಿಗಳನ್ನೂ 2 ಡಿ ವ್ಯಾಪ್ತಿ ಒಳಗಡೆ ತರುವ ಕೆಲಸ ಮಾಡಲಾಗಿತ್ತು. ಅದನ್ನು ಈ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಿಲ್ಲ. 2 ಎ ಮೀಸಲಾತಿ ಬಗ್ಗೆಯೂ ಸರಿಯಾಗಿ ಸ್ಪಂದಿಸಿಲ್ಲ. ಈ ಮೂಲಕ ಹೋರಾಟಕ್ಕಿಳಿಯುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದ್ದೇ ಆಳುವ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
ರಾಜೀನಾಮೆ ಕೊಡುವವರು ಎಲ್ಲಿ ಹೋಗಿದ್ದಾರೆ?
ಕಾಂಗ್ರೆಸ್ಸಿಗರು ವಿಪಕ್ಷದಲ್ಲಿದ್ದಾಗ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸಂಬಂಧಿಸಿ ಮೊಸಳೆ ಕಣ್ಣೀರು ಸುರಿಸಿದ್ದರು. ಇವರ ಪಕ್ಷದ ಮುಖಂಡರು ರಾಜೀನಾಮೆ ಕೊಡುವ ಮಾತನಾಡಿದ್ದರು. ಲಾಠಿಚಾರ್ಜ್ ಆಗಿದೆ. ಸ್ವಾಮೀಜಿಗಳನ್ನು ಬಂಧಿಸಿದ್ದೀರಿ. ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ರಾಜೀನಾಮೆ ಕೊಡುವವರೆಲ್ಲ ಎಲ್ಲಿ ಬಿಲ ಸೇರಿಕೊಂಡಿದ್ದೀರಿ? ಎಂದು ಸಿ.ಟಿ. ರವಿ ಪ್ರಶ್ನಿಸಿದರು. ಇವರೆಲ್ಲ ಯಾವ ಮುಖ ಇಟ್ಟುಕೊಂಡು ಜನರಿಗೆ ಮುಖ ತೋರಿಸುತ್ತಾರೆ ಎಂದು ಕೇಳಿದ ಅವರು, ಮನವಿ ಸ್ವೀಕರಿಸಲು ಸಾಧ್ಯವಾಗದಷ್ಟು ಮುಖ್ಯಮಂತ್ರಿಗಳು ಸರ್ವಾಧಿಕಾರಿ ಆಗಿಬಿಟ್ಟರೇ ಎಂದು ಪ್ರಶ್ನಿಸಿದರು. ಲಾಠಿಚಾರ್ಜ್ ಮಾಡಿಸುವುದೇ ಸಮಾಜವಾದವೇ ಎಂದರು.
ಧರ್ಮಾಧಾರಿತ ಮೀಸಲಾತಿಯನ್ನು ನಮ್ಮ ಸಂವಿಧಾನವೂ ನಿರಾಕರಿಸಿದೆ. ಆಂಧ್ರ, ಪಶ್ಚಿಮ ಬಂಗಾಳ ಸರ್ಕಾರಗಳು ಧರ್ಮಾಧಾರಿತ ಮೀಸಲಾತಿ ಕೊಡುವುದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅದು ಸಂವಿಧಾನಬಾಹಿರ ಎಂದು ತಿಳಿಸಿದೆ. ಹಾಗಾಗಿ ನೀವು ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ 2 ಸಿ, 2ಡಿ ಯನ್ನಾದರೂ ಅನುಷ್ಠಾನಕ್ಕೆ ತನ್ನಿ ಅಥವಾ 2 ಎ ಅಡಿ ಪಂಚಮಸಾಲಿಗಳಿಗೂ ಮೀಸಲಾತಿ ಕೊಡಿ ಎಂದು ಅವರು ಆಗ್ರಹಿಸಿದರು.
ನಮ್ಮ ಪಕ್ಷವು ಈ ಸಂಬಂಧ ವಿಧಾನಸಭೆ ಒಳಗಡೆಯೂ ಹೋರಾಟ ಮಾಡಲಿದೆ ಎಂದ ಅವರು, ಮುಖ್ಯಮಂತ್ರಿಗಳ ನಡವಳಿಕೆ ಪರಿಪಕ್ವವಾಗಿಲ್ಲ. ಪ್ರಜಾಪ್ರಭುತ್ವಕ್ಕೆ ತಕ್ಕದಾದ ನಡೆಯಲ್ಲ. ಕಾಂಗ್ರೆಸ್ಸಿಗರು ತಪ್ಪಾಗಿದೆ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಒಂದು ಮಾತನ್ನೂ ಆಡಿಲ್ಲ. ಕ್ಷಮೆ ಕೇಳುವ ಔದಾರ್ಯವನ್ನೂ ಪ್ರದರ್ಶಿಸಿಲ್ಲ ಎಂದು ಟೀಕಿಸಿದರು.
ಮಾನವೀಯ ಕಳಕಳಿ ವಯನಾಡಿಗೆ ಸೀಮಿತವಾದ ಮರ್ಮವೇನು?
ಮುಖ್ಯಮಂತ್ರಿಗಳಿಗೆ ಕೇರಳದ ವಯನಾಡಿನ ಸಂತ್ರಸ್ತರ ಬಗ್ಗೆ ಕಾಳಜಿ ಇರುವುದು ತಪ್ಪೆಂದು ಹೇಳುವುದಿಲ್ಲ. ಅಲ್ಲಿ ಅಗತ್ಯವಾದರೆ ಜಾಗ ಖರೀದಿಸಿ ಮನೆ ಕಟ್ಟಿಕೊಡುವ ಕುರಿತು ಸಿಎಂ ಪತ್ರ ಬರೆದಿದ್ದಾರೆ. ಇದು ಮಾನವೀಯ ಕಳಕಳಿ ಇರುವವರು ವರ್ತಿಸಬೇಕಾದ ಸಂಗತಿ. ಇದು ತಪ್ಪೆನ್ನಲಾರೆ. ನೀವು ಕೇವಲ ವಯನಾಡಿಗೆ ಮಾತ್ರ ನಿಮ್ಮ ದೃಷ್ಟಿ ಹರಿಸಿದ್ದು, ನಿಮ್ಮ ಮಾನಸಿಕ ಗುಲಾಮಗಿರಿಯ ಸಂಕೇತದಂತಿದೆ ಎಂದು ಆರೋಪಿಸಿದ ಅವರು, ವಯನಾಡನ್ನು ಹಿಂದೆ ರಾಹುಲ್ ಗಾಂಧಿ, ಈಗ ಪ್ರಿಯಾಂಕ ಗಾಂಧಿ ಪ್ರತಿನಿಧಿಸುತ್ತಿದ್ದು, ಇದು ನಿಮ್ಮ ಸಹಜ ಮಾನವೀಯ ಕಳಕಳಿ ಎಂದು ಕಾಣುತ್ತಿಲ್ಲ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Essay Competition: ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ
ಕರ್ನಾಟಕದ ಎತ್ತಿನಹೊಳೆ ಸಂಬಂಧ ಬೇಲೂರಿನ ವಡ್ಡರಹಳ್ಳಿಯ ರೈತ ರಂಗಸ್ವಾಮಿ ಅವರು ಎತ್ತಿನಹೊಳೆಯ ಪರಿಹಾರ ಬಂದಿಲ್ಲ ಎಂದು ಅಲೆದಲೆದು ಸಾಕಾಗಿ, ಲಂಚ ಕೇಳಿದ ಅಧಿಕಾರಿಯ ನಡೆಯಿಂದ ಬೇಸತ್ತು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಸಮಾವೇಶ ಮಾಡಿದ ನೀವು ಎತ್ತಿನಹೊಳೆ ದುರ್ಘಟನೆ, ಸರಣಿ ರೀತಿಯಲ್ಲಿ ಬಾಣಂತಿಯರ- ಹಸುಗೂಸುಗಳ ಸಾವು ಬಗ್ಗೆ ತೋರಿಸದ ಮಾನವೀಯ ಕಳಕಳಿ ವಯನಾಡಿಗೆ ಸೀಮಿತವಾದ ಮರ್ಮವೇನು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದರು.