Saturday, 10th May 2025

BS Yediyurappa: ಪೋಕ್ಸೊ ಕೇಸ್‌ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜ.10ಕ್ಕೆ ಮುಂದೂಡಿಕೆ

B S Yediyurappa

ಬೆಂಗಳೂರು: ಪೋಕ್ಸೊ ಪ್ರಕರಣ ರದ್ದುಪಡಿಸುವಂತೆ ಕೋರಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (BS Yediyurappa) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್‌, ವಕೀಲರ ವಾದ ಆಲಿಸಿದ ನಂತರ ಮುಂದಿನ ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿದೆ. ಇದೇ ವೇಳೆ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ವಿವೇಚನೆ ಬಳಸಲಾಗಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.

ಪೋಕ್ಸೊ ಪ್ರಕರಣ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿಜೆಪಿಯ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ, ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ಅರುಣ ವೈ.ಎಂ, ರುದ್ರೇಶ ಮರಳುಸಿದ್ದಯ್ಯ ಮತ್ತು ಜಿ.ಮರಿಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿದೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, “ಸತ್ಯ ಬಯಲು ಮಾಡಲು ತನಿಖೆ ನಡೆಸಲಾಗುತ್ತದೆ. ತನಿಖೆಯು ಪಕ್ಷಪಾತಿಯಾಗಿರಬಾರದು. ನ್ಯಾಯಯುತ ಮತ್ತು ಕಾನೂನಿನ ಅನ್ವಯ ನಡೆಯಬೇಕು” ಎಂದರು. ಸಂಜ್ಞೇ ಪರಿಗಣಿಸುವ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯವು ತನಿಖಾಧಿಕಾರಿಯ ಅಭಿಪ್ರಾಯ ಒಪ್ಪಲಾಗದು. ಅಂತೆಯೇ ಪೊಲೀಸರು ಬಿ ವರದಿ ಸಲ್ಲಿಸಿದ ಪ್ರಕರಣಕ್ಕೂ ಇದು ಅನ್ವಯವಾಗುತ್ತದೆ. ತನಿಖಾಧಿಕಾರಿ ಸಾಕ್ಷಿ ಸಂಗ್ರಹಿಸಲಿದ್ದು, ಅವರು ಸಾಕ್ಷಿಯನ್ನು ಪ್ರತ್ಯೇಕಿಸಲಾಗದು. ಸಾಕ್ಷಿಯು ಒಪ್ಪಿತವೇ ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ” ಎಂದರು.

“ದೂರು ದಾಖಲಿಸುವುದಕ್ಕೂ ಮುನ್ನ ದೂರುದಾರೆ (ಸಂತ್ರಸ್ತೆಯ ತಾಯಿ ಈಗ ಸಾವನ್ನಪ್ಪಿದ್ದಾರೆ) ಮತ್ತು ಸಂತ್ರಸ್ತೆಯು ಹಲವು ಬಾರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ” ಎಂದರು.

ಒಂದು ಹಂತದಲ್ಲಿ ಪೀಠವು ನಾಗೇಶ್‌ ಅವರಿಗೆ “ನೀವು ಉಲ್ಲೇಖಿಸುತ್ತಿರುವ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಬೇಕು ಎಂದಾದರೆ ಸಂತ್ರಸ್ತೆಯ ಹೇಳಿಕೆಯನ್ನೂ ಪರಿಗಣಿಸಬೇಕಾಗುತ್ತದೆ. ಇಡೀ ಘಟನೆಯನ್ನು ಸಂತ್ರಸ್ತೆ ವಿವರಿಸಿದ್ದಾರೆ. ಇದು ಹೇಳಿಕೆ ವರ್ಸಸ್‌ ಹೇಳಿಕೆ ಆಗುವುದಿಲ್ಲವೇ, ಅದು ವಿಚಾರಣೆ ನಡೆಯುವುದು ಸೂಕ್ತವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಈ ಹಂತದಲ್ಲಿ ಹಿರಿಯ ವಕೀಲರಾದ ನಾಗೇಶ್‌ ಅವರು ವಾದ ಮಂಡನೆಗೆ ಇನ್ನೂ ಒಂದು ತಾಸು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು.

ಏನಿದು ಪ್ರಕರಣ?
ಸಹಾಯ ಕೋರಿ ಮಹಿಳೆಯೊಬ್ಬರು ಪುತ್ರಿಯೊಂದಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಬಂದಿದ್ದ ವೇಳೆ ಬಾಲಕಿಗೆ ಬಿ.ಎಸ್‌.ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬಾಲಕಿಯ ತಾಯಿ ಕಳೆದ ವರ್ಷ ಮಾ.14 ಸದಾಶಿನಗರ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸರು ಯಡಿಯೂರಪ್ಪ ಅವರ ವಿರುದ್ಧ ಪೋಕೋ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಇದೀಗ ನ್ಯಾಯಾಲಯದಲ್ಲಿದೆ.

ಈ ಸುದ್ದಿಯನ್ನೂ ಓದಿ | R Ashok: ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಆರ್‌. ಅಶೋಕ್‌ ಆರೋಪ

Leave a Reply

Your email address will not be published. Required fields are marked *