ಬೆಂಗಳೂರು: ಹೊಂದಾಣಿಕೆ ರಾಜಕಾರಣದ ವಿಡಿಯೊ(Video) ದಾಖಲೆಗಳಿದ್ದರೆ, ಯಾವುದೇ ಮುಹೂರ್ತ ಮತ್ತು ಘಳಿಗೆಗೆ ಕಾಯದೆ ತಕ್ಷಣ ಬಿಡುಗಡೆ ಮಾಡಲು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ರಲ್ಲಿ(Basanagouda Patil Yatnal) ಮನವಿ ಮಾಡುವೆ. ಜತೆಗೆ ಆಗ್ರಹವನ್ನೂ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸವಾಲು ಎಸೆದಿದ್ದಾರೆ.
ಭಾನುವಾರ(ಡಿ.1) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತರಿಗೆ ಅವಮಾನ ಆಗುವಂತೆ ಯಾರೂ ನಡೆದುಕೊಳ್ಳದಿರಿ. ಪಕ್ಷಕ್ಕೆ ಅಗೌರವ ಆಗುವಂತೆ ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು. ನಮ್ಮ ನಡವಳಿಕೆ, ಹೇಳಿಕೆಗಳು ಸಂಘಟನೆಗೆ ಪೂರಕವಾಗಿ ಇರಬೇಕೇ ಹೊರತು ಸಂಘಟನೆಗೆ ತೊಂದರೆ ಕೊಡುವ ಕೆಲಸವನ್ನು ನಾನೂ ಮಾಡಬಾರದು, ಮತ್ತೊಬ್ಬನೂ ಮಾಡಬಾರದು ಎಂದು ಹೇಳಿದರು.
ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಲಿ ಎಂಬ ಯತ್ನಾಳ್ ಅವರ ಮಾತಿಗೆ, “ಇನ್ನೂ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಲಿ ಅದರ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ರಾಜ್ಯದಲ್ಲಿ ಸಂಘಟನೆ ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಬಗ್ಗೆ ಪಕ್ಷದ ವರಿಷ್ಠರಿಗೆ ಸ್ಪಷ್ಟತೆ ಇದೆ. ಅವರ ಅಕ್ಕಪಕ್ಕ ಇರುವವರಿಗೆ ವಿಜಯೇಂದ್ರನ ಬಗ್ಗೆ ಬೇಸರ ಇಲ್ಲ” ಎಂದರು.
ಇನ್ನು ಯತ್ನಾಳ್ ಅವರ ಬಗ್ಗೆ ನೀವು ಚಾಡಿ ಹೇಳುತ್ತೀರೆಂದು ಅವರು ಆರೋಪಿಸಿದ್ದಾರೆ ಎಂಬ ಮಾಧ್ಯಮದವರ ಮಾತಿಗೆ, “ಚಾಡಿ ಹೇಳುವುದಾಗಲೀ, ಯತ್ನಾಳರನ್ನು ಪಕ್ಷದಿಂದ ಹೊರಕ್ಕೆ ಕಳಿಸಬೇಕೆಂದೂ ಒತ್ತಾಯ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದ ವಿಜಯೇಂದ್ರ ಅವರು, ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ನಾವು ಆಡಳಿತ ಪಕ್ಷವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಹೋರಾಟಗಳಲ್ಲಿ ಮುಖ್ಯಮಂತ್ರಿಗಳನ್ನು ಕಟ್ಟಿ ಹಾಕುವ ಕೆಲಸವನ್ನೂ ಯಶಸ್ವಿಯಾಗಿ ಮಾಡಿದ್ದೇವೆ. ರಾಜ್ಯದ ಜನರು ಭ್ರಷ್ಟ ಕಾಂಗ್ರೆಸ್ ಸರ್ಕಾರ ಎನ್ನುತ್ತಿದ್ದಾರೆ. ಇದರ ನಡುವೆ, ನಮ್ಮ ಕೆಲವು ಮುಖಂಡರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ರಾಜ್ಯ ಕಂಡ ಧೀಮಂತ ನಾಯಕ, ರೈತ ಮುಂದಾಳು ಯಡಿಯೂರಪ್ಪರ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ” ಎಂದು ತರಾಟೆಗೆ ತೆಗೆದುಕೊಂಡರು.
“ಇನ್ನೂ ಕೆಲವರು ಯತ್ನಾಳರ ಹೆಗಲ ಮೇಲೆ ಗನ್ ಇಟ್ಟು ಗುಂಡು ಹಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಆಡಳಿತ ಪಕ್ಷವನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ” ಎಂದು ತಿಳಿಸಿದರು.
ದಿಲ್ಲಿಯಲ್ಲಿ(Delhi) ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ರಾಜ್ಯದ ಮೂರು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹಾಗೂ ರಾಜ್ಯದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಅವರ ಗಮನಕ್ಕೆ ತಂದಿದ್ದೇನೆ. ಕೆಲವರು ಅವರ ನಡವಳಿಕೆಯಿಂದ ಎತ್ತರಕ್ಕೆ ಬೆಳೆಯುವ ಭ್ರಮೆಯಲ್ಲಿದ್ದರೆ, ಅದು ಖಂಡಿತ ಸಾಧ್ಯವಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರು ಇದನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಭ್ರಮೆಯಿಂದ ಹೊರಬರಬೇಕು. ಪಕ್ಷದ ಸಂಘಟನಾ ಪರ್ವ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಘಟನೆ ಜತೆಗೆ ಕೈಜೋಡಿಸಬೇಕು ಎಂದು ಅವರ ವಿರುದ್ಧ ಹೇಳಿಕೆ ನೀಡುವ ಬಣಕ್ಕೆ ಜಾಡಿಸುತ್ತಲೇ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ:ನಾನು ಯಾರನ್ನೂ ಭೇಟಿಯಾಗಿಲ್ಲ, ಯಾರ ಸಮಯ ಕೇಳಲಿಲ್ಲ: ಶಾಸಕ ಯತ್ನಾಳ್