ಬೆಂಗಳೂರು: ಬಸ್ ಟಿಕೆಟ್ ದರ ಶೇ.15 ಏರಿಕೆ ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ (BJP Protest) ನಡೆಸಿದರು. ಪ್ರಯಾಣಿಕರಿಗೆ ಹೂವು ನೀಡುವ ಮೂಲಕ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನೆಗೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ವಿಪಕ್ಷ ನಾಯಕ ಆರ್ .ಅಶೋಕ್ (R Ashok) ಅವರು ಗರಂ ಆಗಿರುವ ಘಟನೆ ನಡೆದಿದೆ.
ನನ್ನನ್ನು ವಶಕ್ಕೆ ಪಡೆದರೆ ಕೋರ್ಟ್ಗೆ ಹೋಗುವೆ. ನಾವು ಪ್ರತಿಭಟನೆ ಮಾಡಲು ಬಂದಿಲ್ಲ. ಪ್ರಯಾಣಿಕರಿಗೆ ಹೂವು ಕೊಡಲು ಬಂದಿದ್ದೆನೆ. ಹೊಡಿಯುತ್ತೀಯಾ, ಹೊಡಿ. ಏಯ್ ನಾನು ವಿರೋಧ ಪಕ್ಷದ ನಾಯಕ, ನನ್ನನ್ನು ಮುಟ್ಟಿದರೆ ಹುಷಾರ್. ಜನ್ಮದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೆ ಮಾಡುವೆ ಎಂದು ಪೊಲೀಸ್ ಅಧಿಕಾರಿಯೊಬ್ಬರಿಗೆ ಎಚ್ಚರಿಕೆ ನೀಡಿದರು.
ಒಂದು ಹಂತದಲ್ಲಿ ಪೊಲೀಸರು ಬಂಧಿಸಲು ಮುಂದಾದಾಗ ಸಹನೆ ಕಳೆದುಕೊಂಡ ಅಶೋಕ್ ಅವರು, ತಾಕತ್ತಿದ್ದರೆ ನಮನ್ನು ಬಂಧಿಸಿ, ನಾನು ಕೂಡ ರಾಜ್ಯದ ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಾವೇನೂ ಪ್ರಯಾಣಿಕರಿಗೆ ಅಡ್ಡಿಪಡಿಸಿಲ್ಲ ಎಂದು ಪ್ರತಿಭಟನೆಯನ್ನು ಸಮರ್ಥನೆ ಮಾಡಿಕೊಂಡರು. ನೀವು ಮುಟ್ಟಿ ನೋಡಿ. ಇಲ್ಲಿ ಯಾರಿಗೂ ತೊಂದರೆ ಕೊಡುವಂತಿಲ್ಲ. ಪ್ರತಿಭಟನೆ ನಡೆಸುವುದು ನಮ ಹಕ್ಕು. ಆದರೆ ಇಲ್ಲಿ ನಾವು ಪ್ರತಿಭಟನೆ ಮಾಡುತ್ತಿಲ್ಲ. ಜನರಿಗೆ ಹೂವು ನೀಡುತ್ತಿದ್ದೇವೆ. ಅದಕ್ಕೂ ಅಡ್ಡಿಪಡಿಸಿದರೆ ನಿಮ್ಮ ಮೇಲೆ ಕೇಸ್ ಹಾಕಿ, ಕೋರ್ಟ್‌ನಲ್ಲಿ ನಿಲ್ಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಸಿದರು.
ನೀವೇನು ಇಲ್ಲಿಯೇ ಇರುವುದಿಲ್ಲ. ನಾವು ಅಧಿಕಾರಕ್ಕೆ ಬಂದರೆ ಸುಮನೆ ಬಿಡುವುದಿಲ್ಲ. ನಮಗೂ ರಾಜಕಾರಣ ಮಾಡಲು ಬರುತ್ತದೆ. ಪ್ರತಿಭಟನೆ ನಡೆಸುವುದು ನಮ ಹಕ್ಕು. ನಾವು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ಕೊಟ್ಟಿದ್ದೇವೆ. ಈಗ ಯಾವ ನಿರ್ದೇಶನದ ಮೇರೆಗೆ ಅಡ್ಡಿಪಡಿಸುತ್ತಿದ್ದೀರಿ ಎಂದು ಅಶೋಕ್ ತರಾಟೆಗೆ ತೆಗೆದುಕೊಂಡರು.
ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಸೇರಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಬಿಜೆಪಿ ಮುಖಂಡರ ನೇತೃತ್ವದಲ್ಲಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಹಮಿಕೊಳ್ಳಲಾಗಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮುಖವಾಡ ಧರಿಸಿದ ಕೆಲ ಬಿಜೆಪಿ ಕಾರ್ಯಕರ್ತರು, ಪ್ರಯಾಣಿಕರಿಗೆ ಹೂವು ನೀಡಿ, ಕಾಲು ಹಿಡಿದು ಕ್ಷಮೆ ಕೇಳಿದರು. ಹೀಗಾಗಿ ಪ್ರತಿಭಟನೆಗೆ ಪೊಲೀಸರು ಅಡ್ಡಿಪಡಿಸಿ ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಹೀಗಾಗಿ ವೇಳೆ ಪೊಲೀಸರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲುವವರೆಗೂ ವಿಶೇಷ ಪ್ರಾರ್ಥನೆ; ಕೋಲ್ಕತಾ ಇಸ್ಕಾನ್ ಹೇಳಿಕೆ
ಬಸ್ ದರ ಏರಿಕೆಯ ಉಡುಗೊರೆ ನೀಡಿದ ಸಿಎಂ
ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಆರ್.ಅಶೋಕ್ ಮಾತನಾಡಿ, ಕರ್ನಾಟಕದ 7 ಕೋಟಿ ಜನರು ಹೊಸ ವರ್ಷಕ್ಕೆ ಉಡುಗೊರೆಗೆ ಕಾಯುತ್ತಿದ್ದೆವು. ಮೋದಿಯವರು ಹೊಸ ವರ್ಷಕ್ಕೆ ನಿಜವಾದ ಗಿಫ್ಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ, ದಿ ಗ್ರೇಟ್ 14 ಬಜೆಟ್ ಚಾಂಪಿಯನ್ ಸಿದ್ದರಾಮಯ್ಯನವರು ಬಸ್ ದರ ಏರಿಕೆಯ ಉಡುಗೊರೆ ನೀಡಿದ್ದಾರೆ ಎಂದು ಅಶೋಕ್ ಟೀಕಿಸಿದರು.
ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿದಿನ ತೆರಿಗೆ ಹೆಚ್ಚಳ, ಟ್ಯಾಕ್ಸ್ ಏರಿಕೆಯದೇ ಸಾಧನೆ ಮಾಡುತ್ತಿದೆ. ರಾಜ್ಯ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿದೆ. ಆದರೆ, ಬೆಲೆ ಏರಿಕೆ ನಿರಂತರವಾಗಿ ಸಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.