Saturday, 10th May 2025

Chandrashekharanatha Swamiji: ಪೊಲೀಸ್‌ ವಿಚಾರಣೆಗೆ ಸ್ವಾಮೀಜಿ ಗೈರು, ಮಠಕ್ಕೇ ಬಂದು ಹೇಳಿಕೆ ಪಡೆಯುವಂತೆ ಪತ್ರ

chandrashekhara swamiji

ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು (voting rights) ಇರಬಾರದು ಎಂಬ ವಿವಾದಾತ್ಮಕ (Controversy) ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrashekharanatha Swamiji) ನಿನ್ನೆ ಪೊಲೀಸ್ ವಿಚಾರಣೆಗೆ ಗೈರುಹಾಜರಾಗಿದ್ದಾರೆ. ತಾನು ಮಾರಕ ಕ್ಯಾನ್ಸರ್‌ ಕಾಯಿಲೆಯಿಂದ ನರಳುತ್ತಿದ್ದು, ಮಠಕ್ಕೇ ಬಂದು ಹೇಳಿಕೆ ಪಡೆದುಕೊಳ್ಳುವಂತೆ ಅವರು ಪತ್ರ ಬರೆದಿದ್ದಾರೆ.

ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ (Upparapet Police Station) ಎಫ್ಐಆರ್ ದಾಖಲಾಗಿದ್ದು, ನಿನ್ನೆ ಖುದ್ದು ಹಾಜರಿಗೆ ಸ್ವಾಮೀಜಿಗೆ ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಗೈರಾದ ಚಂದ್ರಶೇಖರ ಸ್ವಾಮೀಜಿ, ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಪತ್ರದ ಮೂಲಕ ಉತ್ತರ ನೀಡಿದ್ದಾರೆ. “ನಾನೊಬ್ಬ 81 ವರ್ಷದ ವೃದ್ಧನಾಗಿದ್ದು, ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ವೈದ್ಯರು ಸುಮಾರು ಹತ್ತು ದಿನಗಳ ಕಾಲ ವಿಶ್ರಾಂತಿಯಿಂದಿರಲು ತಿಳಿಸಿದ್ದಾರೆ. ಆದ ಕಾರಣ ಇಂದು ಅಂದರೆ ಡಿಸೆಂಬರ್ 02, 2024ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ” ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಒಂದು ವೇಳೆ ಗುಣಮುಖರಾದರೆ 18/12/24ರಂದು ಮಧ್ಯಾಹ್ನ 3 ಗಂಟೆಗೆ ಹಾಜರಾಗುತ್ತೇನೆ. ಅನಾನುಕೂಲವಾದಲ್ಲಿ ತನಿಖಾಧಿಕಾರಿಗಳೇ ಮಠಕ್ಕೆ ಬಂದು ಹೇಳಿಕೆ ದಾಖಲಿಸಬಹುದು. ಈ ಬಗ್ಗೆ ನಮ್ಮ ಕಡೆಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಪತ್ರದಲ್ಲಿ ಸ್ವಾಮೀಜಿ ವಿವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಸಿದಂತೆ ಬಾಯಿತಪ್ಪಿ ನೀಡಿದ ಹೇಳಿಕೆಗೆ ಈಗಾಗಲೇ ತಾವು ವಿಷಾದ ವ್ಯಕ್ತಪಡಿಸಿದ್ದು, ಸಾಮಾಜಿಕ ಸ್ವಾಸ್ಥ್ಯ ಮತ್ತು ಶಾಂತಿಯ ದೃಷ್ಟಿಯಿಂದ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಮನವಿ ಮಾಡುತ್ತೇನೆ ಎಂದು ಪತ್ರದ ಮೂಲಕ ಪೊಲೀಸ್ ಠಾಣೆಗೆ ಚಂದ್ರಶೇಖರ ಸ್ವಾಮೀಜಿ ಉತ್ತರ ಬರೆದಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ಅವರು, “ಅನಾರೋಗ್ಯದ ಕಾರಣ ವಿಚಾರಣೆಗೆ ಹೋಗಲು ಆಗೋದಿಲ್ಲ. ಇಲ್ಲಿಗೆ ಬಂದು ಏನ್ ಕೇಳ್ತಾರೋ ಕೇಳಲಿ, ಉತ್ತರ ಕೊಡುತ್ತೇನೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದ್ರು ಅವರನ್ನ ಏನೂ ಮಾಡಲಿಲ್ಲ, ಕುಮಾರಸ್ವಾಮಿ ಕೇಂದ್ರ ಸಚಿವರಿದ್ದಾರೆ. ಅವ್ರನ್ನ ಕರಿಯಾ ಅಂತ ಕರೆದ್ರು ಅವ್ರನ್ನು ಏನೂ ಮಾಡಲಿಲ್ಲ. ನಾನು ಕ್ಷಮಾಪಣೆ ಕೇಳಿದ್ರೂ ಎಫ್‌ಐಆರ್ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ನನಗೆ ವಯಸ್ಸಾಗಿದೆ, ಆರೋಗ್ಯ ಸರಿಯಿಲ್ಲ. ಎಂಬತ್ತು ವರ್ಷ ಆದ ಮೇಲೆ ಅವರಿರುವ ಕಡೆಗೇ ಹೋಗಿ ಹೇಳಿಕೆ ಪಡೆಯಬೇಕು ಎಂದು ವಕೀಲರು ತಿಳಿಸಿದ್ದಾರೆ ಎಂದರು.

ಇದನ್ನೂ ಓದಿ: Chandrashekhara Swamiji: ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಹೇಳಿಕೆಗೆ ಚಂದ್ರಶೇಖರ ಸ್ವಾಮೀಜಿ ವಿಷಾದ