ಬೆಂಗಳೂರು: ನಮಗೆ ಸಿಕ್ಕಿರುವ ವಿದ್ಯೆ ಮತ್ತು ಅವಕಾಶಗಳ ಹಿಂದೆ ಸಮಾಜದ ಋಣ ಇದೆ. ಈ ಋಣ ತೀರಿಸುವುದು ನಮ್ಮ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಕೆಎಎಸ್ ಅಧಿಕಾರಿಗಳಿಗೆ ಕರೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎರಡು ಹೊತ್ತಿನ ಊಟಕ್ಕೂ ಶ್ರಮಿಸುತ್ತಿರುವ ಕಟ್ಟಕಡೆಯ ಜನರ ಪರವಾಗಿ ನಿಮ್ಮ ಬದ್ಧತೆ ತೋರಿಸಿ ಎಂದು ಸೂಚಿಸಿದ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಾಡಿರುವ ಭಾಷಣವನ್ನು ನೀವೆಲ್ಲಾ ಓದಬೇಕು. ಐತಿಹಾಸಿಕ ಕಾರಣಗಳಿಂದಾಗಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಇದನ್ನು ಹೋಗಲಾಡಿಸಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಈ ಆಶಯ ಈಡೇರಿಸಲು ನಾವು ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೀನಿ. ಮೊದಲ ಬಾರಿ ಸಿಎಂ ಆಗಿ ಹಲವಾರು ಭಾಗ್ಯಗಳು, ಈ ಬಾರಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೀವಿ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿ ಆಹಾರ, ಶಿಕ್ಷಣ, ಮಾಹಿತಿ ಹಕ್ಕುಗಳನ್ನು ಮಾಡುವ ಮೂಲಕ ಸಂವಿಧಾನದ ನಿರ್ದೇಶಕ ತತ್ವಗಳನ್ನು ಜನರ ಹಕ್ಕುಗಳನ್ನಾಗಿ ಮಾಡಿದರು. ಇವೆಲ್ಲವೂ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಉದ್ದೇಶವನ್ನೇ ಹೊಂದಿವೆ. ಆದ್ದರಿಂದ ಮಧ್ಯವರ್ತಿಗಳೇ ಇಲ್ಲದ ನಮ್ಮ ಗ್ಯಾರಂಟಿಗಳನ್ನು ಮನೆ ಮನೆ ತಲುಪಿಸಿ ಎಂದರು.

ಸೂಟು ಬೂಟು ಹಾಕಿಕೊಂಡು ಬರುವವರನ್ನು ಕುರ್ಚಿಯಲ್ಲಿ ಕೂರಿಸಿ ಮಾತನಾಡಿಸುವುದನ್ನು, ಮಾಸಲು ಬಟ್ಟೆಯಲ್ಲಿ ಬರುವ ಬಡವರನ್ನು ನಿರ್ಲಕ್ಷ್ಯದಿಂದ ಕಾಣುವುದು ನಮ್ಮ ಮಾನಸಿಕ ಗುಲಾಮಗಿರಿಯ ಧ್ಯೋತಕ. ಇದನ್ನು ಕಿತ್ತೊಗೆದು ಪ್ರತಿಯೊಬ್ಬರಿಗೂ ಸಮಾಜದಲ್ಲಿ ಅವಕಾಶಗಳು ಸಿಗುವಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.
ಕೆಎಎಸ್ ಅಧಿಕಾರಿಗಳ ಸಂಘ ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೆಎಎಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲು ನಾವು ಸಿದ್ದರಿದ್ದೇವೆ. ಆದರೆ ಸಂಖ್ಯೆ ಮುಖ್ಯವಲ್ಲ. ನಿಮ್ಮ ಗುಣಾತ್ಮಕ ಕರ್ತವ್ಯ, ಸೇವೆ ಮುಖ್ಯ ಎಂದರು.
ಕೆಎಎಸ್ ಅಧಿಕಾರಿಗಳ ಬಡ್ತಿ ಬೇಡಿಕೆ ಪರಿಶೀಲಿಸಲಾಗುವುದು
ಕೆಎಎಸ್ ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ದವಿದೆ. ಮುಂದಿನ ಹತ್ತು ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ, ಕೆಎಎಸ್ ಅಧಿಕಾರಿಗಳ ಬಡ್ತಿ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ಈ ವೇಳೆ ಭರವಸೆ ನೀಡಿದರು.
ಈ ಸುದ್ದಿಯನ್ನೂ ಓದಿ | Glopixs: ಡಿಜಿಟಲ್ ಮನರಂಜನೆ ಕ್ಷೇತ್ರಕ್ಕೆ ಗ್ಲೋಪಿಕ್ಸ್ ಒಟಿಟಿ; ಲೋಗೊ ಅನಾವರಣ
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಸತ್ಯವತಿ ಉಪಸ್ಥಿತರಿದ್ದರು.