ಮಂಡ್ಯ: ಹೈಕೋರ್ಟ್‌ನಲ್ಲಿ ನಮ್ಮ ಅರ್ಜಿ ವಿಚಾರಣೆಗೆ ಬರುವ ಹಿಂದಿನ ದಿನ ಇ.ಡಿ.ಯವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ. ಇ.ಡಿ. ತನಿಖಾ ವರದಿಯನ್ನು ನೇರವಾಗಿ ಲೋಕಾಯುಕ್ತಕ್ಕೆ ನೀಡಬಹುದಿತ್ತು. ಅದನ್ನು ಬಿಟ್ಟು, ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತಕ್ಕೆ ಇ.ಡಿ. ಪತ್ರ ಬರೆದಿರುವ ಬಗ್ಗೆ ಕೆ.ಆರ್.ಪೇಟೆ ಹೆಲಿಪ್ಯಾಡ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇ.ಡಿ ಯವರು ತನಿಖೆ ನಡೆಸುತ್ತಿದ್ದಾರೆ. ಅವರು ತನಿಖೆ ನಡೆಸುತ್ತಿರುವುದೇ ಸರಿಯಲ್ಲ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾಳೆ ನಮ್ಮ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಬರುತ್ತಿದೆ. ಇದಕ್ಕೆ ಒಂದು ದಿನ ಮೊದಲು ಮಾಧ್ಯಮಗಳಲ್ಲಿ ಪ್ರಚಾರ ಮಾಡಿರುವುದರ ಹಿಂದೆ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಮತ್ತು ನ್ಯಾಯಾಲಯವನ್ನು ಪೂರ್ವಾಗ್ರಹದ ನಿಲುವಿಗೆ ತರುವ ದುರುದ್ದೇಶದ ರಾಜಕೀಯ ನಡೆಯಾಗಿದೆ.
ಡಿಸೆಂಬರ್ 24 ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ಇ.ಡಿ ಯವರು ಲೋಕಾಯುಕ್ತಕ್ಕೆ ವರದಿ ನೀಡಲು ಅವಕಾಶವಿತ್ತು. ಅದನ್ನು ಬಿಟ್ಟು ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡುವುದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ. pic.twitter.com/HlHQSo66fp
— Siddaramaiah (@siddaramaiah) December 4, 2024
ಡಿಸೆಂಬರ್ 24 ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ಇ.ಡಿ ಯವರು ಲೋಕಾಯುಕ್ತಕ್ಕೆ ವರದಿ ನೀಡಲು ಅವಕಾಶವಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿರುವುದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | BS Yediyurappa: ಯತ್ನಾಳ್ ಹೊರಗಿನವರಲ್ಲ, ನಮ್ಮವರೇ ಎಂದ ಬಿಎಸ್‌ವೈ
ತೆರಿಗೆ ಕಟ್ಟುವವರಿಗೆ ಅನ್ನಭಾಗ್ಯದ ಅಗತ್ಯ ಇಲ್ಲ ಅಲ್ಲವೇ?
ನಾನು ಬಡತನ ರೇಖೆಗಿಂತ ಕೆಳಗಿಲ್ಲ. ಹೀಗಾಗಿ ಅನ್ನಭಾಗ್ಯ ನನಗೆ ಸಿಗಬಾರದು. ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೇ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಬದಲಾಗಿದೆ. ತೆರಿಗೆ ಕಟ್ಟುವವರಿಗೆ ಅನ್ನಭಾಗ್ಯದ ಅಗತ್ಯ ಇಲ್ಲ ಅಲ್ಲವೇ ಎಂದು ಜನತೆಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಡಿಪಿಯಲ್ಲಿ ಇಡೀ ದೇಶದಲ್ಲಿ ನಾವೇ ನಂಬರ್ ಒನ್. ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ರೈತರ ಶ್ರಮಕ್ಕೆ ತಕ್ಕ ಫಲ ಸಿಗಬೇಕು. ನಮ್ಮ ಉತ್ಪಾದನೆಗೆ ನಾವೇ ಬೆಲೆ ನಿಗದಿ ಮಾಡುವಂತಾಗಬೇಕು. ಕೈಗಾರಿಕೋದ್ಯಮಿಗಳು ಅವರು ತಯಾರಿಸಿದ ವಸ್ತುಗಳಿಗೆ ಅವರೇ ಬೆಲೆ ನಿಗದಿ ಮಾಡುತ್ತಾರೆ. ಇದೇ ಅಧಿಕಾರ ನಮ್ಮ ರೈತರಿಗೂ ಸಿಗಬೇಕು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಒಕ್ಕೂಟ ವ್ಯವಸ್ಥೆ ಯಶಸ್ವಿ ಆಗಬೇಕಾದರೆ ದೇಶದ 140 ಕೋಟಿ ಜನರಿಗೂ ಸಕಲ ಸಹಕಾರ ಕೊಡಬೇಕು. ನಮ್ಮ ರೈತ ಸಮುದಾಯಕ್ಕೆ ಬೆಲೆ ನಿಗದಿ ಮಾಡುವ ಅಧಿಕಾರ ಬರಬೇಕು. ಆಗ ತಾರತಮ್ಯ ನಿವಾರಣೆ ಆಗುತ್ತದೆ ಎಂದು ತಿಳಿಸಿದರು.
ಈ ದೇಶಕ್ಕೆ ಸಿಕ್ಕ ರಾಜಕೀಯ ಸ್ವಾತಂತ್ರ್ಯ ಯಶಸ್ವಿ ಆಗಬೇಕಾದರೆ, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯ. ಈ ಕಾರಣಕ್ಕೆ ನಾವು ಅನ್ನಭಾಗ್ಯ ಮತ್ತು ಆರ್ಥಿಕ ಶಕ್ತಿ ಕೊಡುವ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಡ ಕುಟುಂಬದವರ ಮತ್ತು ನಮ್ಮ ಹೆಣ್ಣು ಮಕ್ಕಳ ಹಣ ಉಳಿತಾಯ ಆಗಲಿ ಎನ್ನುವ ಕಾರಣದಿಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ನಮ್ಮ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಕೈಯಲ್ಲಿ ಕಾಸಿದ್ದರೆ ತಾನೆ ನಮ್ಮ ಜನ ಖರೀದಿಗೆ ಹೋಗೋದು. ಅದಕ್ಕೆ ಜನರ ಕೈಯಲ್ಲಿ ಕಾಸು ಇರುವ ಯೋಜನೆ ಜಾರಿ ಮಾಡಿದ್ದೇವೆ.
ಇನ್ನು ಕೆ.ಆರ್.ಪೇಟೆಯಲ್ಲಿ ಹಾಳಾಗಿರುವ ರಸ್ತೆ, ಕೆರೆ, ಸೇತುವೆಗೆ ಹಣ ಕೊಡಬೇಕು ಎನ್ನುವ ಮನವಿ ಬಂದಿದೆ. ನಾವು ಬೇಡಿಕೆಗೆ ತಕ್ಕಷ್ಟು ಹಣವನ್ನು ಖಂಡಿತ ಬಿಡುಗಡೆ ಮಾಡುತ್ತೇವೆ. ರಾಜ್ಯದಲ್ಲಿ ಪ್ರತೀ ಲೀಟರ್ ಹಾಲಿಗೆ 5 ರೂಪಾಯಿ ಸಹಾಯಧನ ಜಾರಿ ಮಾಡಿದ್ದು ನಾವು. ದಿನಕ್ಕೆ ರಾಜ್ಯದಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಅಂದರೆ ಪ್ರತೀ ದಿನ 5 ಕೋಟಿ ರೂಪಾಯಿಯನ್ನು ಹಾಲು ಉತ್ಪಾದಕರಿಗೆ ಕೊಡುತ್ತಿದ್ದೇವೆ. ನಾವು ಒಂದು ಕಡೆ ರೈತರಿಗೆ ಶಕ್ತಿ ತುಂಬುತ್ತಿದ್ದೇವೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಎಸಗುತ್ತಿದೆ. ರಾಜ್ಯದ ರೈತರಿಗೆ ನಬಾರ್ಡ್‌ನಿಂದ ಕೊಡುವ ಸಬ್ಸಿಡಿ ಸಾಲದ ಪ್ರಮಾಣವನ್ನು ಶೇ.58 ರಷ್ಟು ಕಡಿತಗೊಳಿಸಿದೆ. ಬರೀ ಭಾಷಣ ಮಾಡಿದರೆ ರೈತರ ಬದುಕು ಉದ್ಧಾರ ಆಗಲ್ಲ ಎಂದು ಕಿಡಿ ಕಾರಿದರು.
ಈ ಸುದ್ದಿಯನ್ನೂ ಓದಿ | Maha Kumbh Mela: ಮಹಾಕುಂಭ ಮೇಳದಲ್ಲಿ ತಲೆ ಎತ್ತಲಿದೆ ತಿರುಪತಿ ವೆಂಕಟೇಶ್ವರ ದೇವಾಲಯ