ಬೆಂಗಳೂರು: ಅನರ್ಹ ರೇಷನ್ ಕಾರ್ಡ್ಗಳನ್ನು ರದ್ದು ಮಾಡುವುದಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ತಿಳಿಸಿತ್ತು. ಈ ಮಧ್ಯೆ ಅರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆರೋಪಿಸಿ ಅನೇಕ ಫಲಾನುಭವಿಗಳು ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಯಾರೊಬ್ಬರ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಆದೇಶಿಸಿದ್ದಾರೆ.
ಇನ್ನು ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿತ್ತು. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಅನೇಕ ಅರ್ಹರ ಪಡಿತರ ಚೀಟಿ ರದ್ದು ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಬಿಜೆಪಿ ನಾಯಕರು ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪಡಿತರ ಚೀಟಿ ರದ್ದು ಮಾಡದಂತೆ ಸಿಎಂ ಆದೇಶ ಹೊರಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | BPL Cards: ಬಿಪಿಎಲ್ ಕಾರ್ಡ್ ರದ್ದತಿಗೂ ಮುನ್ನ ಪರಿಶೀಲಿಸಿ: ಅಧಿಕಾರಿಗಳಿಗೆ ಸಂಸದ ಕಾರಜೋಳ ಸೂಚನೆ
ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ
ಅನರ್ಹ ರೇಷನ್ ಕಾರ್ಡ್ಗಳನ್ನು ರದ್ದು ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಬಾಗಲಕೋಟೆಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಅನರ್ಹರ ಬಿಪಿಎಲ್ ಕಾರ್ಡ್ಗಳನ್ನು (BPL Card) ಮಾತ್ರ ವಾಪಸ್ ಪಡೆಯಲಾಗುತ್ತದೆ, ಅರ್ಹರ ಕಾರ್ಡ್ಗಳಿಗೆ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ಆಹಾರ ಇಲಾಖೆ ಪರಿಶೀಲಿಸುತ್ತಿದ್ದು, ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಎಂದು ಸ್ಪಷ್ಟಪಡಿಸಿದ್ದರು.
ಬಿಪಿಎಲ್ ಕಾರ್ಡ್ಗಳು ರದ್ದಾಗುತ್ತಿವೆ ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಪತ್ರಕರ್ತರು ಸರಿಯಾಗಿ ತಿಳಿದುಕೊಂಡು ಬರಬೇಕು. ಅನರ್ಹರ ಕಾರ್ಡ್ಗಳನ್ನು ವಾಪಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ.
ಆದಾಯ ತೆರಿಗೆ ಪಾವತಿಸುವವರಿಗೂ, ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ ಎಂದು ಮರು ಪ್ರಶ್ನಿಸಿದ ಸಿಎಂ, ಯಾವ ಕಾರ್ಡ್ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು ಎಂದು ಹೇಳಿದ್ದರು.